ನೆಲ್ಯಾಡಿ: ಬಯಲು ಆಲಯದ ಗಣಪತಿ ಕ್ಷೇತ್ರವಾಗಿರುವ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಆ.27ರಂದು ಶ್ರೀ ಗಣೇಶ ಚತುರ್ಥಿ ಹಲವು ವಿಶೇಷತೆಗಳೊಂದಿಗೆ ಸಂಭ್ರಮದಿಂದ ನಡೆಯಿತು. ಈ ಸಂದರ್ಭದಲ್ಲಿ ಅಂದಾಜು 50 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿ ವಿಶೇಷ ಸೇವೆ ಸಲ್ಲಿಸಿದರು. 8 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.

ಬೆಳಿಗ್ಗೆ 108 ಕಾಯಿ ಗಣಹೋಮ, ರಂಗಪೂಜೆ ಹಾಗೂ ಮಹಾಪೂಜೆ ನೆರವೇರಿತು. ಮುಂಜಾನೆಯಿಂದ ಸಂಜೆ ತನಕವೂ ಕ್ಷೇತ್ರಕ್ಕೆ ಭಕ್ತರು ಆಗಮಿಸಿ ಶ್ರೀ ಗಣೇಶ ಚತುರ್ಥಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ವಿಪರೀತ ಮಳೆಯಿದ್ದರೂ ಭಕ್ತರ ದಂಡೇ ದೇವಸ್ಥಾನಕ್ಕೆ ಹರಿದು ಬಂದಿದ್ದು ದೇವಸ್ಥಾನದ ಪ್ರಾಂಗಣ ಭಕ್ತರ ಮಹಾಸಂಗಮಕ್ಕೆ ಸಾಕ್ಷಿಯಾಗಿತ್ತು. ಈ ಸಂದರ್ಭದಲ್ಲಿ ಮಳೆಯ ನಡುವೆಯೂ ಬಯಲು ಆಲಯದ ಗಣಪತಿಗೆ ಭಕ್ತರು ವಿವಿಧ ಸೇವೆ ಸಲ್ಲಿಸಿದ್ದರು. ದೇವಸ್ಥಾನದ ಸೇವಾ ಕೌಂಟರ್‌ನಲ್ಲಿ ಅವಲಕ್ಕಿ ಪಂಚಕಜ್ಜಾಯ-11455, ಅಪ್ಪ ಪ್ರಸಾದ-11,215, ಕಡ್ಲೆ ಪಂಚಕಜ್ಜಾಯ-3,117, ಲಾಡು ಪ್ರಸಾದ-4,635, ಮೋದಕ ಪ್ರಸಾದ-5,004 ರಸೀದಿ ವಿತರಣೆಯಾಗಿದೆ. ಸುಮಾರು 25 ಭಕ್ತರು ಗಣಹೋಮ ವಿಶೇಷ ಸೇವೆ ಮಾಡಿದರು. ವಿವಿಧ ಸೇವೆಗಳಿಂದ ಒಂದೇ ದಿನ ದೇವಸ್ಥಾನದ ಖಾತೆಗೆ ಒಟ್ಟು 16,62,942 ರೂ. ಮೊತ್ತ ಜಮೆಯಾಗಿದೆ. ಮಧ್ಯಾಹ್ನ ಸುಮಾರು 8 ಸಾವಿರಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಮೈಸೂರಿನ ಬಾಲಕೃಷ್ಣ ಪೆಲತ್ತಾಯ, ಹಾಸನದ ಮೇಘರಾಜ ಅವರು ಸೇವಾ ರೂಪದಲ್ಲಿ ತರಕಾರಿ ಒದಗಿಸಿದರು. ಸೋಮಶೇಖರ ಹಾಸನ ಹೂ-ಫಲ ವಸ್ತು, ಬೆಂಗಳೂರಿನ ವೆಂಕಟೇಶ್, ಕೆ.ಎಲ್. ಶ್ರೀನಿವಾಸ್ ಹಾಗೂ ಕಲ್ಲಡ್ಕದ ನಿತಿನ್ ದಾಸ್ ಹೂವಿನ ಅಲಂಕಾರ ಸೇವೆಗೆ ಸಹಕರಿಸಿದರು. ಕಾವು ಕೇಸರಿ ಬಳಗ ಮತ್ತು ದುರ್ಗವಾಹಿನಿ ಮಹಿಳಾ ಸಂಘದವರು ಪಾನಕ ವಿತರಣೆ ಮಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಿ.ಪಕ್ಕಳ, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ದೇವಸ್ಥಾನದ ಮಾಜಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪಾಡಿ ಮೊದಲಾದ ಪ್ರಮುಖರೂ ದೇವಸ್ಥಾನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಕೆ., ಸದಸ್ಯರಾದ ಸತ್ಯಪ್ರಿಯ ಕಲ್ಲೂರಾಯ, ವಿಶ್ವನಾಥ ಕೆ., ಪ್ರಮೋದ್‌ಕುಮಾರ್ ಶೆಟ್ಟಿ, ಗಣೇಶ್ ಕಾಶಿ, ಪ್ರಶಾಂತ್ ಮಚ್ಚಿನ,ಹರಿಶ್ಚಂದ್ರ ಜಿ., ಲೋಕೇಶ್ವರಿ ವಿನಯಚಂದ್ರ, ಸಿನಿಗುರುದೇವನ್, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್ ಅವರು ಉಪಸ್ಥಿತರಿದ್ದು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಂಡಿದ್ದರು.