ಉಪ್ಪಿನಂಗಡಿ: ‘ಸಾಂಪ್ರದಾಯದ ಬೇರುಗಳು ನಾವೀನ್ಯತೆಯ ರೆಕ್ಕೆಗಳು’ ಎಂಬ ಧ್ಯೇಯ ವಾಕ್ಯದೊಂದಿಗೆ ಇಂದ್ರಪ್ರಸ್ಥ ಕಾಲೇಜಿನಲ್ಲಿ “ಬಯೋನಿಕಾ-2025” ಸಾಂಪ್ರಾದಾಯಿಕ ಆಯುರ್ವೇದ ಔಷಧೀಯ ಯೋಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಉಪ್ಪಿನಂಗಡಿಯ ಜೋಸ್ಸಿಸ್ ಆಯರ್‌ಕೇರ್ ಆಸ್ಪತ್ರೆಯ ವೈದ್ಯ ಡಾ.ಸುಪ್ರೀತ್ ಲೋಬೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಯುರ್ವೇದ ವಿಜ್ಞಾನವು ಒಂದು ವಿಶಾಲ ಸಾಗರದಂತಿದ್ದು, ಅಪರಿಮಿತವಾದ ವಿಜ್ಞಾನ ಲೋಕವಾಗಿದೆ. ಆಯುರ್ವೇದ ಜೌಷಧಿಯ ಸಸ್ಯಗಳನ್ನು ಬೆಳೆಸುವುದು ಹಾಗೂ ಆಯುರ್ವೇದ ಔಷಧೀಯ ಬಳಕೆಯು ದೈನಂದಿನ ಜೀವನದಲ್ಲಿ ಒಂದು ಹವ್ಯಾಸವಾಗಿ ರೂಢಿಗತವಾಗಿರಬೇಕೇ ಹೊರತು ಜೌಷಧೋಪಚಾರ ಬಳಕೆಗೆ ಮಾತ್ರ ಸೀಮಿತವಾಗಿರಬಾರದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಡಾ. ಸುಧಾ ಎಸ್. ರಾವ್, ಆಯುರ್ವೇದ ಎನ್ನುವುದು ಒಂದು ಆರೋಗ್ಯಕರವಾದ ಜೀವನ ವಿಧಾನವಾಗಿದೆ, ಮಾತ್ರವಲ್ಲದೆ ಇದು ಭಾರತೀಯ ಜ್ಞಾನ ಪರಂಪರೆಯ ವ್ಯವಸ್ಥೆಯಾಗಿದೆ. ವಿದ್ಯಾರ್ಥಿಗಳು ಇದನ್ನು ತಮ್ಮ ಜೀವನದಲ್ಲಿ ನಿರಂತರವಾಗಿ ಅಳವಡಿಸಿಕೊಂಡು ಮುಂದುವರಿದು ಅದನ್ನು ಉಳಿಸಿ ಬೆಳೆಸು ಕಾರ್ಯ ಮಾಡಬೇಕೆಂದರು.
ವೇದಿಕೆಯಲ್ಲಿಇಂದ್ರಪ್ರಸ್ಥ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಕರುಣಾಕರ ಸುವರ್ಣ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಕೆ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಸದಸ್ಯರಾದ ರಾಜೇಶ್ ಪೈ, ವಂದನಾ, ಸುಧಾಕರ ಶೆಟ್ಟಿ, ಇಂದ್ರಪ್ರಸ್ಥದ ವಿದ್ಯಾಲಯದ ಮುಖ್ಯ ಗುರು ವೀಣಾ ಆರ್. ಪ್ರಸಾದ್ ಈ ಸಂದರ್ಭ ಉಪಸ್ಥಿತರಿದ್ದರು. ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಂಪ್ರಾದಾಯಿಕ ಔಷಧಗಳ ಬಳಕೆ, ಪ್ರಾಚೀನ ಭಾರತೀಯ ವಿಜ್ಞಾನಿಗಳ ಕುರಿತು ವಿಚಾರಗೋಷ್ಠಿ, ಪೇಪರ್‌ಕೊಲಾಜ್, ವಾಲ್ ಮ್ಯಾಗಜಿನ್, ಪಾರಂಪರಿಕ ವಸ್ತುಗಳ ಪ್ರದರ್ಶನ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಶ್ರೀ ರಾಮ ಶಾಲೆಯ ಸಂಚಾಲಕರಾದ ಯು.ಜಿ. ರಾಧಾ ಮಾತನಾಡಿ, ಇಂದಿನ ಬಯೋನಿಕಾ ಕಾರ್ಯಕ್ರಮ ಭಾರತ ದರ್ಶನ ಮಾಡಿದೆ. ಸ್ಪರ್ಧೆಯಲ್ಲಿ ಬಹುಮಾನ ಪಡೆಯುವುದು ಮುಖ್ಯವಲ್ಲ ಭಾರತದ ಪಾರಂಪರಿಕ ಔಷಧಿಯ ಶೈಲಿಯಾದ ಆಯುರ್ವೇದದ ಸತ್ಯವನ್ನು ತಿಳಿದುಕೊಂಡಾಗ ನಮ್ಮ ಮುಂದಿನ ಜೀವನ ಶೈಲಿ ಉತ್ತಮವಾಗಿರುತ್ತದೆ. ಭಾರತೀಯ ಆರ್ಯುವೇದ ಔಷಧಿಗಳನ್ನು ತಯಾರಿಸುವುದು ಮಾತ್ರವಲ್ಲ ಅದನ್ನು ಅನುಭವಿಸಿ ರೂಢಿಗತಗೊಳಿಸಿಕೊಳ್ಳಬೇಕು ಎಂದರು. ಇಂದ್ರಪ್ರಸ್ಥ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯ ಜಯಪ್ರಸಾದ್ ಕಡಮಾಜೆ ಮಾತನಾಡಿ, ಮುಂದಿನ ದಿನಗಳಲ್ಲಿ ಭಾರತೀಯ ಪಾರಂಪರಿಕ ಆರ್ಯುವೇದ ಔಷಧಿಗಳನ್ನು ಹೆಚ್ಚು ಬಳಕೆ ಮಾಡಬೇಕು. ಜೊತೆಗೆ ದೈನಂದಿನ ರೂಢಿಯಲ್ಲಿ ಉಪವಾಸ ಆರೋಗ್ಯಕ್ಕೆ ಉತ್ತಮ ಸಾಥ್ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಲಿದೆ ಎಂದರು. ಉಪನ್ಯಾಸಕರಾದ ಸೌಮ್ಯ ಸ್ವಾಗತಿಸಿದರು. ಆಜ್ಞಾ ಆರ್. ಎ. ಜೈನ್ ವಂದಿಸಿದರು. ಸ್ವಾತಿ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.