ಕೈಕಾರ: ಜನನಿ ಜ್ಞಾನ ವಿಕಾಸ ಕೇಂದ್ರದ ಸಭೆ- ಪೌಷ್ಠಿಕ ಆಹಾರ ಸವಿಯುತ್ತಲೇ ಮಾಹಿತಿ ಕಾರ್ಯಕ್ರಮ

0

ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಬಾಳಿಗೆ ಬೆಳಕಾಗಿದೆ: ಸೀತಾರಾಮ ರೈ

ಪುತ್ತೂರು: ತುಳುನಾಡಿನಲ್ಲಿ ಹಿರಿಯರು ಬಳಕೆ ಮಾಡುತ್ತಿದ್ದ ವಿವಿಧ ಮರದ ಚಿಗುರುಗಳ ಚಟ್ನಿ ಸೇರಿದಂತೆ 24 ಬಗೆಯ ವಿವಿಧ ಪೌಷ್ಠಿಕ ಆಹಾರಗಳನ್ನು ತಯಾರಿಸಿ ತಂದು ಅದನ್ನು ಸವಿಯುತ್ತಲೇ ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದ ಒಂದು ವಿಶೇಷ ಕಾರ್ಯಕ್ರಮ ಕೈಕಾರದಲ್ಲಿ ಸೆ.5ರಂದು ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ಬೆಟ್ಟಂಪಾಡಿ ವಲಯದ ಕೈಕಾರ ಜನನಿ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ನಡೆದ ಜ್ಞಾನ ವಿಕಾಸ ಸಭೆಯು ಬಹಳ ವಿಶೇಷ ರೀತಿಯಲ್ಲಿ ನಡೆಯಿತು. ಸಭೆಯಲ್ಲಿ ಮಂಗಳೂರು ಎಂಆರ್‌ಪಿಎಲ್ ಉದ್ಯೋಗಿ ಸೀತಾರಾಮ ರೈ ಚೆಲ್ಯಡ್ಕರವರು ದೀಪ ಬೆಳಗಿಸಿ ಉದ್ಘಾಟಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅದೆಷ್ಟೋ ಮಹಿಳೆಯರ ಜೀವನಕ್ಕೆ ದಾರಿ ದೀಪವಾಗಿದೆ. ಆರ್ಥಿಕ ನೆರವಿವೊಂದಿಗೆ ಜೀವನ ಕ್ರಮ, ಬದುಕಿಗೆ ದಾರಿ ತೋರಿಸಿದೆ ಎಂದರು. ಒಂದು ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬಹಳ ಖುಷಿ ತಂದಿದೆ ಎಂದು ಹೇಳಿ ಶುಭ ಹಾರೈಸಿದರು.


ಪರ್ಪುಂಜ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾ ಅಧಿಕಾರಿ ಪ್ರಮೀಳಾರವರು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡುತ್ತಾ, ಆರೋಗ್ಯಕರ ಶರೀರಕ್ಕೆ ಪೌಷ್ಠಿಕ ಆಹಾರ ಬಹಳ ಅಗತ್ಯವಿದೆ. ಅದರಲ್ಲೂ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿಕೊಳ್ಳಬೇಕು ಎಂದು ತಿಳಿಸಿ ಪೌಷ್ಠಿಕಾಂಶಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಜನನಿ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಂತಿ ಪುಂಡಿಕಾಯಿ ಸಭಾಧ್ಯಕ್ಷತೆ ವಹಿಸಿದ್ದರು. ವಲಯ ಮೇಲ್ವಿಚಾರಕ ಸೋಹಾನ್ ಗೌಡರವರು ಜ್ಞಾನ ವಿಕಾಸ ಕೇಂದ್ರದಿಂದ ವಿಶೇಷ ರೀತಿಯಲ್ಲಿ ನಡೆದ ಪೌಷ್ಠಿಕ ಆಹಾರ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗನ್ನಾಡಿದರು. ಪತ್ರಕರ್ತ ಸಿಶೇ ಕಜೆಮಾರ್‌ರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಸದಸ್ಯೆ ರೇಖಾ ಯತೀಶ್, ಪಗ್ರತಿಪರ ಕೃಷಿಕ ಚಂದ್ರಹಾಸ ರೈ ಕೈಕಾರ, ಗ್ರಾಮಾಭಿವೃದ್ಧಿ ಯೋಜನೆಯ ಜಯಣ್ಣ ಉಪಸ್ಥಿತರಿದ್ದರು.


ಬೆಟ್ಟಂಪಾಡಿ ವಲಯ ಸೇವಾ ಪ್ರತಿನಿಧಿ ತ್ರಿವೇಣಿ ಪಲ್ಲತ್ತಾರು ಸ್ವಾಗತಿಸಿದರು. ಜನನಿ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಸುಚೇತಾ ರೈ ವಂದಿಸಿದರು. ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರುಗಳು ಸಹಕರಿಸಿದ್ದರು.


