ಪುತ್ತೂರು: ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಮಂಜುನಾಥ್ ಗೌಡ ಎಸ್.ಆರ್ ರವರು ಸ.1ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದರು.
ತಾಲೂಕು ಕೃಷಿಕ ಸಮಾಜ ಬಂಟ್ವಾಳ ಇದರ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದರು.

ಜಿಲ್ಲೆಯ ಕೃಷಿ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ನಿವೇಶನ ರಹಿತ ತಾಲೂಕು ಕೃಷಿಕ ಸಮಾಜಗಳು ತಕ್ಷಣ ಎಪಿಎಂಸಿ ಪ್ರಾಂಗಣ ಅಥವಾ ಸರಕಾರಿ ಜಾಗದಲ್ಲಿ ನಿವೇಶನವನ್ನು ಗುರುತು ಹಾಕಿ ಸರಕಾರಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಸೂಚನೆಯನ್ನು ನೀಡಿದರು. ನಿವೇಶನವನ್ನು ಖರೀದಿ ಮಾಡುವುದಿದ್ದರೆ ರಾಜ್ಯದಿಂದ ಹತ್ತು ಲಕ್ಷ ಅನುದಾನವನ್ನು ನೀಡುವುದಾಗಿ ತಿಳಿಸಿದರು. ಈಗಾಗಲೇ ನಿವೇಶನ ಹೊಂದಿರುವ ತಾಲೂಕುಗಳಿಗೆ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ಅನುದಾನವನ್ನು ರಾಜ್ಯದಿಂದ ನೀಡುವುದಾಗಿ ತಿಳಿಸಿದರು. ದಕ್ಷಿಣ ಕನ್ನಡ ಸೇರಿದಂತೆ ಮೈಸೂರು ವಿಭಾಗದಲ್ಲಿ ಎಂಟು ಜಿಲ್ಲಾ ಕೃಷಿಕ ಸಮಾಜಗಳು ಬರುತ್ತಿದ್ದು, ವಿಭಾಗ ಮಟ್ಟದ ಕೃಷಿ ಕ್ಷೇತ್ರ ಉತ್ಸವ, ಕೃಷಿಮೇಳ ನಡೆಸಲು ದಕ್ಷಿಣಕನ್ನಡ ಜಿಲ್ಲೆಯನ್ನು ಆಯ್ಕೆ ಮಾಡಿದ್ದು, 6 ಲಕ್ಷ ಅನುದಾನವನ್ನು ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರನ್ನು ಜಿಲ್ಲಾ ಕೃಷಿಕ ಸಮಾಜದಿಂದ ಗೌರವಿಸಲಾಯಿತು. ಜಿಲ್ಲಾಧ್ಯಕ್ಷ ವಿಜಯ ಕುಮಾರ್ ರೈ ಕೊರಂಗ, ರಾಜ್ಯ ಪ್ರತಿನಿಧಿ ಪದ್ಮನಾಭ ರೈ. ಉಪಾಧ್ಯಕ್ಷ ಚಂದ್ರ ಕೊಲ್ಚಾರ್, ರಾಜು ಪೂಜಾರಿ ಬೆಳ್ತಂಗಡಿ, ಮಹಾವೀರ್ ಜೈನ್, ಪದ್ಮರಾಜ್ ಬಲ್ಲಾಳ್. ಇಸ್ಮಾಯಿಲ್ ಉಳ್ಳಾಲ, ದೇವದಾಸ ಭಂಡಾರಿ ಭಾಗವಹಿಸಿದರು. ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಸ್ವಾಗತಿಸಿ, ವಂದಿಸಿದರು. ನಂತರ ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿ ದ. ಜಿಲ್ಲಾ ಜೇನುವ್ಯವಸಾಯ ಗಾರರ ಸಂಘದ ಸುಳ್ಯ ಶಾಖೆಗೆ ಭೇಟಿ ನೀಡಿ ಜೇನು ಸಂಸ್ಕರಣ ಘಟಕವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಬೆಂಗಳೂರಿಗೆ ನಿರ್ಗಮಿಸಿದರು.