ಪುಣಚ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ -ರೂ.2.42 ಲಕ್ಷ ಲಾಭ, ಶೇ.6 ಡಿವಿಡೆಂಡ್, ಲೀ.ಗೆ 46 ಪೈಸೆ ಬೋನಸ್

0

ಪುಣಚ: ಪುಣಚ ಹಾಲು ಉತ್ಪಾದಕರ ಸಹಕಾರಿ ಸಂಘದ 2024-25ನೇ ಸಾಲಿನಲ್ಲಿ ರೂ.2,42,530.36 ಲಾಭಗಳಿಸಿ ಸದಸ್ಯರಿಗೆ ಶೇ.6 ಡಿವಿಡೆಂಡ್ ಹಾಗೂ ಪ್ರತಿ ಲೀಟರ್ ಹಾಲಿಗೆ 46ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಪಿ.ವಿಶ್ವನಾಥ ರೈ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.


ಸಭೆಯು ಆ.29ರಂದು ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ವಿಶ್ವನಾಥ ರೈಯವರು, ಸಂಘವು ವರದಿ ವರ್ಷಾಂತ್ಯಕ್ಕೆ 337 ಸದಸ್ಯರನ್ನು ಹೊಂದಿದ್ದು ರೂ.1,02,300 ಪಾಲು ಬಂಡವಾಳ ಇರುತ್ತದೆ. ರೈತರಿಂದ 2,51,386.55 ಲೀ.ಹಾಲು ಖರೀದಿಸಿ 2,43,520ಲೀ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. 15,964.60 ಲೀ.ಹಾಲು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. 2,599 ಲೀ.ಮಾದರಿ ಹಾಲು ಮಾರಾಟ ಮಾಡಲಾಗಿದೆ. ಹಾಲು ವ್ಯಾಪಾರದಿಂದ ರೂ.8,86,234.27 ಆದಾಯ ಬಂದಿದೆ. 2,429 ಚೀಲ ಪಶು ಅಹಾರ, 1,100 ಕೆ.ಜಿ ಲವಣ ಮಿಶ್ರಣ ಮಾರಾಟ ಮಾಡಲಾಗಿದ್ದು ಇದರಿಂದ ರೂ.1,27,485 ಮತ್ತು ಇತರ ಮೂಲದಿಂದ ರೂ.3,63,092.20 ಆದಾಯ ಬಂದಿದೆ. ಸಂಘದ ಎಲ್ಲಾ ಖರ್ಚು ವೆಚ್ಚಗಳನ್ನು ಕಳೆದು ಸಂಘವು ರೂ.2,42,530.36 ನಿವ್ವಳ ಲಾಭ ಪಡೆದುಕೊಂಡಿದೆ. ಅಡಿಟ್ ವರ್ಗೀಕರಣದಲ್ಲಿ ಸಂಘವು ಎ’ ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಸಂಘದ ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದು ಅವರು ತಿಳಿಸಿದರು. ದ.ಕ.ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಚಂದ್ರಶೇಖರ ಭಟ್ ಮಾತನಾಡಿ ಹೈನುಗಾರಿಕೆ, ಆರೋಗ್ಯ, ತಳಿಗಳ ನಿರ್ವಹಣೆ, ಸಂತಾನೋತ್ಪತ್ತಿ ಹಾಗೂ ಇಲಾಖೆಯಿಂದ ದೊರೆಯುವ ಅನುದಾನದ ಬಗ್ಗೆ ತಿಳಿಸಿದರು. ಒಕ್ಕೂಟದ ಕೃಷಿ ಅಧಿಕಾರಿ ನಿರಂಜನ್ ಮಾತನಾಡಿ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಅವುಗಳನ್ನು ಸದುಪಯೋಗ ಪಡೆದುಕೊಂಡು ಅಧಿಕ ಲಾಭ ಪಡೆಯುವಂತೆ ತಿಳಿಸಿದರು.