24 ಬಗೆಯ ಪೌಷ್ಠಿಕ ಆಹಾರಗಳು
ಸಭೆಯಲ್ಲಿ ವಿಶೇಷವಾಗಿ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರು ತಮ್ಮ ಮನೆಯಲ್ಲಿ ಮಾಡಿಕೊಂಡು ಬಂದಿರುವ 24 ಬಗೆಯ ಪೌಷ್ಠಿಕ ಆಹಾರವನ್ನು ಸವಿಯಲಾಯಿತು. ಅದರಲ್ಲಿ ಮೆಂತ್ಯೆ ಮನ್ನಿ, ಕೆಸುವಿನ ಬೇರು ಗಸಿ, ವಿವಿಧ ಬಗೆಯ ಸಸ್ಯ ಚಿಗುರಿನ ಚಟ್ನಿ, ವಿಟಮಿನ್ ಸೊಪ್ಪು, ಹೆಸರುಕಾಳು ಪಲ್ಯ, ತಜಂಕ್ ಪಲ್ಯ, ಬಾಳೆದಿಂಡು ಪಲ್ಯ, ಹುರುಳಿ ಚಟ್ನಿ, ಹಾಗಲಕಾಯಿ ಗಸಿ, ಪತ್ರೊಡೆ, ರಾಗಿ ಕಷಾಯ, ವೋಟ್ಸ್ ಫ್ರುಟ್ಸ್ ಮಿಕ್ಸ್, ಮೊಳಕೆ ಬರಿಸಿದ ಕಡ್ಲೆ, ಹೆಸರು, ಹುರುಳಿ, ಬಟಾಣಿ, ಅಲಸಂಡೆ ಸೊಪ್ಪು ಪಲ್ಯ, ಬಾಳೆ ಹೂ ಚಟ್ನಿ, ರಾಗಿ ಮನ್ನಿ, ಒಂದೆಲಗ ಚಟ್ನಿ, ಕ್ಯಾರೆಟ್,ಈರುಳ್ಳಿ, ಕೋಸಂಬರಿ, ಈರುಳ್ಳಿ ಮುಳ್ಳುಸೌತೆ ಚಳ್ಳಿ ಇತ್ಯಾದಿ ಆಹಾರ ಪದಾರ್ಥಗಳು ಗಮನ ಸೆಳೆದವು. ಆಹಾರ ತಯಾರಿಸಿಕೊಂಡು ಬಂದಿರುವ ಮಹಿಳೆಯರಲ್ಲಿ ರೇಖಾ, ಸರೋಜಿನಿ, ಗಂಗಾ ಮತ್ತು ವನಿತಾ ರೈ ಆಹಾರದಲ್ಲಿರುವ ಪೌಷ್ಠಿಕಾಂಶದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಆಹಾರ ತಯಾರಿಸಿಕೊಂಡು ಬಂದಿರುವ ಸದಸ್ಯೆಯರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ಕಾವ್ಯಶ್ರೀ, ಸೇವಾ ಪ್ರತಿನಿಧಿ ತ್ರಿವೇಣಿ ಪಳ್ಳತ್ತಾರು ಕಾರ್ಯಕ್ರಮದ ಹಿಂದೆ ವಿಶೇಷ ಮುತುವರ್ಜಿ ವಹಿಸಿದರು.



ಒಂದು ವಿಭಿನ್ನ ಕಾರ್ಯಕ್ರಮ
ಪೌಷ್ಠಿಕ ಆಹಾರ ಮಾಹಿತಿ ಕಾರ್ಯಕ್ರಮದಲ್ಲಿ ಕೇವಲ ಮಾಹಿತಿ ಮಾತ್ರವಲ್ಲದೆ ಪೌಷ್ಠಿಕ ಆಹಾರಗಳನ್ನು ಮನೆಯಲ್ಲಿ ತಯಾರಿಸಿಕೊಂಡು ಬಂದು ಅದನ್ನು ಸವಿಯುವ ಮೂಲಕ ಮಾಹಿತಿ ಪಡೆದುಕೊಂಡದ್ದು ವಿಶೇಷವಾಗಿತ್ತು ಈ ಮೂಲಕ ಮತ್ತೊಮ್ಮೆ ಮರೆತು ಹೋದ ಆಹಾರಗಳನ್ನು ನೆನಪು ಮಾಡಿಕೊಳ್ಳುವಂತಾಯಿತು. ಇಂತಹ ವಿಭಿನ್ನ ಕಾರ್ಯಕ್ರಮ ಆಯೋಜನೆ ಮಾಡಿದ ಹೆಗ್ಗಳಿಕೆ ಕೈಕಾರ ಜನನಿ ಜ್ಞಾನ ವಿಕಾಸ ಕೇಂದ್ರಕ್ಕೆ ಸಂದಿದೆ.

LEAVE A REPLY

Please enter your comment!
Please enter your name here