*ಸೆ.3ಕ್ಕೆ ರಕ್ತದಾನ, ವರ್ಗೀಕರಣ ಶಿಬಿರ
*ಸೆ.4ಕ್ಕೆ ರೋಗಿಗಳಿಗೆ ಹಣ್ಣುಹಂಪಲು ವಿತರಣೆ
ಪುತ್ತೂರು: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಅವರ 1500ನೇ ಜನ್ಮದಿನಾಚರಣೆ ಪ್ರಯುಕ್ತ ಎಲ್ಲಾ ಮಸೀದಿಗಳಲ್ಲಿ ವಿಶೇಷ ಕಾರ್ಯಕ್ರಮ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ರಕ್ತದಾನ, ರಕ್ತವರ್ಗೀಕರಣ ಶಿಬಿರ ನಡೆಯಲಿದೆ. ರೋಗಿಗಳಿಗೆ ಹಣ್ಣಹಂಪಲು ವಿತರಣೆ ಮಾಡಲಾಗುತ್ತದೆ. ಪುತ್ತೂರಿನಲ್ಲಿ 33ನೇ ವರ್ಷದ ಮೀಲಾದ್ ಸಮಾವೇಶ ಮತ್ತು ನಾತೇ ಶರೀಫ್ ಸೆ.5ರಂದು ನಡೆಯಲಿದೆ ಎಂದು ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್‌ನ ಅಧ್ಯಕ್ಷ ಅಶ್ರಫ್ ಹಾಜಿ ಕಲ್ಲೇಗ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ಈದ್‌ಮಿಲಾದ್ ಸಮಿತಿ ಪುತ್ತೂರು ವತಿಯಿಂದ ಕಾರ್ಯಕ್ರಮ ನಡೆಯಲಿದ್ದು, ಸೆ.5ರಂದು ಸಂಜೆ ದರ್ಬೆ ಪ್ರವಾಸಿ ಮಂದಿರದಿಂದ ಆಕರ್ಷಣೀಯ ಕಾಲ್ನಡಿಗೆ ಜಾಥಾವು ದಫ್ ತಂಡಗಳೊಂದಿಗೆ ವೈವಿಧ್ಯಮಯ ಇಸ್ಲಾಮಿಕ್ ಕಲಾ ಸಾಹಿತ್ಯ ಪ್ರದರ್ಶನದೊಂದಿಗೆ ಕಿಲ್ಲೆ ಮೈದಾನಕ್ಕೆ ಬರಲಿದೆ. ಕಿಲ್ಲೆ ಮೈದಾನದಲ್ಲಿ ಮರ್‌ಹೂಂ ಸಾಲ್ಮರ ಅಬ್ಬು ಹಾಜಿ ಮತ್ತು ಸಹೋದರರು ವೇದಿಕೆಯಲ್ಲಿ ಮೀಲಾದ್ ಸಮಾವೇಶ ಜರುಗಲಿದೆ. ಈಶ್ವರ್ನ್ ಗ್ರೂಪ್ಸ್ ಆಫ್ ಕಂಪೆನಿಯ ಮಾಲಕ ಖಲಂದರ್ ಈಸ್ಟರ್ನ್ ಅವರು ಜಾಥಾ ಉದ್ಘಾಟಿಸಲಿದ್ದಾರೆ.
ಬಿ.ಜಿ.ಕನ್‌ಸ್ಟ್ರಕ್ಷನ್‌ನ ಮಾಲಕ ಜುನೈದ್ ಬಿ.ಜಿ ಅವರು ಧ್ವಜ ಸ್ವೀಕಾರ ಮಾಡಲಿದ್ದಾರೆ. ಆಸಿಫ್ ಪರ್ಲಡ್ಕ ಮತ್ತು ರಫೀಕ್ ರೋಯಲ್ ಗ್ರೂಪ್ಸ್ ಅವರು ಧ್ವಜಾರೋಹಣ ಮಾಡಲಿದ್ದಾರೆ. ಸಮಾವೇಶದಲ್ಲಿ ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಸ್ಯಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರು ದುವಾಶೀರ್ವಚ ನೀಡಲಿದ್ದಾರೆ. ಜನಪ್ರಿಯ ಫೌಂಡೇಶನ್‌ನ ಅಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ. ಎಂ.ಕೆ.ಸಿನಾನ್ ಸಖಾಫಿ ಅಜಿಲಮೊಗರು ಸಮಾವೇಶ ಉದ್ಘಾಟಿಸಲಿದ್ದಾರೆ. ಸೈಯ್ಯದ್ ಅಲಿ ಮುನ್ನಾನಿ ಅವರು ಪ್ರಭಾಷಣ ಮಾಡಲಿದ್ದಾರೆ. ಇದೇ ಸಂದರ್ಭ ಪಿ.ಎ ಉಸ್ಮಾನ್ ಚೆನ್ನಾರ್ ಸಂಪ್ಯ, ಎಲ್.ಟಿ. ಅಬ್ದುಲ್ ರಝಾಕ್, ಇಬ್ರಾಹಿಂ ಸಾಗರ್ ಅವರನ್ನು ಸನ್ಮಾನಿಸಲಾಗುವುದು. ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್‌ನ ಅಧ್ಯಕ್ಷ ಕೆ.ಪಿ.ಮಹಮ್ಮದ್ ಹಾಜಿ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಸುಮಾರು 5ಸಾವಿರಕ್ಕೂ ಮಿಕ್ಕಿ ಬಂದುಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ಹೇಳಿದರು.
ಸೆ.3ಕ್ಕೆ ರಕ್ತದಾನ, 4ಕ್ಕೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ:
ಪ್ರವಾದಿಯವರ 1500ನೇ ಜನ್ಮದಿನದ ಪ್ರಯುಕ್ತ ಹಲವು ವಿಶೇಷ ಕಾರ್ಯಕ್ರಮ ಜೋಡಣೆ ಮಾಡಲಾಗಿದ್ದು, ಸೆ.3ಕ್ಕೆ ಮುರ ಎಪಿಎಂ ವಿದ್ಯಲಯದಲ್ಲಿ ರಕ್ತದಾನ ಮತ್ತು ರಕ್ತವರ್ಗೀಕರಣ ನಡೆಯಲಿದೆ. ಸೆ. 4ಕ್ಕೆ ಬೆಳಿಗ್ಗೆ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ನಡೆಯಲಿದೆ ಎಂದು ಮುಸ್ಲಿಂ ಯುವಜನ ಪರಿಷತ್‌ನ ರಾಜ್ಯ ಸಂಚಾಲಕ ಎಂ.ಪಿ. ಅಬೂಬಕ್ಕರ್ ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನೌಶಾದ್ ಹಾಜಿ ಬೊಳ್ವಾರ್, ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಪ್ರಧಾನ ಕಾರ್ಯದರ್ಶಿ ರಸೀದ್ ಮುರ, ಕೋಶಾಧಿಕಾರಿ ಹನೀಫ್ ಬಗ್ಗುಮೂಲೆ ಉಪಸ್ಥಿತರಿದ್ದರು.