ರಾಮಕುಂಜ: ನಿರ್ಮಾಣ ಹಂತದಲ್ಲಿರುವ ಕಡಬ ತಾಲೂಕಿನ ಕೊಯಿಲ ಪಶುವೈದ್ಯಕೀಯ ಕಾಲೇಜಿಗೆ ಕಾಲೇಜಿನ ಮುಖ್ಯಸ್ಥರಾಗಿ ನೇಮಕಗೊಂಡಿರುವ ಡಾ.ಶಿವಕುಮಾರ್ ಅವರು ಆ.25ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು, ಕಾಲೇಜಿನ ಮೂಲಭೂತ ಸೌಕರ್ಯಕ್ಕಾಗಿ 23 ಕೋಟಿ ರೂ. ಬೇಡಿಕೆ ಸಲ್ಲಿಸಲಾಗಿದೆ. ಕಾಲೇಜಿಗೆ ಸಂಪರ್ಕ ರಸ್ತೆ, ವಿದ್ಯುತ್ ಸೌಲಭ್ಯ, ಹವಾ ನಿಯಂತ್ರಿತ ತರಗತಿ ಕೊಠಡಿ, ನೀರಿನ ವ್ಯವಸ್ಥೆಗೆ ತುರ್ತು ಬೇಡಿಕೆ ಇಡಲಾಗಿದೆ. ಪಶು ವೈದ್ಯಕೀಯ ತರಗತಿ ಪ್ರಾರಂಭಿಸಲು 25 ಮಂದಿ ವೈದ್ಯಕೀಯ ಶಿಕ್ಷಕರನ್ನು ಹಾಗೂ 32 ಮಂದಿ ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಈಗಾಗಲೇ ಅನುಮೋದನೆ ದೊರೆತಿದೆ. ಪೀಠೋಪಕರಣಗಳು, ಪ್ರಯೋಗಶಾಲೆ ಸಹಿತ ಮೂಲಭೂತ ವ್ಯವಸ್ಥೆ, ಚಾಲ್ತಿಯಲ್ಲಿರುವ ಪಶು ಸಂಗೋಪನಾ ಇಲಾಖೆಯ ದನಗಳು ಇರುವ ಶೆಡ್ ಅವಶ್ಯಕತೆಯ ಬೇಡಿಕೆ ಇಡಲಾಗಿದೆ. ಪ್ರಾರಂಭದಲ್ಲಿ ವೈದ್ಯಕೀಯ ಆಸ್ಪತ್ರೆ ಪ್ರಾರಂಭಿಸುವ ಸದುದ್ದೇಶವನ್ನು ಹೊಂದಿದ್ದೇವೆ. ಈ ವಿಚಾರವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸಂಪರ್ಕಿಸಿ ಮುಂದಿನ ಯೋಜನೆಗಳ ಬಗ್ಗೆ ಸಮಾಲೋಚನೆ ಮಾಡಬೇಕಾಗಿದೆ ಎಂದು ಡಾ. ಶಿವಕುಮಾರ್ ಮಾಹಿತಿ ನೀಡಿದರು.
ಈ ವೇಳೆ ಲಕ್ಷ್ಮೀನಾರಾಯಣ ರಾವ್ ಆತೂರು, ದೇವಿಪ್ರಸಾದ್ ನೀರಾಜೆ, ಬಶೀರ್ ಆತೂರು, ಜುನೈದ್ ಕೆಮ್ಮಾರ ಉಪಸ್ಥಿತರಿದ್ದರು.