ಪುತ್ತೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸೇವಾ ಕೌಂಟರ್ ಮುಂಭಾಗದಲ್ಲಿ ಸೇವೆಗಳ ಹಣ ಪಾವತಿಗಾಗಿ ದೇವಳದ ಅರ್ಚಕರ ವೈಯಕ್ತಿಕ ಖಾತೆಯ ಯುಪಿಐ ಸ್ಕ್ಯಾನರ್ ಅಳವಡಿಸಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಸ್ಕ್ಯಾನರ್ ತೆಗೆದಿರುವ ಬಗ್ಗೆ ವರದಿಯಾಗಿದೆ. ಈ ವಿಚಾರ ಸುದ್ದಿಯಾಗುತ್ತಲೇ, ದೇವಳದ ಆಡಳಿತದಲ್ಲಿ ಅವ್ಯವಹಾರ ನಡೆದಿರುವ ಆರೋಪದ ಮಾತುಗಳು ಕೇಳಿ ಬಂದಿದೆ.
ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಾಲಯ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟಿದ್ದು ಸಿ. ಗ್ರೇಡ್ ಪಟ್ಟಿಯಲ್ಲಿದೆ. 2012 ರಿಂದ 15ರವರೆಗೆ ಇಲ್ಲಿ ರವಿಕಿರಣ್ ಶೆಟ್ಟಿ ಬೆದ್ರಾಡಿ ಅಧ್ಯಕ್ಷತೆಯಲ್ಲಿ ವ್ಯವಸ್ಥಾಪನಾ ಸಮಿತಿ ಇತ್ತು. 2015ರ ಬಳಿಕ ವ್ಯವಸ್ಥಾಪನಾ ಸಮಿತಿಯ ನೇಮಕವಾಗದೇ ಆಡಳಿತಾಧಿಕಾರಿಗಳ ನೇತ್ರತ್ವದಲ್ಲಿ ಆಡಳಿತ ನಡೆಯುತ್ತಿದೆ. ಕಳೆದ ಮೂರು ವರ್ಷದಿಂದ ನೆಟ್ಟಣಿಗೆ ಮುಡ್ನೂರು ಗ್ರಾಮಾಡಳಿತಧಿಕಾರಿ ಮಂಜುನಾಥ್ ಲಮಾಣಿ ಇಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ.
ಸೇವಾ ಕೌಂಟರ್‌ಗೆ ವೈಯುಕ್ತಿಕ ಖಾತೆಯ ಸ್ಕ್ಯಾನರ್ ಅಳವಡಿಕೆ
ದೇವಾಲಯದಲ್ಲಿನ ಸೇವಾ ಕೌಂಟರ್‌ನ ಮುಂಭಾಗ ಇತ್ತೀಚೆಗೆ ಡಿಜಿಟಲ್ ಪಾವತಿಗಾಗಿ ಸೇವಾ ಸ್ಕ್ಯಾನರ್ ಅಳವಡಿಸಲಾಗಿತ್ತು. ಆದರೆ ಇದು ದೇವಳದ ಖಾತೆಯಾಗಿರದೆ ದೇವಾಲಯದ ಪ್ರಧಾನ ಅರ್ಚಕ ರವಿ ಮಾಣಿಲತ್ತಾಯ ಎಂಬವರಿಗೆ ಸೇರಿದ ವೈಯಕ್ತಿಕ ಖಾತೆಯದ್ದು ಎಂಬುದು ಆ.19ರಂದು ಬಹಿರಂಗವಾಗಿದೆ. ಕಳೆದ 3 ತಿಂಗಳ ಹಿಂದೆ ಈ ಸ್ಕ್ಯಾನರ್ ಅಳವಡಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಚಾರ ವೈರಲ್ ಆಗುತ್ತಿದ್ದಂತೆ ಸೇವಾ ಕೌಂಟರ್ ಮುಂಭಾಗದಿಂದ ಸ್ಕ್ಯಾನರನ್ನು ತೆರವುಗೊಳಿಸಲಾಗಿದೆ.
