ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸತೀಶ್ ಭಟ್‌ಗೆ ರಾಮಕುಂಜ ವಿದ್ಯಾಸಂಸ್ಥೆಯಿಂದ ಸನ್ಮಾನ

0

ರಾಮಕುಂಜ: 2024-25ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್ ಅವರಿಗೆ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ವತಿಯಿಂದ ಅಭಿನಂದನೆ ಹಾಗೂ ಶಿಕ್ಷಕ ದಿನಾಚರಣೆ ಸೆ.6ರಂದು ಶ್ರೀ ರಾಮಕುಂಜೇಶ್ವರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ರಾಜ್ಯ ಪ್ರಶಸ್ತಿ ಪುರಸ್ಕೃತ ಸತೀಶ್ ಭಟ್ ಅವರಿಗೆ ಸಂಸ್ಥೆಯ ವತಿಯಿಂದ ಶಾಲು,ಹಾರಾರ್ಪಣೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಅಭಿನಂದನಾ ಭಾಷಣ ಮಾಡಿದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸಂಚಾಲಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಟಿ.ನಾರಾಯಣ ಭಟ್ ಅವರು, ಸತೀಶ್ ಭಟ್ ಅವರಿಗೆ ರಾಜ್ಯಪ್ರಶಸ್ತಿ ಬಂದಿರುವುದರಿಂದ ಕೇವಲ ರಾಮಕುಂಜಕ್ಕೆ ಮಾತ್ರವಲ್ಲ ಜಿಲ್ಲೆಗೆ ಗೌರವ ಸಿಕ್ಕಿದೆ. ಶಿಕ್ಷಕರಿಗೆ ವಿದ್ಯಾರ್ಥಿಗಳ, ಊರಿನವರ ಪ್ರೀತಿಗಿಂತ ದೊಡ್ಡ ಪ್ರಶಸ್ತಿ ಇಲ್ಲ. ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯು ಅಮೃತ ಮಹೋತ್ಸವದ ಸಮೀಪದಲ್ಲಿದೆ. ಇಂತಹ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಚಾರ. ಅವರು ಬದುಕಿನಲ್ಲಿ ಮಾಡಿದ ಶ್ರೇಷ್ಠ ಸಾಧನೆಗೆ ಪ್ರಶಸ್ತಿ ದೊರೆತಿದೆ. ಮುಂದಿನ ವರ್ಷ ರಾಷ್ಟ್ರಪ್ರಶಸ್ತಿ ಲಭಿಸಲಿ ಎಂದರು.

ಅತಿಥಿಯಾಗಿದ್ದ ಸತೀಶ್ ಭಟ್ ಅವರ ಮೊದಲ ಬ್ಯಾಚ್‌ನ ಶಿಷ್ಯ, ಎಸ್‌ಆರ್‌ಕೆ ಲ್ಯಾಡರ‍್ಸ್‌ನ ಕೇಶವ ಅಮೈ ಮಾತನಾಡಿ, ಸತೀಶ್ ಭಟ್ ಅವರ ಸೇವೆಗೆ ಬಹಳ ವರ್ಷದ ಹಿಂದೆಯೇ ರಾಜ್ಯ ಪ್ರಶಸ್ತಿ ಸಿಗಬೇಕಿತ್ತು. ಅವರಿಂದ ಕಲಿತ ಹಲವಾರು ಶಿಷ್ಯರು ಒಳ್ಳೆಯ ರೀತಿಯಲ್ಲಿ ಬೆಳೆದಿದ್ದಾರೆ. ಸತೀಶ್ ಭಟ್ ಅವರು ಬಡತನದಲ್ಲೇ ಬೆಳೆದಿರುವುದರಿಂದ ಅವರಿಗೆ ವಿದ್ಯಾರ್ಥಿಗಳ ಮೇಲೆ ಕಾಳಜಿ ಇದೆ. ನಾನು ಉದ್ಯಮಿಯಾಗಿ ಬೆಳೆಯಲು ಪೌಂಡೇಶನ್ ಹಾಕಿಕೊಟ್ಟವರು ಸತೀಶ್ ಭಟ್ ಎಂದರು. ಸತೀಶ್ ಭಟ್‌ರವರ ಇನ್ನೋರ್ವ ಶಿಷ್ಯ, ಕಡಬ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಮಾತನಾಡಿ, ಪ್ರಶಸ್ತಿ ಸತೀಶ್ ಭಟ್ ಅವರನ್ನು ಹುಡುಕಿಕೊಂಡು ಬಂದಿದೆ ಎಂದರು. ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ.ಮಾಧವ ಭಟ್ ಅವರು ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿದರು.


