ರಾಜಕೀಯ ಬದಿಗಿಟ್ಟು ಧರ್ಮದ ಉನ್ನತಿ ಮಾಡೋಣ – ಅಶೋಕ್ ಕುಮಾರ್ ರೈ
ಕೃಷ್ಣ, ರಾಮನ ಸ್ವರೂಪದಲ್ಲಿ ಸಂಘಟನೆಗಳು ಸಮಾಜಕ್ಕೆ ಶಕ್ತಿ ತುಂಬುತ್ತಿವೆ – ಡಾ| ರವೀಶ ಪಡುಮಲೆ
ಬೆಟ್ಟಂಪಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಇದರ ಆಶ್ರಯದಲ್ಲಿ 40ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.27ರಂದು ನಡೆಯಿತು. ಬೆಳಿಗ್ಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಟಾಪನೆ ನಡೆದು, ಪ್ರಗತಿಪರ ಕೃಷಿಕ ಮುತ್ತಣ್ಣ ಶೆಟ್ಟಿ ರೇಖಾ ನಿಲಯ ಚೆಲ್ಯಡ್ಕ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಓಂ ಧ್ವಜ ವಂದನೆ ಮಾಡಿ, ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ನಂತರ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಸೇವೆ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮ
ಬೆಳಿಗ್ಗೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ದೈವನರ್ತಕ, ಸಿವಿಲ್ ಇಂಜಿನಿಯರ್ ಡಾ| ರವೀಶ್ ಪಡುಮಲೆ ಯವರು ಮಾತನಾಡಿ ʻಪರಕೀಯರಿಂದ ನಮ್ಮ ಅನಾದಿಕಾಲದ ಧಾರ್ಮಿಕ ಕಟ್ಟುಪಾಡುಗಳು ಕಸಿದುಕೊಂಡು ವಿದೇಶಿ ಸಂಸ್ಕೃತಿ ಆಚಾರ ವಿಚಾರಗಳು ನಮ್ಮಲ್ಲಿ ಪ್ರವೇಶಿಸಿದವು. ಆದರೂ ನೂರಾರು ವರ್ಷಗಳ ಕಾಲ ಪರಕೀಯರಿದ್ದರೂ ಭಾರತದ ಧರ್ಮ ಪರಂಪರೆಯನ್ನು ನಾಶ ಮಾಡಲು ಸಾಧ್ಯವಾಗಿಲ್ಲ. ನಮ್ಮ ಭಾವನೆಗಳ ಮೇಲೆ ದಾಳಿ ಮಾಡಿದಾಗ ಒಂದಾಗಿದ್ದ ನಾವು ವಿಭಜನೆಗೊಂಡೆವು. ಇಬ್ಬಾಗವಾದ ನಮ್ಮನ್ನು ಮತ್ತೆ ಒಂದಾಗಿಸಿ ಸ್ವಾತಂತ್ರ್ಯದ ಹೋರಾಟಕ್ಕಾಗಿ ಆರಂಭಗೊಂಡ ಗಣೇಶೋತ್ಸವ ಇಂದು ತಾಲೂಕುಮಟ್ಟದಲ್ಲಿ ಸಾವಿರಾರು ಗಣೇಶೋತ್ಸವ ನಡೆಯುತ್ತಿರುವುದು ನಮ್ಮ ಹೆಮ್ಮೆ. ಧರ್ಮಕ್ಕೆ ಏಟು ಬಿದ್ದಾಗ ಅದರ ರಕ್ಷಣೆಗೆ ಕೃಷ್ಣನ ಸ್ವರೂಪದಲ್ಲಿ ನಮ್ಮ ಸಂಘಟನೆಗಳು ಶಕ್ತಿಗಳು ಸಮಾಜಕ್ಕೆ ಬಲ ನೀಡುತ್ತಿವೆ. ಸಂಘಟನೆಗಳಿಗೆ ಶಕ್ತಿ ನೀಡುವುದು ಇಂತಹ ಸಂಸ್ಕೃತಿ ಮತ್ತು ಆಚರಣೆಗಳು. ನಮ್ಮ ಆಚರಣೆಗಳನ್ನು ಆಚರಿಸಲು ಇನ್ನೊಬ್ಬನ ಸುತ್ತೋಲೆ ಬೇಕಾಗಿಲ್ಲ. ಆದರೆ ಇಂದಿನ ಸರಕಾರ ಡಿಜೆ ನಿಷೇಧಿಸಿರುವುದು ನಮಗೆ ಹೆಮ್ಮೆ ವಿಚಾರ ಎಂದ ಅವರು ಮೊಬೈಲ್, ಸೋಷಿಯಲ್ ಮೀಡಿಯಾಗಳಿಂದಾಗಿ ನಮ್ಮ ಮಕ್ಕಳು ಸಂಸ್ಕೃತಿ ಆಚಾರ ವಿಚಾರಗಳಿಂದ ವಿಮುಖರಾಗುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ನಾವೇ ಆಗಿದ್ದೇವೆ. ಈ ಬಗ್ಗೆ ಎಚ್ಚೆತ್ತುಕೊಳ್ಳೋಣ. ಜಾತೀಯತೆ ಬಿಟ್ಟು, ಪಕ್ಷಾತೀತವಾಗಿ, ಮೇಲು ಕೀಳು ಇಲ್ಲದೇ ಪ್ರತಿಯೊಬ್ಬರೂ ಒಗ್ಗಟ್ಟಿನಲ್ಲಿ ನಡೆಸುತ್ತಿರುವ ಬೆಟ್ಟಂಪಾಡಿಯ ಗಣೇಶೋತ್ಸವ ಹತ್ತೂರಿನಲ್ಲಿ ಪ್ರಸಿದ್ಧಿಗೊಂಡಿದೆʼ ಎಂದರು.
ಭಾಷಣ ಮಾಡುವವರು ಧರ್ಮಕ್ಕೆ ಕೊಟ್ಟ ಕೊಡುಗೆ ಏನು ? – ಅಶೋಕ್ ರೈ
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರೂ ಆದ ಅಶೋಕ್ ಕುಮಾರ್ ರೈ ಯವರು ʻಬೆಟ್ಟಂಪಾಡಿ ನನಗೆ ಹತ್ತಿರ ಸಂಬಂಧ. ಬೆಟ್ಟಂಪಾಡಿಯ ಬ್ರಹ್ಮಕಲಶದಿಂದ, ದೇವರ ಆಶೀರ್ವಾದದಿಂದ ಅಶೋಕ್ ರೈ, ಅಶೋಕಣ್ಣ, ಎಂಎಲ್ಎ ಅಶೋಕ್ ರೈ ಆದರು. ದೇವರ ಪೂಜೆ ಸೇವೆಯಿಂದಾಗಿ ಋಣ ಸಂಬಂಧ ಕೂಡಿಬರುತ್ತದೆ. ಧರ್ಮದ ನಾಯಕರೆಂದೆನಿಸಿಕೊಂಡ ರಾಜಕೀಯ ನಾಯಕರು ಧರ್ಮಕ್ಕೆ ಕೊಟ್ಟ ಕೊಡುಗೆ ಏನು? ಎಂದು ಆಲೋಚಿಸಬೇಕು. ಹಿಂದು ಧರ್ಮದ ಅನೇಕ ಮಂದಿರ, ದೇವಸ್ಥಾನಗಳು ಸರಕಾರದ ಜಮೀನಿನಿಂದ ಪರಿವರ್ತಿಸುವ ಕೆಲಸ ನಮ್ಮ ಸರಕಾರದಿಂದ ಮಾಡಲಿದ್ದೇವೆ. ದೇವಸ್ಥಾನದ ಅಭಿವೃದ್ಧಿ ಯಾಗಬೇಕೆಂಬ ಯೋಚನೆ ನಮ್ಮಲ್ಲಿರುವುದೇ ನಮ್ಮ ಧರ್ಮದ ಉದ್ಧಾರಕ್ಕೆ ನಮ್ಮ ಕೊಡುಗೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿ ಮಾಡಲು ಹೊರಟಿದ್ದೇವೆ. ಭಕ್ತರ ಹಣವನ್ನು ದುರ್ಬಳಕೆ ಮಾಡುವುದು, ಪೋಲು ಮಾಡಬಾರದು. ಬದಲಾಗಿ ರಾಜಕೀಯ ಬದಿಗಿಟ್ಟು ಧರ್ಮದ ಉನ್ನತಿಗಾಗಿ ದೇವಸ್ಥಾನದ ಅಭಿವೃದ್ಧಿ ಕೈಗೊಳ್ಳಬೇಕೆಂಬುದು ನಮ್ಮ ಇರಾದೆʼ ಎಂದರು.