ಆಡಳಿತ, ವ್ಯವಹಾರದಲ್ಲಿ ಅವ್ಯವಸ್ಥೆ ಆರೋಪ
ಸ್ಕ್ಯಾನರ್ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ದೇವಾಲಯದಲ್ಲಿ ಪ್ರಸ್ತುತ ಆಡಳಿತ ವ್ಯವಸ್ಥೆಯೇ ಸರಿ ಇಲ್ಲದಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆಡಳಿತಾಧಿಕಾರಿಯವರು ಸರಿಯಾಗಿ ದೇವಾಲಯಕ್ಕೆ ಆಗಮಿಸುವುದಿಲ್ಲ. ಸಿಬಂದಿಗೆ ಸಮಯಕ್ಕೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಹುಂಡಿ ಹಣ ಎಣಿಕೆಯಲ್ಲಿಯೂ ಪಾರದರ್ಶಕತೆ ಇಲ್ಲ.ಸೇವಾ ರಶೀದಿ ನೀಡುವಾಗ ರಶೀದಿಗೆ ದೇವಾಲಯದ ಸೀಲ್ ಹಾಕುವುದಿಲ್ಲ. ಭಕ್ತರಿಗೆ ಸೇವಾ ರಶೀದಿಗಳನ್ನು ನೀಡದೆ ಹಣ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಒಟ್ಟು ದೇವಾಲಯದಲ್ಲಿ ಸಮರ್ಪಕ ದಾಖಲೆಗಳು ಇಲ್ಲ ಎಂದು ಕೆಲವು ಭಕ್ತಾದಿಗಳಿಂದ ಆರೋಪ ವ್ಯಕ್ತವಾಗುತ್ತಿದೆ.
ಆಡಳಿತಾಧಿಕಾರಿಯನ್ನು ಅಮಾನತು ಮಾಡಿ ಕ್ರಮಕೈಗೊಳ್ಳಬೇಕು
ಸೇವಾ ರಶೀದಿಗೆ ಖಾಸಗಿ ನಂಬರ್ ಮೂಲಕ ಹಣ ಪಡೆದುಕೊಳ್ಳಲಾಗುತ್ತಿದೆ ಇದನ್ನು ನಾನು ಕೂಡ ಕಂಡಿದ್ದೇನೆ. ವೈಯುಕ್ತಿಕ ಖಾತೆಯ ಸ್ಕ್ಯಾನರ್ ಅಳವಡಿಕೆ ಮಾಡಿರುವುದು ತಪ್ಪು. ಇದಲ್ಲದೆ ದೇವಾಲಯದ ಆಡಳಿತದಲ್ಲಿ ಅವ್ಯವಹಾರ ಆಗುತ್ತಿದೆ. 2020ರಿಂದ ದೇವಾಲಯದ ವ್ಯವಹಾರದಲ್ಲಿ ಯಾವುದೇ ಲೆಕ್ಕಪತ್ರ ಇಲ್ಲದಾಗಿದೆ. ರಶೀದಿ ಇಲ್ಲದೆ ಸೇವಾ ಹಣ ಪಡೆಯುತ್ತಾರೆ. ದೇವಾಲಯದಲ್ಲಿ ಮೂರು ಹೊತ್ತು ಸರಿಯಾದ ಸಮಯಕ್ಕೆ ಪೂಜೆ ನಡೆಯುತ್ತಿಲ್ಲ. ಬೇಕಾದ ಸಮಯದಲ್ಲಿ ಪೂಜೆ ಮಾಡಲಾಗುತ್ತದೆ. ಹುಂಡಿ ಹಣದಲ್ಲಿ ಅವ್ಯವಸ್ಥೆಯಾಗಿದೆ. ಈ ಕೂಡಲೇ ದೇವಾಲಯದ ದಾಖಲೆ ಪರಿಶೀಲನೆ ಮಾಡಬೇಕು. ದೇವಾಲಯದಲ್ಲಿನ ಎಲ್ಲಾ ಅವ್ಯವಹಾರ, ಅವ್ಯವಸ್ಥೆಗಳಿಗೆ ಆಡಳಿತಾಽಕಾರಿಯವರೇ ನೇರ ಹೊಣೆಯಾಗಿದ್ದಾರೆ. ಆದುದರಿಂದ ಆಡಳಿತಾಽಕಾರಿಯವರನ್ನು ಅಮಾನತು ಮಾಡಿ ತಕ್ಷಣ ಕ್ರಮಕೈಗೊಳ್ಳಬೇಕು.
