ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಬುಧವಾರ ಗಣೇಶೋತ್ಸವ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಸ್ಥಳಶುದ್ಧಿ, ವಿಗ್ರಹ ಪ್ರತಿಷ್ಠಾಪನಾ ಕಾರ್ಯ ನಡೆದು, ಗಣಪತಿ ಹವನವೇ ಮೊದಲಾದ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು.

ವಿದ್ಯಾರ್ಥಿಗಳಿಂದ ಭಜನೆ, ನಾಟ್ಯವೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿ ಮಧ್ಯಾಹ್ನ ನಂತರ ಶ್ರೀ ಮಹಾಗಣಪತಿ ವಿಗ್ರಹದ ವಿಸರ್ಜನಾ ಕಾರ್ಯಕ್ರಮ ನಡೆಯಿತು. ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳೂ ನೆರವೇರಿದವು.
ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ವಿವಿಧ ಅಂಬಿಕಾ ಸಂಸ್ಥೆಗಳ ಪ್ರಾಚಾರ್ಯರು, ಬೋಧಕ – ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದಲೂ ವಿಗ್ರಹ ರಚನೆ: ಈ ಬಾರಿಯ ಅಂಬಿಕಾ ಗಣೇಶೋತ್ಸವದ ಪ್ರಮುಖ ಆಕರ್ಷಣೆ ವಿದ್ಯಾರ್ಥಿಗಳಿಂದ ರೂಪುಗೊಂಡ ಗಣೇಶ ವಿಗ್ರಹಗಳು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಒಂದು ವಿಗ್ರಹ ರೂಪುಗೊಂಡಿದ್ದರೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲೇ ಕೆಲವರು ಸ್ವತಃ ಗಣೇಶ ವಿಗ್ರಹಗಳನ್ನು ರೂಪುಗೊಳಿಸಿದ್ದು ವಿಶೇಷವೆನಿಸಿತು. ಸುಮಾರು ಆರು ಗಣೇಶ ವಿಗ್ರಹಗಳು ಮುಖ್ಯ ವಿಗ್ರಹದ ಪಕ್ಕದಲ್ಲಿದ್ದು ಪೂಜೆಗೆ ಭಾಜನವಾದವು.
ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಪ್ರತ್ಯುಷ್ ಹಾಗೂ ನಿದರ್ಶನ್ ತಂಡ, ಸುಕೇಶ್ ವಿಹಾನ್ ಹಾಗೂ ಲೋಹಿತ್ ತಂಡ, ಹಾಗೆಯೇ ದ್ವಿತೀಯ ಪಿಯುಸಿಯ ರಿತ್ವಿಶ್, ಭೂಷಣ್, ಚರಣ್ ಹಾಗೂ ಅಶ್ವಿನ್ ತಂಡ, ದ್ವಿತೀಯ ಪಿಯುಸಿಯ ತನ್ವಿ ಹಾಗೂ ಇಶಾನಿ ತಂಡ, ದ್ವಿತೀಯ ಪಿಯುಸಿಯ ದಿಶಾ, ಗಾನವಿ ಹಾಗೂ ಭವಿಷ್ಯ ತಂಡ, ಹಾಗೂ ಹರ್ಷಿತಾ ಹಾಗೂ ರಕ್ಷಾ ತಂಡದವರು ಗಣೇಶ ವಿಗ್ರಹವನ್ನು ರೂಪಿಸಿದರು. ಚೌತಿಯಂದು ಬೆಳಗ್ಗೆಯೇ ರೂಪಿಸಿ ಗಣೇಶ ವಿಗ್ರಹಗಳನ್ನು ಸೊಗಸಾಗಿ ರೂಪಿಸಿದ ವಿದ್ಯಾರ್ಥಿಗಳ ಕರಕುಶಲತೆ ಮೆಚ್ಚುಗೆಗೆ ಪಾತ್ರವಾಯಿತು.