ಶೂನ್ಯ ದಾಖಲಾತಿ: ಮುಚ್ಚಿದ ಚೇರು, ಮೀನಾಡಿ ಶಾಲೆ – ಶಿಕ್ಷಕರ ಕೊರತೆಯಿಂದ ನಡೆಯದ ದಾಖಲಾತಿ-ಸಂಘ ಸಂಸ್ಥೆಗಳ ಪ್ರಯತ್ನ ವಿಫಲ

0

ಕಡಬ: ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ಅವರ ಬಾಳು ಬೆಳಗಿಸಿದ ಕಡಬ ತಾಲ್ಲೂಕಿನ 2 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಈ ವರ್ಷದ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಶೂನ್ಯ ದಾಖಲಾತಿಯಿಂದಾಗಿ ಬಾಗಿಲು ಮುಚ್ಚಿದೆ. ಶಿಕ್ಷಕರ ಕೊರತೆಯಿಂದಾಗಿ ಶಾಲೆ ಹೀಗಾಗಿರುವ ಬಗ್ಗೆ ಗ್ರಾಮಸ್ಥರು ಮತ್ತು ಶಿಕ್ಷಣ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ರೆಂಜಿಲಾಡಿ ಗ್ರಾಮದ ಮೀನಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಬಿಳಿನೆಲೆ ಗ್ರಾಮದ ಚೇರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ದಾಖಲಾತಿ ಕೊರತೆ ಎದುರಾಗಿ ಶೈಕ್ಷಣಿಕ ಚಟುಟವಟಿಕೆ ಸ್ಥಬ್ಧವಾಗಿದೆ.


ವಜ್ರ ಮಹೋತ್ಸವ ಆಚರಿಸಲಿದ್ದ ಮೀನಾಡಿ ಶಾಲೆ:
ಸುಮಾರು 60 ವರ್ಷ ದಾಟಿದ, ವಜ್ರ ಮಹೋತ್ಸವದ ಹೊಸ್ತಿಲಲ್ಲಿದ್ದ ಮೀನಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಯಾವುದೇ ದಾಖಲಾತಿ ನಡೆದಿಲ್ಲ. ಕಳೆದ ವರ್ಷ ಇಲ್ಲಿ 4 ವಿದ್ಯಾರ್ಥಿಗಳಿದ್ದರು. ಇವರ ಮನೆಯ ಇಬ್ಬರು 5 ಮತ್ತು 6 ನೇ ತರಗತಿಯಲ್ಲಿ ಬೇರೆ ಶಾಲೆಗೆ ದಾಖಲಾಗಿದ್ದು, ಇವರುಗಳೂ ಅವರ ಜೊತೆ ತೆರಳಿದ್ದಾರೆ. ಈ ಬಾರಿ ಹೊಸ ವಿದ್ಯಾರ್ಥಿಗಳ ದಾಖಲಾತಿ ನಡೆಯದೇ ಶಾಲೆಯನ್ನು ಅನಿವಾರ್ಯವಾಗಿ ಬಾಗಿಲು ಮುಚ್ಚಲೇಬೇಕಾಯಿತು.


ಕೆಲವು ವರ್ಷಗಳ ಹಿಂದೆ ಈ ಶಾಲೆಗೆ ರೈಲುಬೋಗಿಗಳ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸುವಂತೆ ಮಾಡಿ ಮೀನಾಡಿ ಎಕ್ಸ್‌ಪ್ರೆಸ್ ಎಂದು ಹೆಸರನ್ನೂ ನೀಡಲಾಗಿ, ಶಾಲಾ ಶಿಕ್ಷಕರು ಎಸ್‌ಡಿಎಂಸಿಯವರು ಮತ್ತು ಸ್ಥಳೀಯ ಶಿಕ್ಷಣ ಪ್ರೇಮಿಗಳು ಮಕ್ಕಳ ದಾಖಲಾತಿ ಹೆಚ್ಚಿಸುವ ಪ್ರಯತ್ನ ಮಾಡಿದ್ದರೂ ಯಾವುದೂ ಫಲ ನೀಡದೇ ಶಾಲೆ ಮುಚ್ಚುವ ಹಂತಕ್ಕೆ ತಲುಪಿದೆ. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸಲಾಗಿದೆ.


