ಇಂಜಿನಿಯರ್, ಅಧಿಕಾರಿಗಳ ಜೊತೆ ಶಾಸಕ ಅಶೋಕ್ ರೈ ಸಮಾಲೋಚನಾ ಸಭೆ
ಪುತ್ತೂರು: ಪುತ್ತೂರು ನಗರ ವ್ಯಾಪ್ತಿಯಲ್ಲಿ ವ್ಯಾಕ್ಯೂಮ್ ಟೆಕ್ನಾಲಜಿಯಲ್ಲಿ ವಿನೂತನ ಒಳಚರಂಡಿ ಅಭಿವೃದ್ದಿ ಕಾಮಗಾರಿ ನಡೆಸುವ ಬಗ್ಗೆ ಶಾಸಕರ ಕಚೇರಿ ಸಭಾಂಗಣದಲ್ಲಿ ಇಂಜಿನಿಯರ್ ಗಳ ಜೊತೆಗೆ ಶಾಸಕ ಅಶೋಕ್ ರೈ ರವರು ಸಮಾಲೋಚನೆ ನಡೆಸಿದರು.
ಶಾಸಕರು ಮಾತನಾಡಿ, ಪುತ್ತೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ ಸರಿಯಾದ ಒಳಚರಂಡಿ ವ್ಯವಸ್ಥೆಯಿಲ್ಲ, ಮುಂದಿನ ದಿನಗಳಲ್ಲಿ ಒಳಚರಂಡಿ ಸಮಸ್ಯೆ ಬಲು ದೊಡ್ಡ ಸಮಸ್ಯೆಯಾಗಿ ಮಾರ್ಪಾಡಾಗಬಹುದು ಇದಕ್ಕಿಂತ ಮುಂಚಿತವಾಗಿ ನಾವು ಆಧುನಿಕ ಟೆಕ್ನಾಲಜಿಯನ್ನು ಬಳಸಿ ಒಳಚರಂಡಿ ವಿಚಾರದಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಳ್ಳಬೇಕು ಎಂದು ಹೇಳಿದರು. ನಗರದಲ್ಲಿ ಈಗಾಗಲೇ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದ ಕಾರಣಕ್ಕೆ ಫ್ಲಾಟ್, ಹೊಟೇಲ್ ಹಾಗೂ ವಸತಿ ಸಮುಚ್ಚಯಗಳಲ್ಲಿ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.
ಬೈಪಾಸ್ನಿಂದ ದರ್ಬೆ ಮೂಲಕ ಎಪಿಎಂಸಿ ರಸ್ತೆಯಾಗಿ ಒಂದು ಲೈನ್ ನಿರ್ಮಾಣವಾದರೆ ಬೊಳುವಾರಿನಿಂದ ಮುಖ್ಯ ರಸ್ತೆಯಾಗಿ ಖಾಸಗಿ ಬಸ್ ನಿಲ್ದಾಣದ ಬಳಿ ಹಾದು ಹೋಗುವ ರೀತಿಯಲ್ಲಿ ಒಳಚರಂಡಿ ಕಾಮಗಾರಿ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಚರಂಡಿ ಕಾಮಗಾರಿ ನಡೆಸುವ ವೇಳೆ ಸಾರ್ವಜನಿಕರಿಗೆ, ವಾಹನ ಚಾಲಕರಿಗೆ ಹಾಗೂ ಅಂಗಡಿ ಮಾಲಕರುಗಳಿಗೆ ಆಗುವ ಸಮಸ್ಯೆಯನ್ನೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ವ್ಯಾಕ್ಯೂಮ್ ( ಗಾಳಿಯಲ್ಲಿ ತ್ಯಾಜ್ಯವನ್ನು ಎಳೆಯುವ ತಂತ್ರಜ್ಞಾನ) ಇದು ದೇಶದ ಕೆಲವು ಪ್ರಮುಖ ನಗರಗಳಲ್ಲಿ ಜಾರಿಯಲ್ಲಿದ್ದು ಅದನ್ನು ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ಅನುಷ್ಟಾನ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಮುಖ್ಯ ಇಂಜಿನಿಯರ್ ಅಜಯ್, ಸಹಾಯಕ ಇಂಜಿನಿಯರ್ ಗಳಾದ ಶೋಭಾ ಲಕ್ಷ್ಮೀ, ಶ್ರೀಕಾಂತ್, ನಗರಸಭಾ ಕಮಿಷನರ್ ವಿದ್ಯಾಕಾಳೆ, ಇಂಜನಿಯರ್ ಕೃಷ್ಣಮೂರ್ತಿ ರೆಡ್ಡಿ, ಮನೋಜ್ಕುಮಾರ್ , ನಗರಸಭಾ ಕಂದಾಯ ನಿರೀಕ್ಷಕ ರಾಜೇಶ್, ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ ಉಪಸ್ಥಿತರಿದ್ದರು.