ವೈಶಿಷ್ಟ್ಯಪೂರ್ಣ ಗಣೇಶೋತ್ಸವ – ಮನಮೋಹನ ರೈ
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ರವರು ʻಬೆಟ್ಟಂಪಾಡಿಯಲ್ಲಿ ವೈಶಿಷ್ಟ್ಯಪೂರ್ಣ ಗಣೇಶೋತ್ಸವ ನಮ್ಮದು. ಇಲ್ಲಿನ ಕಾರ್ಯಕರ್ತರ ಹುರುಪು ಉತ್ಸಾಹ ಬಹಳ ವಿಶೇಷವಾದುದು. ಸಮಾಜಕ್ಕೆ ಉತ್ತಮ ಸಾಮರಸ್ಯ ಸಂಸ್ಕಾರದ ಸಂದೇಶವನ್ನು ಅಚ್ಚುಕಟ್ಟಾಗಿ ಕೊಡುತ್ತಾ ಬಂದಿದ್ದೇವೆ. ಸಮಾಜದ ಬೇರೆ ಬೇರೆ ಕ್ಷೇತ್ರದ ಗಣ್ಯರನ್ನು ಕರೆಸಿಕೊಂಡು ಅವರ ಆದರ್ಶಮಯ ಮಾತುಗಳು ನಮ್ಮೂರಿನ ಜನತೆಗೆ ಪ್ರೇರಣೆಯಾಗಲಿ ಎಂಬುದು ನಮ್ಮ ಉದ್ದೇಶ. ವರ್ಷದಿಂದ ವರ್ಷಕ್ಕೆ ನಮ್ಮ ಗಣೇಶೋತ್ಸವ ಧಾರ್ಮಿಕ ಮಹತ್ವವನ್ನು ಹೆಚ್ಚಿಸಿಕೊಂಡು ಮುನ್ನಡೆದು ಗಣೇಶೋತ್ಸವ ಅಂದರೆ ಬೆಟ್ಟಂಪಾಡಿಯಂತಿರಬೇಕುʼ ಎನ್ನುವಲ್ಲಿಯವರೆಗೆ ತಲುಪಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆʼ ಎಂದರು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ – ಗೋಪಾಲಕೃಷ್ಣ ಮಿತ್ತೂರು
ಮಿತ್ತೂರು ಶಾಲಿವಾಹನ ಫ್ಯೂಯಲ್ಸ್ ಮ್ಹಾಲಕ ಗೋಪಾಲಕೃಷ್ಣ ಮಿತ್ತೂರು ರವರು ಮಾತನಾಡಿ ‘ಬಹಳ ಹಿಂದಿನಿಂದಲೂ ಹಿಂದು ಧರ್ಮದ ಮತ್ತು ಧಾರ್ಮಿಕ ಕೇಂದ್ರಗಳ ವಿರುದ್ಧ ಅನೇಕ ಷಡ್ಯಂತ್ರಗಳ ಮೂಲಕ ನಾಶಕ್ಕೆ ಪ್ರಯತ್ನಿಸಿರುವುದನ್ನು ಕಂಡಿದ್ದೇವೆ. ಬಹುಶಃ ಇತ್ತೀಚೆಗಿನ ವಿದ್ಯಮಾನ ನೋಡಿದರೆ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದ ಮೇಲೂ, ಖಾವಂದರ ವಿರುದ್ದವೂ ಷಡ್ಯಂತ್ರ ನಡೆದು ಹಿಂದುಗಳ ಭಾವನೆಗೆ ಧಕ್ಕೆ ನಡೆಸುತ್ತಿರುವುದರ ವಿರುದ್ದ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ’ ಎಂದರು.
