ರೋಟರಿ ಯುವಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ರೋಟರಿಯಿಂದ ಸಾಮಾಜಿಕ ಜವಾಬ್ದಾರಿಯ ಸಮಾಜ ನಿರ್ಮಾಣ-ರಾಮ್‌ಕೀ

ಪುತ್ತೂರು: ಅಂತರ್ರಾಷ್ಟ್ರೀಯ ಸಂಸ್ಥೆಯಾಗಿರುವ ರೋಟರಿ ಸಂಸ್ಥೆ ಮಾರಕ ರೋಗ ಪೊಲಿಯೋ ನಿರ್ಮೂಲನೆ ಮೂಲಕ ಇಡೀ ವಿಶ್ವವೇ ನಿಬ್ಬೆರೆರಾಗಿಸುವಂತೆ ಮಾಡಿದೆ. ವೈವಿಧ್ಯತೆಯಲ್ಲಿ ಏಕತೆ ಎಂಬಂತೆ ರೋಟರಿಯಲ್ಲಿನ ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉತ್ತಮ ಸಮಾಜ ನಿರ್ಮಿಸುವಲ್ಲಿ ರೊಟೇರಿಯನ್ಸ್‌ಗಳ ಸಾಮಾಜಿಕ ಜವಾಬ್ದಾರಿ ಮೆಚ್ಚುವಂತಹುದು ಎಂದು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ(ರಾಮ್‌ಕೀ).ರವರು ಹೇಳಿದರು.


ಡಿ.10 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ನೆರವೇರಿದ ರೋಟರಿ ಕ್ಲಬ್ ಪುತ್ತೂರು ಯುವಗೆ ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಕ್ಲಬ್‌ನ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಜೊತೆಗೆ ಕ್ಲಬ್ ನಡೆಸುವ ಟ್ರೆಶರ್ ಹಂಟ್ ಕಾರ್ಯಕ್ರಮದ ಪೋಸ್ಟರ್ ಅನ್ನು ಅನಾವರಣಗೊಳಿಸುವುದರೊಂದಿಗೆ ಮಾತನಾಡಿದರು.


ಯುವಶಕ್ತಿಯಿಂದ ಕೂಡಿದ ಯುವ ಕ್ಲಬ್-ಪ್ರಮೀಳಾ ರಾವ್:
ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್‌ರವರು ರೋಟರಿ ಯುವದ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ರೋಟರಿ ಕ್ಲಬ್ ಯುವ ಎಂದರೆ ಅದು ಯುವಶಕ್ತಿಯಿಂದ ಕೂಡಿದ ಕ್ಲಬ್. ಈ ಯುವ ಕ್ಲಬ್ ಸ್ಥಾಪನೆಯಾದಾಗಿನಿಂದ ಇಂದಿನವರೆಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಸಮಾಜಕ್ಕೆ ನೀಡಿದೆ. ತನ್ನನ್ನು ಈ ಕ್ಲಬ್ ’ಟೀಚರಮ್ಮ’ ಎಂದು ಕರೆಯಿಸಿಕೊಳ್ಳುತ್ತಿರುವುದು ನನಗೆ ಬಹಳ ಖುಶಿ ತಂದಿದೆ ಎಂದರು.

ಚಿತ್ರ: ಪದ್ಮಾ ಪುತ್ತೂರು


ರೋಟರಿ ಯುವ ಕ್ಲಬ್‌ನಿಂದ ಗುಣಮಟ್ಟದ ಪ್ರಾಜೆಕ್ಟ್-ಭರತ್ ಪೈ:
ರೋಟರಿ ವಲಯ ಸೇನಾನಿ ಭರತ್ ಪೈ ಮಾತನಾಡಿ, ರೋಟರಿ ಯುವ ಕ್ಲಬ್ ಸಮಾಜಕ್ಕೆ ಅರ್ಥಪೂರ್ಣ ಹಾಗೂ ಗುಣಮಟ್ಟದ ಪ್ರಾಜೆಕ್ಟ್ ಅನ್ನು ಅರ್ಪಿಸಿದ್ದಾರೆ. ಇದೀಗ ಕ್ಲಬ್ ಅಧ್ಯಕ್ಷ ಕುಸುಮ್‌ರಾಜ್‌ರವರ ಮುಂದಾಳತ್ವದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೆರವಾಗಲು ಅಗತ್ಯ ಉಚಿತ ಬಟ್ಟೆಗಳ ಕೌಂಟರ್ ಅನ್ನು ತೆರೆದಿದ್ದಾರೆ. ಮುಂದಿನ ನಿಯೋಜಿತ ಅಧ್ಯಕ್ಷೆ ವಚನ ಜಯರಾಮ್‌ರವರೂ ಕೂಡ ಕ್ಲಬ್ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲಿದ್ದಾರೆ ಎಂದರು.


ಒಗ್ಗಟ್ಟು ಇದ್ದಾಗ ಅಭಿವೃದ್ಧಿ ಸಾಧ್ಯ-ಕುಸುಮ್‌ರಾಜ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮ್ ರಾಜ್ ಮಾತನಾಡಿ, ನಮ್ಮ ಯುವ ಕ್ಲಬ್ ಸಮಾಜಕ್ಕೆ ಏನು ಕೊಡುಗೆ ನೀಡಬೇಕು ಎನ್ನುವುದರ ಕುರಿತು ಕ್ಲಬ್ ಸದಸ್ಯರಲ್ಲಿ ಆರೋಗ್ಯಪೂರ್ಣ ಚರ್ಚೆ ಆಗುತ್ತಿರುವುದು ಸಂತೋಷದ ವಿಷಯ. ಯಾವುದೇ ಕೆಲಸವಾಗಲಿ ಅದು ಒಬ್ಬನಿಂದ ಸಾಧ್ಯವಿಲ್ಲ, ಎಲ್ಲರೂ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಾಧ್ಯವಾಗುತ್ತದೆ. ಕಳೆದ ಆರು ತಿಂಗಳಲ್ಲಿ ಕ್ಲಬ್‌ನಲ್ಲಿನ 49 ಸೇವಾ ಮನೋಭಾವದ ಸದಸ್ಯರು ನನ್ನೊಂದಿಗೆ ಕೈಜೋಡಿಸಿರುವುದು ಮತ್ತೂ ಹೆಮ್ಮೆಯ ಸಂಗತಿಯಾಗಿದೆ ಎಂದರು.


