ರಾಮಕುಂಜ: ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿ ನೇರೆಂಕಿಗುತ್ತು, ಹಳೆನೇರೆಂಕಿ ಇದರ ಆಶ್ರಯದಲ್ಲಿ ದೈವಾರಾಧನೆಯ ಬಗ್ಗೆ ಒಂದು ದಿನದ ಕಾರ್ಯಾಗಾರ ಆ.24ರಂದು ಹಳೆನೇರೆಂಕಿ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರರಾದ ಎಸ್.ಕೆ.ಆನಂದ ಹಾಗೂ ರೇಖಾ ಆನಂದ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಎಸ್.ಕೆ.ಆನಂದ್ ಅವರು ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಕಡಬ ಉಪತಹಶೀಲ್ದಾರ್ ಗೋಪಾಲ ಅವರು ಮಾತನಾಡಿ, ತುಳುನಾಡಿನ ಪರಂಪರೆಯಲ್ಲಿ ದೈವರಾದನೆ ಪ್ರಮುಖ ಘಟ್ಟವಾಗಿದೆ. ದೈವಾರಾಧನೆ ಪಾರಂಪರಿಕ ಜಾನಪದ ಆರಾಧನೆಯಾಗಿದೆ. ಎಲ್ಲಿಯೂ ಬಗೆಹರಿಯದ ಸಮಸ್ಯೆಗಳಿಗೆ ದೈವ ತೀರ್ಪು ನೀಡಿ ನ್ಯಾಯ ಒದಗಿಸಿದ ಹಲವು ಉದಾಹರಣೆಗಳಿವೆ. ದೈವದ ಮೇಲೆ ನಂಬಿಕೆ, ಶ್ರದ್ಧೆ, ಭಕ್ತಿ ಸರಿಯಾದ ರೀತಿಯಲ್ಲಿ ಆಗದೆ ಇರುವುದರಿಂದಲೇ ಅಪನಂಬಿಕೆ ಹುಟ್ಟುತ್ತಿದೆ ಎಂದು ಹೇಳಿದರು.

ಹಳೆನೇರೆಂಕಿ ನೇರೆಂಕಿಗುತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿ ಮತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೊತೆ ಕಾರ್ಯದರ್ಶಿ ಶ್ಯಾಮ್‌ಪ್ರಸಾದ್ ಕಾಯಾರ ಸ್ವಾಗತಿಸಿದರು. ಪುರುಷೋತ್ತಮ ಬರೆಂಬಾಡಿ ನಿರೂಪಿಸಿದರು.
ಕಾರ್ಯಾಗಾರ:
ಉದ್ಘಾಟನಾ ಸಮಾರಂಭದ ಬಳಿಕ ದೈವಾರಾಧನೆಯ ಕಾರ್ಯಾಗಾರ ನಡೆಯಿತು. ದೈವದ ಮಧ್ಯಸ್ಥರಾದ ಶಶಾಂಕ ನೆಲ್ಲಿತ್ತಾಯ, ಹಿರಿಯ ದಳಿಯದವರಾದ ಸುಂದರ ಮಡಿವಾಳ, ದೈವನರ್ತಕರಾದ ನೇಮು ಪರವ ಮಾಡಾವು, ಮುತ್ತ ಅಜಲ ಕಡಬ, ಕಿಟ್ಟು ಅಜಲ ಕಲ್ಲುಗುಡ್ಡೆ, ವಿಶ್ವನಾಥ ಪರವ ಹಳೆನೇರೆಂಕಿ, ಓಬಯ್ಯ ಪರವ ಹಳೆನೇರೆಂಕಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.