ಅಭಿನಂದನೆ ಸ್ವೀಕರಿಸಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತರೂ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್‌ರವರು ಮಾತನಾಡಿ, ಹಳ್ಳಿಯಲ್ಲಿ ಹುಟ್ಟಿ ಬಡತನದಲ್ಲೇ ಮೇಲೆ ಬಂದಿರುವುದರಿಂದ ವಿದ್ಯಾರ್ಥಿಗಳ ಕಷ್ಟ ಅರ್ಥಮಾಡಿಕೊಳ್ಳಲು ಹಾಗೂ ಜೀವನದಲ್ಲಿ ಎದುರಿಸಿದ ಸವಾಲುಗಳಿಂದಲೇ ಮುಂದೆ ಬರಲು ಸಾಧ್ಯವಾಯಿತು. ಎಲ್ಲಾ ಕೆಲಸಗಳಿಗೂ ಸಂಸ್ಥೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹ ನೀಡಿದೆ. ಶಿಕ್ಷಕನಾಗಿ ಬೆಳೆಯಲು ಶಿಷ್ಯಂದಿರೇ ಕಾರಣ. ವಿದ್ಯಾರ್ಥಿಗಳೇ ಆಸ್ತಿಯಾಗಿದ್ದಾರೆ. ಹಲವು ಶಿಷ್ಯಂದಿರು ಸೇನೆಯಲ್ಲಿದ್ದಾರೆ. ಉದ್ಯಮಿಗಳಾಗಿದ್ದಾರೆ. ಅವರೊಂದಿಗೆ ಇಂದಿಗೂ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ ಅವರು, ಜೆಸಿಐಯಲ್ಲಿ ತೊಡಗಿಕೊಂಡಿರುವುದರಿಂದ ಉತ್ತಮ ಪಾಠವೂ ದೊರೆಯಿತು ಎಂದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್.ಮಾತನಾಡಿ, ಸತೀಶ್ ಭಟ್ ಅವರಿಗೆ ರಾಜ್ಯಪ್ರಶಸ್ತಿ ದೊರೆತಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಿಂದ ರಾಮಕುಂಜಕ್ಕೆ ವರ್ಗಾವಣೆಗೊಂಡು ಬಂದಿರುವ ಸತೀಶ್ ಭಟ್ ಇಲ್ಲಿ 14 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಂದ ಶಾಲೆಗೆ ಬಹಳಷ್ಟು ಅನುಕೂಲವಾಗಿದೆ. ಹಳೆ ವಿದ್ಯಾರ್ಥಿಗಳಿಂದ, ವಿವಿಧ ಕಂಪನಿಗಳ ಸಿಎಸ್‌ಆರ್ ಫಂಡ್ ಮೂಲಕ ಶಾಲೆಗೆ ಅನುದಾನ ತಂದು ವಿವಿಧ ಯೋಜನೆ ಕಾರ್ಯಗತಗೊಳಿಸಿದ್ದಾರೆ. ಶಿಕ್ಷಣ ಸಂಸ್ಥೆ ಹೇಗಿರಬೇಕು ಎಂಬುದನ್ನು ಸತೀಶ್ ಭಟ್ ಅವರಿಂದ ಕಲಿಯಬೇಕಾಗಿದೆ. ಮುಂದೆಯು ಅವರಿಂದ ಉತ್ತಮ ಸೇವೆ ಸಿಗಲಿ ಎಂದರು. ಶಿಕ್ಷಕ ವೆಂಕಟೇಶ್ ದಾಮ್ಲೆ ಅವರು ಸತೀಶ್ ಭಟ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದರು.


ಆಡಳಿತ ಮಂಡಳಿ ಕೋಶಾಧಿಕಾರಿ ಸೇಸಪ್ಪ ರೈ, ಸದಸ್ಯ ಲಕ್ಷ್ಮೀನಾರಾಯಣ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಚಂದ್ರಶೇಖರ ಕೆ.ವಂದಿಸಿದರು. ಉಪನ್ಯಾಸಕ ಚೇತನ್ ಮೊಗ್ರಾಲ್ ನಿರೂಪಿಸಿದರು.

ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಉಪನ್ಯಾಸಕರಿಗೆ, ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗಳಿಗೆ, ಅಡುಗೆ ಸಿಬ್ಬಂದಿಗಳಿಗೆ ಗುಲಾಬಿ ಹೂ ನೀಡಿ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದರು.

LEAVE A REPLY

Please enter your comment!
Please enter your name here