ರವಿಕಿರಣ್ ಶೆಟ್ಟಿ ಬೆದ್ರಾಡಿ, ಮಾಜಿ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ
ಕ್ಲರ್ಕ್ ರಜೆಯ ಕಾರಣ ಸ್ಕ್ಯಾನರ್ ಇಟ್ಟಿದ್ದೆ
ದೇವಾಲಯದ ಕ್ಲರ್ಕ್ 4 ದಿವಸ ರಜೆಯಲ್ಲಿದ್ದ ಕಾರಣ ನನಗೆ ಪೂಜಾದಿ ಕಾರ್ಯಕ್ರಮಗಳ ಜೊತೆಗೆ ಕಚೇರಿ ಕೆಲಸ ನಿರ್ವಹಣೆ ಅಸಾಧ್ಯವಾದ ಕಾರಣಕ್ಕಾಗಿ ಭಕ್ತಾದಿಗಳ ಅನುಕೂಲತೆಗಾಗಿ ನಾನು ಸ್ಕ್ಯಾನರ್ ತಂದು ಇಟ್ಟಿದ್ದೇನೆ. ಚಿಲ್ಲರೆ ಹಣದ ವ್ಯವಹಾರ ಕಷ್ಟವಾಗುತ್ತಿರುವುದಕ್ಕೆ ನನ್ನ ಅಂಗಡಿಯಲ್ಲಿ ಅಳವಡಿಕೆ ಮಾಡುತ್ತಿರುವ ಸ್ಕ್ಯಾನರ್‌ನ್ನು ನಾನು ಇಟ್ಟಿದ್ದೇನೆ. ಇದೀಗ ಸ್ಕ್ಯಾನರ್ ತೆಗೆದಿದ್ದೇನೆ.
ಜನಕ ರವಿ ಮಣಿಲತ್ತಾಯ, ಪ್ರಧಾನ ಅರ್ಚಕರು, ಶ್ರೀಪಂಚಲಿಂಗೇಶ್ವರ ದೇವಾಲಯ
ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ
ದೇವಾಲಯದ ಸಿಬ್ಬಂದಿಯವರು ಅರ್ಚಕರ ಸ್ಕ್ಯಾನರ್ ಅಳವಡಿಸಿದ್ದಾರೆ. ಯಾಕೆ ಸ್ಕ್ಯಾನರ್ ಹಾಕಿದ್ದಾರೆ ಎಂಬುದು ತಿಳಿದಿಲ್ಲ. ನಾನು ಊರಿಗೆ ಹೋಗಿದ್ದೆ ಬಳಿಕ ವಿಷಯ ಗೊತ್ತಾದ ಕೂಡಲೇ ಸ್ಕಾನರ್ ತೆಗೆದಿದ್ದೇನೆ. ಆ ಖಾತೆಯ ವ್ಯವಹಾರದ ಡಿಟೈಲ್ ತೆಗೆದು ಹಣ ಕಲೆಕ್ಟ್ ಮಾಡಿದ್ದೇನೆ. ಮುಂದೆ ಈ ರೀತಿ ಆಗದ ಹಾಗೆ ನೋಡಿಕೊಳ್ಳುತ್ತೇವೆ. ದೇವಾಲಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗುತ್ತಿದೆ.
ಮಂಜುನಾಥ್ ಲಮಾಣಿ, ಆಡಳಿತಾಧಿಕಾರಿ