ಸಂಸ್ಕೃತಿ ಚಾಚೂ ತಪ್ಪದೇ ರವಾನೆಯಾಗಬೇಕು – ಅನಂತಕೃಷ್ಣ ಭಟ್
ಮುಖ್ಯ ಅತಿಥಿಗಳಾಗಿದ್ದ ಚೈತನ್ಯ ಗ್ರೂಪ್ ಬೆಂಗಳೂರಿನ ಕಾನೂನು ಸಲಹೆಗಾರ, ನ್ಯಾಯವಾದಿ ಅನಂತಕೃಷ್ಣ ಭಟ್ ಕೋನಡ್ಕ ಮಾತನಾಡಿ ʻತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ದೊರೆಯಿತು ಎನ್ನುವುದು ನಮ್ಮೆಲ್ಲರಲ್ಲಿ ಶಾಶ್ವತವಾಗಿ ನೆನಪಿರಬೇಕು. ಈ ದೇಶವನ್ನು ಮುಂದಿನ ಪೀಳಿಗೆಗೆ ಕೊಡುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರಲ್ಲಿದೆ. ನಮ್ಮ ಸಂಸ್ಕೃತಿ ಚಾಚೂ ತಪ್ಪದೇ ಭವಿಷ್ಯಕ್ಕೆ ರವಾನೆಯಾಗಬೇಕುʼ ಎಂದರು.
ಭಾಗವತದಿಂದ ಸುಪ್ರೀಂ ಪವರ್ – ಎವಿ ನಾರಾಯಣ
ಪ್ರಕೃತಿಯ ಮೂಲಕ ದೇವರ ಆರಾಧನೆ ಮಾಡುವವರು ನಾವು. ಗಣಪತಿಯ ಆರಾಧನೆಯೂ ಪ್ರಕೃತಿಯ ಆರಾಧನೆಯಾಗಿದೆ. ಗಣೇಶನ ಅನುಗ್ರಹದಿಂದ ಮಾತ್ರ ಯಾವ ಕಾರ್ಯವೂ ಸಾಧಿತವಾಗುತ್ತದೆ ಎಂಬುದನ್ನು ತಿಲಕರು ಕಂಡು ಅನುಷ್ಠಾನಗೊಳಿಸಿ ಯಶಸ್ವಿಯಾದರು. ಆತ್ಮದ ಜೊತೆ ಸಂಯೋಜನೆಯ ಭಾಗವತದತ್ತ ಮನುಷ್ಯ ಮುಂದುವರಿದಾಗ ನಮಗೆ ಸುಪ್ರಿಂ ಪವರ್ ಲಭಿಸುತ್ತದೆ. ಇದರಿಂದ ಆತ್ಮಸ್ಥೈರ್ಯ ಹೆಚ್ಚಿ ಪ್ರತಿಯೊಂದನ್ನು ಸಾಧಿಸಲು ಸಾಧ್ಯವಾಗುತ್ತದೆ’ ಎಂದರು.
