ಪುತ್ತೂರು: ಮುಂಡೂರು ಗ್ರಾಮದ ಪಜಿಮಣ್ಣ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯು ಆ.27ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆಗಳೊಂದಿಗೆ ನೆರವೇರಿತು.

ತಂತ್ರಿ ವೇ.ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣಪತಿ ಪ್ರತಿಷ್ಠೆ, ಗಣಹೋಮ, ನಂತರ ಹಿಂದೂ ಬಾಂಧವರಿಗೆ ವಿವಿಧ ಆಟೋ ಸ್ಪರ್ಧೆಗಳು ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮಾತನಾಡಿ, ಕುಕ್ಕಿನಡ್ಕ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇವಸ್ಥಾನಗಳ ಅಭಿವೃದ್ಧಿಗೆ ಶಾಸಕರು ಅನುದಾನ ನೀಡುತ್ತಿದ್ದು, ಅವುಗಳನ್ನು ತುರ್ತು ಕಾರ್ಯಕ್ಕೆ ಬಳಸಿಕೊಳ್ಳಬೇಕು. ಅಲ್ಲದೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಮಿತಿಯವರು ಸಿದ್ದಪಡಿಸಬೇಕು. ದೇವಸ್ಥಾನದ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ತನ್ನಿಂದಾಗುವ ಎಲ್ಲಾ ರೀತಿಯ ಸಲಹೆ, ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ದೇವಸ್ಥಾನ ಬೇರೆ, ರಾಜಕೀಯವೇ ಬೇರೆ. ದೇವಸ್ಥಾನದಲ್ಲಿ ರಾಜಕೀಯ ಬರಬಾರದು. ಚಪ್ಪಲಿ ಕಳಚಿ ಒಳಬರುವಂತೆ ದೇವಸ್ಥಾನದ ಒಳ ಬರುವಾಗ ರಾಜಕೀಯ ಬಿಟ್ಟು ಬರಬೇಕು. ಸಮಿತಿಯವರು ಎಲ್ಲರನ್ನು ಒಟ್ಟು ಸೇರಿಸಿಕೊಂಡು ಮುನ್ನಡೆಯಬೇಕು. ದೇವಸ್ಥಾನಗಳ ಅಭಿವೃದ್ಧಿ ಶಾಸಕರು ಸಾಕಷ್ಟು ಅನುದಾನ ನೀಡುತ್ತಿದ್ದು ಅವುಗಳನ್ನು ಸದುಪಯೋಗಪಡಿಸಿಕೊಂಡು ದೇವಸ್ಥಾನದ ಅಭಿವೃದ್ಧಿ ಪಡಿಸುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಕಣ್ಣಾರಾಯ ಬನೇರಿ ಮಾತನಾಡಿ, ದೇವಸ್ಥಾನದ ಹಿಂದಿನ ವ್ಯವಸ್ಥಾಪನಾ ಸಮಿತಿಯವರು ಹಾಗೂ ಹಾಲಿ ಸದಸ್ಯರು ಹಾಗೂ ಊರಿನ ಭಕ್ತಾದಿಗಳ ಸಹಕಾರದಿಂದ ದೇವಸ್ಥಾನದ ಕಾರ್ಯಕ್ರಮ ಹಾಗೂ ಅಭಿವೃದ್ಧಿಗಳಲ್ಲಿ ಉತ್ತಮ ಸಹಕಾರ ನೀಡುತ್ತಿದ್ದಾರೆ. ದೇವಸ್ಥಾನದ ರಸ್ತೆ ಅಭಿವೃದ್ಧಿಗೆ ಶಾಸಕರು ಈಗಾಗಲೇ ರೂ.10ಲಕ್ಷ ಅನುದಾನ ನೀಡಿರುವುದಲ್ಲದೇ, ಪಾಕ ಶಾಲೆಯ ತುರ್ತು ದುರಸ್ಥಿಗೆ ಶಾಸಕರ ತುರ್ತು ನಿಧಿಯಿಂದ ರೂ.5ಲಕ್ಷ ಅನುದಾನ ಘೋಷಣೆ ಮಾಡಿರುವುದಾಗಿ ತಿಳಿಸಿದರು.
ಅಕ್ಷಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಯಂತ ನಡುಬೈಲು ಮಾತನಾಡಿ ಶುಭಹಾರೈಸಿದರು. ಪ್ರಗತಿಪರ ಕೃಷಿಕ ಹೆಗ್ಗಪ್ಪ ರೈ ಪೊನೋನಿ, ಕುಕ್ಕಿನಡ್ಕ ಶ್ರೀ ಸುಬ್ರಾಯ ಭಜನಾ ಮಂಡಳಿಯ ಉಪಾಧ್ಯಕ್ಷೆ ವನಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು ಭೇಟಿ ನೀಡಿ ಶುಭಹಾರೈಸಿದರು.
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪದ್ಮಯ್ಯ ನಾಯ್ಕ ಬಂಡಿಕಾನ ಸ್ವಾಗತಿಸಿದರು. ಧನಂಜಯ ಕುಲಾಲ್ ಕಂಪ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಸಾಲಿಯಾನ್ ವಂದಿಸಿದರು. ಸದಸ್ಯರಾದ ರಘುನಾಥ ಶೆಟ್ಟಿ ಪೊನೋನಿ, ಪದ್ಮಯ್ಯ ಗೌಡ ಗುತ್ತಿನಪಾಲು, ಶಾರದಾ ಬಂಡಿಕಾನ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಶಾಸಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಅಪರಾಹ್ನ ದೇವಸ್ಥಾನಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈಯವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ರಂಗಪೂಜೆ ನಡೆದ ಬಳಿಕ ಗಣೇಶ ವಿಗ್ರಹ ವೈಭವದ ಶೋಭಾಯಾತ್ರೆ ನಡೆಯಿತು. ದೇವಸ್ಥಾನದ ಬಳಿಯಿಂದ ಹೊರಟ ಶೋಭಾಯಾತ್ರೆಯು ಮುಂಡೂರು, ಪಂಜಳ, ಕಲ್ಲಗುಡ್ಡೆ, ಪಾದೆ ಮೂಲಕ ಸಾಗಿ ಅಜಲಾಡಿ ಕೆರೆಯಲ್ಲಿ ಗಣೇಶ ವಿಗ್ರಹದ ಜಲಸ್ಥಂಬನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಕುಕ್ಕಿನಡ್ಕ ದೇವಸ್ಥಾನದಲ್ಲಿ ಯುವಕರು ಸೇರಿದಂತೆ ಊರಿನ ಭಕ್ತಾದಿಗಳು ಒಗ್ಗಟ್ಟಿನಲ್ಲಿ ತೊಡಗಿಸಿಕೊಂಡಿರುವುದು ಸಂತಸ ತಂದಿದೆ. ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಅನುದಾನ ನೀಡಲಾಗಿದೆ. ನನ್ನ ಅವಧಿಯಲ್ಲಿ ದೇವಾಲಯಗಳ ಅಭಿವೃದ್ಧಿಗೆ ಸಾಧ್ಯವಾದಷ್ಟು ಅನುದಾನ ನೀಡಲು ಪ್ರಯತ್ನಿಸುತ್ತೇನೆ. ಅದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಬೇಕಾದ ಜವಾಬ್ದಾರಿ ಆಯಾ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯವರ ಮೇಲಿದೆ.
-ಅಶೋಕ್ ಕುಮಾರ್ ರೈ, ಶಾಸಕರು