*ಮೌಲ್ಯ ಕೈಯಿಂದ ತಪ್ಪಿದಾಗ ಮೌಲ್ಯದ ಅರಿವು-ಪುರಂದರ ರೈ
*ಜೀವನದಲ್ಲಿ ಸೇವಾ ಮನೋಭಾವನೆ ಹೊಂದುವಂತಾಗಲಿ-ಗೋಪಾಲ ಗೌಡ
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಆಫ್ ಟೆಂಪಲ್ ಟೆರೇಸ್ ಫ್ಲೋರಿಡಾ, ಯು.ಎಸ್.ಎ ಇದರ ಆಶ್ರಯದಲ್ಲಿ ಕಾಮತ್ ಆಪ್ಟಿಕಲ್ಸ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವು ಸೆ.1 ರಂದು ಕೊಂಬೆಟ್ಟು ಸರಕಾರಿ ಪಿಯು ಕಾಲೇಜಿನಲ್ಲಿ ಜರಗಿತು.
ಮೌಲ್ಯ ಕೈಯಿಂದ ತಪ್ಪಿದಾಗ ಮೌಲ್ಯದ ಅರಿವು-ಪುರಂದರ ರೈ:
ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪೂರ್ವಾಧ್ಯಕ್ಷ ಪುರಂದರ ರೈ ಮಿತ್ರಂಪಾಡಿರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, 1905 ರಲ್ಲಿ ಸ್ಥಾಪನೆಯಾದ ಅಂತರರಾಷ್ಟ್ರೀಯ ರೋಟರಿ ಸಂಸ್ಥೆಯು ಜಾತಿ-ಬೇಧವಿಲ್ಲದೆ ಸಮಾಜ ಸೇವೆಯಲ್ಲಿ ಜಾಗತಿಕವಾಗಿ ಗುರುತಿಸಿಕೊಂಡಿದ್ದು ಇಂದಿನ ಯುವಸಮೂಹಕ್ಕೆ ಸಮಾಜಸೇವೆಯು ಪ್ರೇರಣೆ ಎನಿಸಿದೆ. ಕಣ್ಣಿನ ಅಗತ್ಯ ಕಣ್ಣು ಇಲ್ಲದವರಿಗೆ ಗೊತ್ತಿದೆ. ಯಾವುದೇ ಮೌಲ್ಯ ನಮ್ಮ ಕೈಯಿಂದ ತಪ್ಪಿದಾಗ ಮಾತ್ರ ಮೌಲ್ಯಗಳ ಅರಿವು ತಿಳಿಯುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ಜೀವನದಲ್ಲಿ ಸೇವಾ ಮನೋಭಾವನೆ ಹೊಂದುವಂತಾಗಲಿ-ಗೋಪಾಲ ಗೌಡ:
ಮುಖ್ಯ ಅತಿಥಿ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲ ಗೌಡ ಮಾತನಾಡಿ, ನೂರ ಹನ್ನೊಂದನೇ ವರ್ಷದ ಹೊಸ್ತಿಲಲ್ಲಿರುವ ಕೊಂಬೆಟ್ಟು ಸರಕಾರಿ ಪಿಯು ಕಾಲೇಜಿನಲ್ಲಿ ಶೇ.99 ಮಂದಿ ಬಡ ವಿದ್ಯಾರ್ಥಿಗಳಿರುವುದು. ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗೆ ದಾಸರಾಗಿ ತಮ್ಮ ಕಣ್ಣುಗಳು ಹಾನಿಗೊಳಗಾಗಿ ಸಣ್ಣ ಪ್ರಾಯದಲ್ಲಿಯೇ ಕನ್ನಡಕ ಧರಿಸುವ ಪ್ರಮೇಯ ಒದಗಿರುವುದು ಬೇಸರದ ಸಂಗತಿಯಾಗಿದ್ದು ವಿದ್ಯಾರ್ಥಿಗಳು ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ. ಪ್ರಕೃತಿಯು ಹೇಗೆ ಮನುಷ್ಯನಿಗೆ ಪರೋಪಕಾರಿ ಎನಿಸಿದೆಯೋ ಹಾಗೆಯೇ ಸೇವಾ ಸಂಸ್ಥೆಯಾಗಿರುವ ರೋಟರಿ ಸಂಸ್ಥೆಯಂತೆ ನಮ್ಮ ಜೀವನವೂ ಸೇವಾ ಮನೋಭಾವನೆಯನ್ನು ಹೊಂದುವಂತಾಗಬೇಕು ಎಂದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ನವೀನ್ ರೈ ಪಂಜಳ ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಈಸ್ಟ್ ಕೋಶಾಧಿಕಾರಿ ಜಯಂತ್ ಬಾಯಾರು, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಸಂಸ್ಕೃತ ಶಿಕ್ಷಕ ಹಾಗೂ ರೊಟೇರಿಯನ್ ಆಗಿರುವ ಪ್ರಕಾಶ್ ಕೆ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಹಿರಿಯ ಶಿಕ್ಷಕ ಹಾಗೂ ರೋಟರಿ ಸಿಟಿ ಪೂರ್ವಾಧ್ಯಕ್ಷ ಧರ್ಣಪ್ಪ ಗೌಡ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನ ಕಾಮತ್ ಆಪ್ಟಿಕಲ್ಸ್ ನ ಡಾ.ಲೋಕೇಶ್ ರವರ ನೇತೃತ್ವದಲ್ಲಿ ಎರಡು ದಿನ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಕಾಲೇಜಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಸುಮಾರು 1050 ವಿದ್ಯಾರ್ಥಿಗಳ ಕಣ್ಣಿನ ತಪಾಸಣೆಯನ್ನು ನಡೆಸಲಾಯಿತು ಜೊತೆಗೆ ಅಗತ್ಯವಿದ್ದವರಿಗೆ ಉಚಿತ ಕನ್ನಡಕವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.