ಬೆಟ್ಟಂಪಾಡಿ ಸಂಸ್ಕೃತಿ ಆಚಾರ ವಿಚಾರಗಳಿಗೆ ಪ್ರಸಿದ್ಧಿ – ವಿಶ್ವನಾಥ ಬೈಲಮೂಲೆ
ಬಂಟ್ವಾಳ ತಾ.ಪಂ. ಸಹಾಯಕ ನಿರ್ದೇಶಕ ವಿಶ್ವನಾಥ ಬೈಲಮೂಲೆಯವರು ಮಾತನಾಡಿ ʻಬೆಟ್ಟಂಪಾಡಿಯ ಮಣ್ಣು ಅನೇಕ ಸಂಸ್ಕೃತಿ ಆಚಾರ ವಿಚಾರಗಳಿಗೆ ಪ್ರಸಿದ್ಧಿಯಾದ ಕ್ಷೇತ್ರ. ಇದೇ ಪರಿಸರದಲ್ಲಿ ನಾನು ಕಾಲೇಜು ವ್ಯಾಸಂಗ ಮಾಡುತ್ತಿರಬೇಕಾದರೆ ಇಲ್ಲಿನ ಗಣೇಶೋತ್ಸವದ ಲ್ಲಿ ಪಾಲ್ಗೊಳ್ಳುತ್ತಿದ್ದೆ. ಈಗ ಅತಿಥಿಯಾಗಿ ಕರೆದು ಗುರುತಿಸಿರುವುದು ಸಂತೋಷ ತಂದಿದೆ. ಧಾರ್ಮಿಕ ಆಚರಣೆಗಳನ್ನು ಕುಟುಂಬಿಕು ಒಟ್ಟು ಸೇರಿಕೊಂಡು ಮಾಡುವಂತಾಗಬೇಕು. ಆಗ ನಮ್ಮ ಮಕ್ಕಳೂ ಸಂಸ್ಕೃತಿ ಧಾರ್ಮಿಕ ಆಚರಣೆಗಳನ್ನು ಕಲಿತಿಕೊಳ್ಳುತ್ತಾರೆ.
ಸಮಾಜಕ್ಕೆ ಶಕ್ತಿ ತುಂಬುವ ಕೆಲಸ – ತಾರನಾಥ ರೈ
ಪುತ್ತೂರು ಪದ್ಮಶ್ರೀ ಮೆಡಿಕಲ್ ಮ್ಹಾಲಕ ತಾರನಾಥ ರೈ ರವರು ಮಾತನಾಡಿ ʻಇಲ್ಲಿನ ಗಣೇಶೋತ್ಸವ ಇಲ್ಲಿನ ಯುವಕರ ಸಂಘಟನೆಯ ಶಕ್ತಿಯಿಂದಾಗಿ ಭಾರೀ ಹೆಸರು ಪಡೆದಿದೆ. ಇಂತಹ ಸಂಘಟನೆ ಎಲ್ಲಾ ಕಡೆ ಇದ್ದಾಗ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ನಡೆಯುತ್ತದೆʼ ಎಂದರು.
ನಾಲ್ಕು ಗ್ರಾಮಗಳಲ್ಲಿ ಅತೀ ದೊಡ್ಡ ಕಾರ್ಯಕ್ರಮ – ಉಮೇಶ್ ರೈ
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲುರವರು ಮಾತನಾಡಿ ʻಗಣೇಶೋತ್ಸವದಲ್ಲಿ ಇರ್ದೆ ಬೆಟ್ಟಂಪಾಡಿ ನಿಡ್ಪಳ್ಳಿ ಪಾಣಾಜೆ ನಾಲ್ಕು ಗ್ರಾಮಗಳ ಪೈಕಿ ಇಷ್ಟೊಂದು ದೊಡ್ಡ ಕಾರ್ಯಕ್ರಮ ನಡೆಯುತ್ತಿರುವುದು ಬೆಟ್ಟಂಪಾಡಿಯಲ್ಲಿ ಮಾತ್ರ. ಇಲ್ಲಿನ ಸಂಘಟನೆ ಬಲವಾಗಿದೆ. ಯುವಕರ ಶಿಸ್ತು ಮತ್ತು ನಡತೆ ಬಹಳ ಮೆಚ್ಚುಗೆಗೆ ಪಾತ್ರವಾಗಿದೆʼ ಎಂದರು.