ಬಿಳಿನೆಲೆ ಶಾಲೆ:
ಬಿಳಿನೆಲೆ ಗ್ರಾಮದ ಚೇರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ ಇಲ್ಲಿ 5ನೇ ತರಗತಿಯಲ್ಲಿ ಇಬ್ಬರು, 3 ಹಾಗೂ 4ನೇ ತರಗತಿಯಲ್ಲಿ ತಲಾ ಓರ್ವ ವಿದ್ಯಾರ್ಥಿಗಳಿದ್ದರು. 5ನೇ ತರಗತಿಯಲ್ಲಿದ್ದ ಇಬ್ಬರು 6ನೇ ತರಗತಿಗೆ ಬೇರೆ ಶಾಲೆಗೆ ತೆರಳಿದ್ದು, ಈ ವರ್ಷ ಬೇರೆ ಯಾವುದೇ ಮಕ್ಕಳು ಸೇರ್ಪಡೆ ಆಗದ ಹಿನ್ನೆಲೆಯಲ್ಲಿ ಇದ್ದ ಇಬ್ಬರು ಮಕ್ಕಳನ್ನು ಅವರ ಪೋಷಕರು ಬೇರೆ ಶಾಲೆಗೆ ಸೇರ್ಪಡೆ ಮಾಡಿದ್ದರಿಂದ ಶಾಲೆ ಮುಚ್ಚುವ ಹಂತ ತಲುಪಿದೆ.


ಶಾಲೆಯನ್ನು ಉಳಿಸುವ ಉದ್ದೇಶದಿಂದ ಸಂಘ-ಸಂಸ್ಥೆಗಳು ಪ್ರಯತ್ನ ಪಟ್ಟಿದ್ದರೂ ಅದು ಫಲ ನೀಡಿಲ್ಲ. ಸರ್ಕಾರಿ ಶಾಲೆಗಳನ್ನು ಊರಿನ ಹಿರಿಯರು ಕಟ್ಟಿ ಬೆಳೆಸಲು ಅದೆಷ್ಟೋ ಕಷ್ಟ ಪಟ್ಟಿರುತ್ತಾರೆ. ಆದರೆ ಇಂದು ವಿವಿಧ ಕಾರಣಗಳಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದು ವಿಪರ‍್ಯಾಸ ಎಂದು ಶಿಕ್ಷಣ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮುಚ್ಚಿರುವ ಶಾಲೆಗಳ ಆಸ್ತಿ, ಸೊತ್ತುಗಳನ್ನು ರಕ್ಷಿಸಲು ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.‌

ಕೆಲ ವರ್ಷಗಳಿಂದ ಇಲ್ಲಿ ಖಾಯಂ ಶಿಕ್ಷಕರೇ ಇಲ್ಲ, ಒಬ್ಬರನ್ನು ಬೇರೆ ಶಾಲೆಯಿಂದ ನಿಯೋಜನೆ ಮಾಡಲಾಗಿತ್ತು. ಅವರು ಶಿಕ್ಷಣ ಸಂಯೋಜಕರಾಗಿದ್ದರು. (ಸಿ.ಆರ್.ಪಿ.) ಅವರು ಅದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಕಲಿಕಾ ವ್ಯವಸ್ಥೆಯೇ ಸರಿ ಇರಲಿಲ್ಲ, ಜೊತೆಗೆ ಖಾಸಗಿ ಶಾಲೆಗಳ ಅಬ್ಬರವೂ ಅಧಿಕವಾಗಿತ್ತು. ಕಳೆದ ಹಲವಾರು ವರ್ಷಗಳಿಂದ ಶಾಲಾಭಿವೃದ್ಧಿ ಸಮಿತಿ ಸದಸ್ಯನಾಗಿದ್ದುಕೊಂಡು, ದಾನಿಗಳ ಸಹಕಾರ ಪಡೆದುಕೊಂಡು ಶಾಲೆಗೆ ಆವರಣ ಗೋಡೆ, ಕುಡಿಯುವ ನೀರಿನ ವ್ಯವಸ್ಥೆ ಟೈಲ್ಸ್ ಅಳವಡಿಕೆ, ಆಕರ್ಷಕ ಬಣ್ಣ ಮೊದಲಾದ ಮೂಲ ಸೌಕರ್ಯದ ವ್ಯವಸ್ಥೆ ಕಲ್ಪಿಸಿಕೊಂಡು ಶಾಲೆಯನ್ನು ಉಳಿಸಲು ಬಹಳ ಪ್ರಯತ್ನಿಸಿದೆವು. ಆದರೆ ಅದು ಫಲ ಕೊಡಲಿಲ್ಲ, ಮುಂದೆ ಶಿಕ್ಷಕರ ವ್ಯವಸ್ಥೆ ಮಾಡಿದರೆ ಖಂಡಿತವಾಗಿಯೂ ಮೊದಲಿನಂತೆ ಶಾಲೆಯನ್ನು ಮುನ್ನಡೆಸಬಹುದು.
-ಕೆ.ಜೆ. ತೋಮಸ್, ಮಾಜಿ ಸದಸ್ಯರು, ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ.

ಕಡಬ ತಾಲ್ಲೂಕಿನ ಮೀನಾಡಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಚೇರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ದಾಖಲಾತಿ ಆಗದ ಕಾರಣ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮುಂದೆ ಶಿಕ್ಷಕರನ್ನು ವ್ಯವಸ್ಥೆ ಮಾಡಿಕೊಂಡು ಶಾಲೆಯನ್ನು ತೆರೆಯಲಾಗುವುದು.
-ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

LEAVE A REPLY

Please enter your comment!
Please enter your name here