ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ಪ್ರವರ್ಗ “ಸಿ” ದೇವಾಲಯದ ಅರ್ಚಕ/ನೌಕರರಿಗೆ ಉಚಿತ ಕಾಶಿ ಯಾತ್ರೆ

0

ಅ.5ರಂದು ಪ್ರವಾಸ ಆಯೋಜನೆ
ಸೆ.16 ಹೆಸರು, ವಿವರ ಕಳುಹಿಸಲು ಅಂತಿಮ ದಿನ

ಪುತ್ತೂರು: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ “ಸಿ” ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರಿಗೆ ಉಚಿತವಾಗಿ ಕಾಶಿ ಯಾತ್ರೆ ಆಯೋಜಿಸಿದ್ದು ಅರ್ಚಕ/ನೌಕರರು ತಮ್ಮ ವಿವರಗಳನ್ನು ಕಳುಹಿಸುವಂತೆ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಪ್ರವರ್ಗ “ಸಿ” ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರಿಗೆ ಕರ್ನಾಟಕ ಭಾರತ್ ಗೌರವ್ ಕಾಶಿ-ಗಯಾ ದರ್ಶನ್ ಯೋಜನೆಯಡಿ ಪ್ರತಿ ಟ್ರಿಪ್‌ಗೆ 120 ಮಂದಿಯಂತೆ ವಾರ್ಷಿಕವಾಗಿ ಗರಿಷ್ಠ 1200 ಮಂದಿ ಅರ್ಚಕ/ನೌಕರರನ್ನು ಉಚಿತವಾಗಿ ಯಾತ್ರೆಗೆ ಕಳುಹಿಸಲು ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲು ತೀರ್ಮಾನಿಸಲಾಗಿರುತ್ತದೆ. ಕರ್ನಾಟಕ ಭಾರತ್ ಗೌರವ್ ಕಾಶಿ-ಗಯಾ ದರ್ಶನ ಯೋಜನೆಯಡಿ ಈ ಬಾರಿ ಅ.5ರಂದು ಪ್ರವಾಸ ಹೊರಡಲಿದ್ದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಪ್ರವರ್ಗ “ಸಿ” ಅಧಿಸೂಚಿತ ದೇವಾಲಯ/ಸಂಸ್ಥೆಗಳ ಅರ್ಚಕರು/ನೌಕರರ ಪೈಕಿ ಉಚಿತವಾಗಿ ಯಾತ್ರೆಗೆ ತೆರಳಲು ಇಚ್ಛಿಸುವ ಇಬ್ಬರ (೦2) ಹೆಸರು/ವಿವರಗಳನ್ನು ಕಡ್ಡಾಯವಾಗಿ ಸೆ.16ರ ಒಳಗಾಗಿ ದೂರವಾಣಿ ಸಂಖ್ಯೆಯೊಂದಿಗೆ ಇಮೇಲ್ ಮೂಲಕ ಮತ್ತು ಪೋಸ್ಟ್ ಮೂಲಕ ಕಛೇರಿಗೆ ಕಳುಹಿಸಿಕೊಡಬೇಕು ಹಾಗೂ ಈ ಯೋಜನೆಯಡಿ ಒಬ್ಬ ಅರ್ಚಕರು/ನೌಕರರಿಗೆ ಒಂದು ಬಾರಿ ಮಾತ್ರ ಅವಕಾಶ ಕಲ್ಪಿಸಲಾಗಿದೆ. 2 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮನವಿಗಳು ಸ್ವೀಕೃತವಾದಲ್ಲಿ ವಯಸ್ಸಿನ ಆಧಾರದ ಮೇಲೆ ಹಿರಿಯ ಅರ್ಚಕ/ನೌಕರರನ್ನು ಆಯ್ಕೆ ಮಾಡಿ ಅವರ ವಿವರಗಳನ್ನು ಕಳುಹಿಸಬೇಕು.

ಈ ಯೋಜನೆಯಡಿ ಉಚಿತವಾಗಿ ಯಾತ್ರೆ ಕೈಗೊಳ್ಳಲು ಇಚ್ಚಿಸುವ ಪ್ರವರ್ಗ ’ಸಿ’ ದೇವಾಲಯ ಅರ್ಚಕರು ಮತ್ತು ಅವರ ಕುಟುಂಬದ ಒಬ್ಬರು ಸದಸ್ಯರು ಯಾತ್ರೆಗೆ ತೆರಳುವ ಬಗ್ಗೆ ಖಾತ್ರಿ ಪಡಿಸಿದ ನಂತರದಲ್ಲಿ ಮಾತ್ರ, ಸದರಿಯವರ ಹೆಸರನ್ನು ಪ್ರಸ್ತಾಪಿಸಲು ಕೋರಿದೆ. ಒಂದು ವೇಳೆ ಹೆಸರು ನೀಡಿದ ನಂತರ ಯಾತ್ರೆಗೆ ತೆರಳಲು ತಿರಸ್ಕರಿಸಿದರೆ, ಅಂತಹ ಅರ್ಚಕರು/ನೌಕರರಿಂದ ಯಾತ್ರೆಯ ಪೂರ್ಣ ಮೊತ್ತವನ್ನು ವಸೂಲಿ ಮಾಡಲು ತಿಳಿಸಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here