ಧರ್ಮದಿಂದ ಮಾನವೀಯ ಸಂಬಂಧ ವೃದ್ಧಿ – ಮೋಹನದಾಸ್ ರೈ
ಕುಂಬ್ರ ಮಾತೃಶ್ರೀ ಅರ್ಥ್ಮೂವರ್ಸ್ನ ಮ್ಹಾಲಕ ಮೋಹನದಾಸ ರೈ ಕುಂಬ್ರ ರವರು ಮಾತನಾಡಿ ʻನಮ್ಮ ಧಾರ್ಮಿಕ ಹಬ್ಬ ಆಚರಣೆಗಳು ಮನುಷ್ಯನಲ್ಲಿ ಮಾನವೀಯ ಸಂಬಂಧ, ಗುಣಗಳನ್ನು ವೃದ್ಧಿಸುತ್ತವೆ’ ಎಂದರು.
ಗೌರವಾರ್ಪಣೆ
ಉದ್ಯಮದಲ್ಲಿ ರಜತ ಸಂಭ್ರಮವನ್ನು ಹೊಂದಿದೆ ಪೆರ್ಲ ಶಿವಗಿರಿ ಸೌಂಡ್ಸ್ & ಲೈಟಿಂಗ್ಸ್ನ ಮ್ಹಾಲಕ ಮಹಾಲಿಂಗ ನಾಯ್ಕ್ ರವರಿಗೆ ಸಮಿತಿಯ ವತಿಯಿಂದ ಗೌರವಾರ್ಪಣೆ ನಡೆಯಿತು. ತನ್ನ ಉದ್ಯಮದಲ್ಲಿ ಬೆಟ್ಟಂಪಾಡಿಯ ಗಣೇಶೋತ್ಸವದಿಂದ ಪ್ರೇರಿತರಾದ ಮಹಾಲಿಂಗ ನಾಯ್ಕ್ ರವರು ತನ್ನ ವೈಯುಕ್ತಿಕ ನೆಲೆಯಲ್ಲಿ ವಿನೋದ್ ಕುಮಾರ್ ಬಲ್ಲಾಳ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ, ಅಧ್ಯಕ್ಷ ಶರತ್ ಕುಮಾರ್ ಪಾರ, ಕಾರ್ಯದರ್ಶಿ ಗಣೇಶ್ ಹೊಳ್ಳ, ಕೋಶಾಧಿಕಾರಿ ಉಚಿತ್ ಕುಮಾರ್ ಹಾಗೂ ದುರ್ಗಾಪ್ರಸಾದ್ ಜೆ. ರವರಿಗೆ ಗೌರವಾರ್ಪಣೆ ಸಲ್ಲಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಅಷ್ಟ ಕನ್ಸ್ಟ್ರಕ್ಷನ್ & ಕನ್ಸಲ್ಟಂಟ್ಸ್ನ ಮ್ಹಾಲಕ, ಸಿವಿಲ್ ಇಂಜಿನಿಯರ್ ತಿಲಕ್ರಾಜ್ ಕರುಂಬಾರು, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಉಪಸ್ಥಿತರಿದ್ದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ಹೊಳ್ಳ ಹಾಗೂ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು.
ಪ್ರಾಸ್ತಾವಿಕದೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ಶರತ್ ಕುಮಾರ್ ಪಾರ ರವರು ʻ40 ವರ್ಷಗಳ ಹಿಂದೆ ಬೆಟ್ಟಂಪಾಡಿಯಂತಹ ಗ್ರಾಮೀಣ ಭಾಗದಲ್ಲಿ ಆರಂಭಗೊಂಡ ಗಣೇಶೋತ್ಸವ ವರ್ಷದಿಂದ ವರ್ಷಕ್ಕೆ ಹತ್ತೂರಿನಲ್ಲಿ ಖ್ಯಾತಿ ಪಡೆಯುತ್ತಾ ಬಂದಿದೆ. ಊರ ಪರವೂರ ಭಕ್ತರ ಸಹೃದಯದ ಸಹಕಾರದಿಂದ ಸುಮಾರು 7-8 ಲಕ್ಷ ರೂ. ವೆಚ್ಚದಲ್ಲಿ ಗಣೇಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಖರ್ಚು ವೆಚ್ಚಗಳ ಏರಿಕೆಯಿಂದಾಗಿ ಈ ಬಾರಿ ಅನ್ನದಾನ ಸೇವೆಯನ್ನು ರೂ. 500 ರಿಂದ 1000ಕ್ಕೆ ಏರಿಸಿದ್ದೇವೆ. ಭಕ್ತಾಭಿಮಾನಿಗಳು ಮುಂದೆಯೂ ಸಹಕರಿಸಬೇಕು’ ಎಂದರು.
