ಹೆಸರು ಕೆ. ಸುಬ್ರಾಯ ಭಟ್ 90ರ ಇಳಿ ವಯಸ್ಸಿನಲ್ಲಿಯೂ ಬತ್ತದ ಉತ್ಸಾಹ. ಕರಿ ಹಲಗೆಯ ಮೇಲೆ ಮೂಡಿ ಬರುತ್ತಿರುವ ಸುಂದರವಾದ ಅಕ್ಷರಗಳು. ಬಹಳ ಆಸಕ್ತಿಯಿಂದ ಪಾಠವನ್ನು ಕೇಳುತ್ತಿರುವ ಪುಟ್ಟ ಮಕ್ಕಳು. ಅಂದ ಬರಹಕ್ಕೆ,ಕ್ಲಿಷ್ಟವಾದ ಪದ ಬಳಕೆಗೆ ಮತ್ತು ಸ್ಪಷ್ಟವಾದ ಉಚ್ಚಾರ, ಸರಿಯಾದ ಮಗ್ಗಿ ಮತ್ತು ಸಂಖ್ಯೆ ಹೇಳಿದ ವಿದ್ಯಾರ್ಥಿಗೆ ಕೂಡಲೇ ಪೆನ್ನು,ಪುಸ್ತಕ ಅಥವಾ ನಗದು ಬಹುಮಾನ.
ಅಂದ ಹಾಗೆ ಈ ದೃಶ್ಯವನ್ನು ನೋಡುತ್ತಿರುವುದು ಬಂಟ್ವಾಳ ತಾಲೂಕಿನ ಕೆದಿಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ತಾನು ಅಕ್ಷರ ಕಲಿತು, ಅಧ್ಯಾಪಕನಾಗಿ ಮತ್ತು ಮುಖ್ಯೋಪಾಧ್ಯಾಯನಾಗಿ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತಿ ಹೊಂದಿ ಮತ್ತೆ ಅದೇ ಶಾಲೆಗೆ ಶಿಕ್ಷಕನಾಗಿ ಬಂದ ಕಥೆ ಇದು. ಕಳೆದ ಮೂರು ವರ್ಷಗಳಿಂದ ದಿನಾ 10 ಗಂಟೆಗೆ ಸರಿಯಾಗಿ ಶಾಲೆಗೆ ಆಗಮಿಸಿ ಯಾವುದೇ ವೇತನ ಸ್ವೀಕರಿಸದೆ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ.
ಶಾಲೆಯಲ್ಲಿ ಒಬ್ಬರೇ ಶಿಕ್ಷಕರಿರುವುದನ್ನು ಹಾಗೂ ಮಕ್ಕಳಿಲ್ಲದೆ ಮುಚ್ಚುವ ಹಂತಕ್ಕೆ ಬಂದುದನ್ನು ಕಂಡು ಶಾಲೆಗೆ ಕಾಯಕಲ್ಪ ಕೊಡಬೇಕೆಂಬ ದೃಷ್ಟಿಯಿಂದ ಅತಿಥಿ ಶಿಕ್ಷಕರ ನೇಮಕಕ್ಕೆ ಊರೆಲ್ಲಾ ಸುತ್ತಾಡಿ ತಾವೊಬ್ಬರೇ ಮೂರು ಲಕ್ಷಕ್ಕೂ ಅಧಿಕ ಹಣವನ್ನು ಸಂಗ್ರಹಿಸಿದ್ದಾರೆ. ಹೊಸ ಕಟ್ಟಡದ ನಿರ್ಮಾಣ ಮತ್ತು ಕನ್ನಡ ಮಾಧ್ಯಮದೊಂದಿಗೆ ಇಂಗ್ಲಿಷ್ ಕೋಚಿಂಗ್ ಮೂಲಕ, ಹಿಂದೊಮ್ಮೆ ವೈಭವದಿಂದ ಮೆರೆದ ಹಾಗೂ ಶತಮಾನ ಕಂಡ ಶಾಲೆಯನ್ನು ಉಳಿಸುವ ಆಡಳಿತ ಮಂಡಳಿಯ ಪ್ರಯತ್ನಕ್ಕೆ ಕೈ ಜೋಡಿಸಿ ಈಗಾಗಲೇ ತಮ್ಮ ಉಳಿತಾಯದ ರೂ.15 ಲಕ್ಷವನ್ನು ದೇಣಿಗೆಯಾಗಿ ನೀಡಿರುತ್ತಾರೆ.