ದ.ಕ.ಹಾಲು ಒಕ್ಕೂಟದ ಇಲಾಖಾ ವಿಸ್ತರಣಾಧಿಕಾರಿ ವಿದ್ಯಾಸುನಿಲ್ ಲೆಕ್ಕ ಪರಿಶೋಧನಾ ವರದಿ ಹಾಗೂ ಅನುಪಾಲನಾ ವರದಿ ಮಂಡಿಸಿದರು.
ಸಂಘದ ಮುಖ್ಯ ಕಾರ್ಯದರ್ಶಿ ದೇವಪ್ಪ ನಾಯ್ಕ 2024-25ನೇ ಸಾಲಿನ ವಾರ್ಷಿಕ ವರದಿ, ಲಾಭ ವಿಲೇವಾರಿ ತಿಳಿಸಿದರು. ಅಂದಾಜು ಆಯವ್ಯಕ್ಕಿಂತ ಮೀರಿದ ಖರ್ಚುಗಳ ಬಗ್ಗೆ ತಿಳಿಸಿ, ಮುಂದಿನ ಅಂದಾಜು ಆಯವ್ಯಯ ಮಂಡಿಸಿದರು.


ಸಂಘದ ಹಿರಿಯ ಸದಸ್ಯರಾದ ಸುರೇಶ ಗೌಡ, ಎಸ್.ಆರ್.ರಂಗಮೂರ್ತಿ, ಉದಯ ಕುಮಾರ್, ವಿಶ್ವನಾಥ ರೈ, ಉದಯಶಂಕರ್ ರೈ, ಶಿವಪ್ಪ ಪೂಜಾರಿ, ನಾರಾಯಣ ಭಟ್ ಮುಂತಾದವರು ವಿವಿಧ ಸಲಹೆ, ಸೂಚನೆಗಳನ್ನು ನೀಡಿದರು.


ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸಿದ ಸುರೇಶ ಗೌಡ ಓಟೆತ್ತಟ್ಟ (ಪ್ರಥಮ), ದಿನೇಶ್ ಶೆಟ್ಟಿ ನಡುಮನೆ (ದ್ವಿತೀಯ) ಹಾಗೂ ಅತೀ ಹೆಚ್ಚು ಗುಣಮಟ್ಟದ ಫ್ಯಾಟ್ ಇರುವ ಹಾಲನ್ನು ಪೂರೈಸಿದ ವೆಂಕಪ್ಪ ನಾಯ್ಕ ಮದಕ ಅವರನ್ನು ಬಹುಮಾನ ನೀಡಿ ಗೌರವಿಸಲಾಯಿತು.


ನಿರ್ದೇಶಕರುಗಳಾದ ಮದನಪ್ಪ ರೈ ಬಿ, ದಿವಾಕರ ಗೌಡ‌ ರವೀಂದ್ರ ಪೂಜಾರಿ ದಲ್ಕಾಜೆ, ದಿನೇಶ್ ಶೆಟ್ಟಿ ನಡುಮನೆ, ಸುಜಾತ, ಸೀತಾ, ಸೇಸ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಹಾಲು ಪರೀಕ್ಷಕಿ ಭುವನೇಶ್ವರಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ವಿಶ್ವನಾಥ ರೈ ಪರಿಯಾಲು ಸ್ವಾಗತಿಸಿ, ಉಪಾಧ್ಯಕ್ಷ ವಾಸುದೇವ ಕಾರಂತ ವಂದಿಸಿದರು. ಸಹಾಯಕಿ ಶಾರದ ಸಹಕರಿಸಿದರು. ಸಂಘದ ಮಾಜಿ ಅಧ್ಯಕ್ಷರುಗಳು, ನಿರ್ದೇಶಕರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.

ಸಂಘದ ಕಟ್ಟಡ ದುರಸ್ತಿ, ಸಿಸಿ ಕ್ಯಾಮೆರಾ ಅಳವಡಿಕೆ, ಹಣ ಪಾವತಿಗೆ ತಂತ್ರಜ್ಞಾನದ ವ್ಯವಸ್ಥೆ, ವಾಹನ ಪಾರ್ಕಿಂಗ್ ವ್ಯವಸ್ಥೆ, ಹೀಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಸಂಘ ನಿರ್ವಹಿಸುತ್ತಾ ಬಂದಿದ್ದು ಅಭಿವೃದ್ಧಿಯಲ್ಲಿ ಸಾಗುತ್ತಿದೆ. ಸದಸ್ಯರೆಲ್ಲರೂ ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿಕೊಂಡು ಸಂಘದ ಅಭಿವೃದ್ಧಿ ಹಾಗೂ ಬೆಳವಣಿಗೆಯಲ್ಲಿ ಸಹಕರಿಸಬೇಕಾಗಿ ವಿನಂತಿ
ವಿಶ್ವನಾಥ ರೈ ಪರಿಯಾಲು
ಅಧ್ಯಕ್ಷರು

LEAVE A REPLY

Please enter your comment!
Please enter your name here