ಕೋಶಾಧಿಕಾರಿ ಉಚಿತ್ ಕುಮಾರ್ ಬದಿನಾರು ವಂದಿಸಿದರು. ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ವೃಷ್ಠಿ ರೈ ಗುತ್ತು ಪ್ರಾರ್ಥಿಸಿದರು. ಮಹೇಶ್ವರ ಪೆಟ್ರೋಲಿಯಂನ ಮ್ಹಾಲಕ ಶಿವಪ್ರಸಾದ್ ಶೆಟ್ಟಿ ಕಿನಾರ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮತ್ತಿತರ ಪ್ರಮುಖರು ಕಾರ್ಯಕ್ರಮಕ್ಕೆ ಭೇಟಿ ನೀಡಿದರು.
ಸಾವಿರಾರು ಮಂದಿಗೆ ಅನ್ನಸಂತರ್ಪಣೆ
ಗಣೇಶೋತ್ಸವದ ಆರಂಭದ ದಿನವಾದ ಆ.27ರಂದು ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಜರಗಿ ಸುಮಾರು 2 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ಶ್ರೀ ಮಹಾಗಣಪತಿಗೆ ನಡೆದ ರಂಗಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ರಾಜೇಶ್ ಭಟ್ ರವರಿಗೆ ಗೌರವಾರ್ಪಣೆ
ಸಾರ್ವಜನಿಕ ಗಣೇಶೋತ್ಸವದ ಪೌರೋಹಿತ್ಯ ಮಾಡಿಕೊಂಡು ಬರುತ್ತಿರುವ ರಾಜೇಶ್ ಭಟ್ ಪುತ್ತೂರು ರವರು 25 ವರ್ಷಗಳ ಸಾರ್ಥಕ ಪೌರೋಹಿತ್ಯವನ್ನು ವಹಿಸಿರುವ ಹಿನ್ನೆಲೆಯಲ್ಲಿ ಸಮಿತಿಯ ವತಿಯಿಂದ ಅವರಿಗೆ ರಾತ್ರಿ ಗೌರವಾರ್ಪಣೆ ಮಾಡಲಾಯಿತು.
ಮನರಂಜಿಸಿದ ರಸಮಂಜರಿ, ಭರತನಾಟ್ಯ, ʻನಾಗಮಾಣಿಕ್ಯʼ ನಾಟಕ
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಅಪರಾಹ್ನ ಶ್ರೀ ಭ್ರಮರಾಂಬಿಕಾ ಭಜನಾ ಸಂಘದ ಸದಸ್ಯರಿಂದ ರಸಮಂಜರಿ ನಡೆಯಿತು. ಸಂಜೆ ವಿದುಷಿ ಗೌತಮಿ ಅನುದೀಪ್ ಮತ್ತು ಶಿಷ್ಯವೃಂದದವರಿಂದ ʻಭರತನಾಟ್ಯ ಪ್ರದರ್ಶನಗೊಂಡಿತು. ಬಳಿಕ ವಾಣಿ ವೆಂಕಟಕೃಷ್ಣ ಭಟ್ ಮತ್ತು ವೀಣಾ ರಾಮಕೃಷ್ಣ ಭಟ್ ಬಳಗದವರಿಂದ ಶಾಸ್ತ್ರಿಯ ಸಂಗೀತ ಜರಗಿತು. ರಾತ್ರಿ ಗಯಾಪದ ಕಲಾವಿದೆರ್ ಉಬಾರ್ ಅಭಿನಯಿಸಿದ ‘ನಾಗಮಾಣಿಕ್ಯ’ ನಾಟಕ ಪ್ರದರ್ಶನಗೊಂಡು ಮನರಂಜಿಸಿತು.