ಉಡುಗೆ ತೊಡುಗೆಯಲ್ಲಿ ಬಹಳ ಅಚ್ಚುಕಟ್ಟು ಬಯಸುವ ಇವರು, ಉತ್ತಮ ಕನ್ನಡ ಮತ್ತು ಗಣಿತದ ಅಧ್ಯಾಪಕರು.ಅವರು ಕಲಿಸುವ ವಿಧಾನವನ್ನು ಈಗಲೂ ಅನೇಕ ಹಳೆ ವಿದ್ಯಾರ್ಥಿಗಳು ಸ್ಮರಿಸುತ್ತಾರೆ.ಶಾಲೆಯಲ್ಲಿ ಆಗಾಗ ನಡೆಯುತ್ತಿದ್ದ ಯಕ್ಷಗಾನ ತಾಳಮದ್ದಳೆ ಕೂಟಗಳಲ್ಲಿ ಅರ್ಥ ದಾರಿಯಾಗಿಯೂ ಮಿಂಚಿದವರು. ವಿದ್ಯಾರ್ಥಿಗಳೊಂದಿಗೆ ವಾಲಿಬಾಲ್, ಕ್ರಿಕೆಟ್ ಆಡುತ್ತಿದ್ದ ಇವರು ಪಾಠ- ಪಾಠೇತರ ಚಟುವಟಿಕೆಗಳಲ್ಲಿಯೂ ಸಕ್ರಿಯರು.ಕ್ರಿಕೆಟಿನಲ್ಲಿ ಮಕ್ಕಳಿಗೆ ತರಬೇತಿ ನೀಡಿ ನಾನಾ ಕಡೆ ಟೂರ್ನಮೆಂಟ್ ಗಳಲ್ಲಿ ಮಕ್ಕಳ,ಹಳೆ ವಿದ್ಯಾರ್ಥಿಗಳ ತಂಡವನ್ನು ಭಾಗವಹಿಸುವಂತೆ ಪ್ರೇರಣೆ ನೀಡಿರುವುದು ಹಲವರಿಗೆ ಮರೆಯಲಾಗದ ನೆನಪು.
ವಯಸ್ಸಾದಂತೆ ಜೀವನೋತ್ಸಾಹ ಕಳೆದುಕೊಳ್ಳುತ್ತಿರುವ ಜನರ ಮಧ್ಯೆ, ಶಾಲೆಯ ಮೇಲಿನ ಪ್ರೀತಿಯಿಂದ, ಶಾಲೆಯನ್ನೇ ದೇವಸ್ಥಾನ ಮಾಡಿಕೊಂಡು, ಮಕ್ಕಳಲ್ಲಿ ದೇವರನ್ನು ಕಾಣುತ್ತಾ, ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ,ಸಾರ್ಥಕ ಬದುಕನ್ನು ಬಾಳುತ್ತಿರುವ ಈ ಶಿಕ್ಷಣ ಪ್ರೇಮಿ, ಹಿರಿ ಜೀವಕ್ಕೆ ಸಾಷ್ಟಾಂಗ ನಮನಗಳು.
✍🏻 ಸುಬ್ರಹ್ಮಣ್ಯ ಭಟ್ ಬೀಡಿಗೆ, ಸಂಚಾಲಕರು, ಅನುದಾನಿತ ಹಿ.ಪ್ರಾ ಶಾಲೆ ಕೆದಿಲ