ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಹಿರಿಯ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಹರಿಣಾಕ್ಷ. ಕೆ ದೀಪ ಬೆಳಗಿಸಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ಶಿಕ್ಷಕರಿಗೆ ಶುಭ ಹಾರೈಸಿದರು.

“ಅಕ್ಷಯ ಗುರು ಪುರಸ್ಕಾರ”ವನ್ನು ಸ್ವೀಕರಿಸಿದ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ದೇಶದ ಯಾವುದೇ ಉನ್ನತ ಪದವಿ ಪಡೆದು ನಿರ್ಗಮಿಸಿದ ನಂತರ ಮಾಜಿ ಎಂಬ ಅಂಕಿತದೊಂದಿಗೆ ಪ್ರಚಲಿತನಾಗುವನು ಆದರೆ ಶಿಕ್ಷಕನಿಗೆ ಜೀವನ ಪರ್ಯಂತವಾಗಿ ಶಿಕ್ಷಕ ಎಂಬ ಬಿರುದು ಅಮರವಾಗಿರುತ್ತದೆ. ವಿದ್ಯಾರ್ಥಿಗಳು ಸುಸಂಸ್ಕೃತ ಜೀವನ ಮೈಗೂಡಿಸಿಕೊಂಡರೆ ಮಾತ್ರ ನಮ್ಮ ಜೀವನ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳ ಸಂಸ್ಕೃತಿ, ಕಲೆ ಸಾಹಿತ್ಯದ ಅಭಿರುಚಿ ಶ್ಲಾಘನೀಯ ಎಂದರು.
“ಅಕ್ಷಯ ಸಾಧಕ ಪುರಸ್ಕಾರ“ ಸ್ವೀಕರಿಸಿದ ಡಾ.ರವಿ ಕಕ್ಕೆಪದವು ಅಧ್ಯಕ್ಷರು ಸಮಾಜ ಸೇವಾ ಟ್ರಸ್ಟ್ ಸುಬ್ರಹ್ಮಣ್ಯ ತಮ್ಮ ಜೀವನದ ಸಾರ್ಥಕ ಮತ್ತು ಸಾಧನೆಯ ಬದುಕಿನ ನೈಜ ಚಿತ್ರಣವನ್ನು ಹಂಚಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಜೀವನದಲ್ಲಿ ಸುಸಂಸ್ಕೃತ ಮೌಲ್ಯಗಳನ್ನು ಮೈಗೂಡಿಸಿಕೊಂಡು ನಮ್ಮ ಗುರಿ ಸದಾ ಯಶಸ್ವಿನಕಡೆಗಿರಬೇಕು ಎಂದು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಜಯಂತ್ ನಡುಬೈಲ್, ಜೀವನದಲ್ಲಿ ತಂದೆ ತಾಯಿ ಮತ್ತು ವಿದ್ಯೆ ಕಲಿಸಿದ ಗುರು ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ನೀಡುವ ಶ್ರೇಷ್ಠವಾದ ವ್ಯಕ್ತಿ ಗಳು. ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣ ನೀಡುವಲ್ಲಿ ನಮ್ಮ ಸಂಸ್ಥೆ ಕಾರ್ಯ ಪ್ರವೃತ್ತವಾಗಿದೆ ಎಂದರು.
ಸಮಾರಂಭದಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕರನ್ನು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ಗೌರವಿಸಲಾಯಿತು.
ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ನಿರ್ದೇಶಕಿ ಕಲಾವತಿ ಜಯಂತ್, ಆಡಳಿತಾಧಿಕಾರಿ ಅರ್ಪಿತ್ ಟಿ ಆರ್, ಕಾರ್ಯಕ್ರಮದ ಸಂಯೋಜಕಿ ದೀಕ್ಷ ರೈ, ಆಂತರಿಕ ಗುಣಮಟ್ಟದ ಭರವಸೆಯ ಕೋಶದ ಸಂಯೋಜಕಿ ರಶ್ಮಿ ಕೆ, ವಿದ್ಯಾರ್ಥಿ ಒಕ್ಕೂಟದ ನಾಯಕ ರಾಕೇಶ್ .ಕೆ ಉಪಸ್ಥಿತರಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾ ರತ್ನ ಸ್ವಾಗತಿಸಿ, ವಿದ್ಯಾರ್ಥಿ ಒಕ್ಕೂಟದ ಖಜಾಂಚಿ ಪೃಥ್ವಿರಾಜ್ ವಂದಿಸಿದರು. ಕುಮಾರಿ ಪ್ರಕೃತಿ ಪ್ರಾರ್ಥನೆ ಹಾಡಿದರು. ಕನ್ನಡ ವಿಭಾಗದ ಉಪನ್ಯಾಸಕ ಹರಿಶ್ಚಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು.
ಅಕ್ಷಯ ಗುರು ಸನ್ಮಾನ:
ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳ ಪೋಷಕ ಶಿಕ್ಷಕರನ್ನು ಸನ್ಮಾನಿಸಲಾಯಿತು. ರಾಧಾಕೃಷ್ಣ ಹೊಳ್ಳ ಬಿ ಶ್ರೀ ಸತ್ಯಸಾಯಿ ಲೋಕಾ ಸೇವಾ ವಿದ್ಯಾಕೇಂದ್ರ ಅಳಿಕೆ, ಸವಿತಾ ಶೆಟ್ಟಿ, ಕುನಿಲ್ ವಿದ್ಯಾ ಸಂಸ್ಥೆ ಬದಿಯಡ್ಕ, ಭುವನೇಶ್ವರಿ ಅಂಗನವಾಡಿ ಕೇಂದ್ರ ಕಡೆಶೀವಾಲಯ ಚೆನ್ನಯ ಕಟ್ಟೆ, ಚೇತನಾ ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ, ಮೀನಾಕ್ಷಿ ಎಸ್ ದಡ್ಡಲ್ತಡ್ಕ ಅಂಗನವಾಡಿ ಕೇಂದ್ರ ವಿಟ್ಲ ಮುಡ್ನೂರು, ಜಯಶ್ರೀ ಎಂ ದಡ್ಡಲ್ತಡ್ಕ ಅಂಗನವಾಡಿ ಕೇಂದ್ರ ವಿಟ್ಲ ಮುಡ್ನೂರು ಅಭಿನಂದನೆಯನ್ನು ಸ್ವೀಕರಿಸಿದರು.