ಹಸ್ತಾಂತರ/ಅಭಿನಂದನೆ:
ರಾಮಕೃಷ್ಣ ಸೇವಾಶ್ರಮಕ್ಕೆ ರೋಟರಿ ಯುವದಿಂದ ರೂ.10 ಸಾವಿರ ಕೊಡುಗೆಯನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಅತ್ತ್ಯುತ್ಮಕ ಕಲಾತ್ಮಕ ಸಾಧನೆ ಮಾಡಿರುವ ಸೋನಾ ಪ್ರದೀಪ್, ವಿವೇಕಾನಂದ ಸಿಬಿಎಸ್‌ಎ ಶಾಲೆಯ ಇಂಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷನಾಗಿ ಆಯ್ಕೆಯಾದ ಈಶಾನ್, ಅಲ್ಲದೆ ನರಸಿಂಹ ಪೈ, ಶ್ರದ್ಧಾ ನಾಯಕ್, ಅಶ್ವಿನಿಕೃಷ್ಣ ಮುಳಿಯ, ಅನಿಲ್ ಮುಂಡೋಡಿ, ಅಭಿಷ್ ಕೆ, ಶ್ರೇಯಸ್ವಿ ಅನೂಪ್, ಆಂಗಿಕಾ ಶೆಟ್ಟಿರವರನ್ನು ಅಭಿನಂದಿಸಲಾಯಿತು.


ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಅಶ್ವಿನಿಕೃಷ್ಣ ಮುಳಿಯ, ನಿಯೋಜಿತ ಅಧ್ಯಕ್ಷೆ ವಚನ ಜಯರಾಮ್ ಉಪಸ್ಥಿತರಿದ್ದರು. ಸಾರ್ಜಂಟ್ ಎಟ್ ಆಮ್ಸ್೯ ರೋಟರಿ ಅಧ್ಯಕ್ಷರಿಗೆ ಕೊರಳಪಟ್ಟಿ ತೊಡಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕು.ರಿಹಾ ಮುಂಡೋಡಿ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮ್ ರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಅಭಿಷ್ ಕೆ ವರದಿ ಮಂಡಿಸಿ, ವಂದಿಸಿದರು. ಕ್ಲಬ್ ಚಾರ್ಟರ್ ಅಧ್ಯಕ್ಷ ರತ್ನಾಕರ್ ರೈ, ಪೂರ್ವಾಧ್ಯಕ್ಷರಾದ ಚೇತನ್ ಪ್ರಕಾಶ್, ಉಮೇಶ್ ನಾಯಕ್, ಸದಸ್ಯ ಸಚಿನ್ ನಾಯಕ್‌ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಸದಸ್ಯ ದೀಪಕ್ ಕೆ.ಪಿ ಜಿಲ್ಲಾ ಗವರ್ನರ್ ರವರ ಪರಿಚಯ ಮಾಡಿದರು. ಕ್ಲಬ್ ಪೂರ್ವಾಧ್ಯಕ್ಷ ನರಸಿಂಹ ಪೈ ಹಾಗೂ ಶ್ರದ್ದಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ಸರ್ವಿಸ್ ನಿರ್ದೇಶಕಿ ವಚನ ಜಯರಾಮ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಶರತ್ ಶ್ರೀನಿವಾಸ್, ವೊಕೇಶನಲ್ ಸರ್ವಿಸ್ ನಿರ್ದೇಶಕ ಉಮೇಶ್ ನಾಯಕ್, ಯೂತ್ ಸರ್ವಿಸ್ ನಿರ್ದೇಶಕಿ ಪ್ರಜ್ಞಾ ಮುಳಿಯ, ಪೂರ್ವಾಧ್ಯಕ್ಷರಾದ ಡಾ.ಹರ್ಷಕುಮಾರ್ ರೈ, ಪಶುಪತಿ ಶರ್ಮರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸರಕಾರಿ ಆಸ್ಪತ್ರೆಯಲ್ಲಿ ಕ್ಲೋತ್ ಬ್ಯಾಂಕ್..
ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕ ಬಡ ರೋಗಿಗಳಿಗೆ ದೈನಂದಿನ ಬಳಕೆಯ ಬಟ್ಟೆಗಳ ಕೊರತೆ ಬರುತ್ತಿದ್ದು ಇದನ್ನು ಗಮನಿಸಿ ಸಾರ್ವಜನಿಕರಿಂದ ಸಹಾಯ ಸ್ವೀಕರಿಸಲು ಈ ಕ್ಲೋತ್ ಬ್ಯಾಂಕ್ ರಚಿಸಲಾಗಿದೆ. ಸಾರ್ವಜನಿಕರಲ್ಲಿರುವ ಉಪಯೋಗ ಯೋಗ್ಯ ಬಟ್ಟೆ, ಬರೆಗಳನ್ನು ಸ್ವಚ್ಛವಾಗಿ ತೊಳೆದು, ಇಸ್ತ್ರೀ ಮಾಡಿ ನೀಡಬಹುದು. ದಿನನಿತ್ಯ ಉಪಯೋಗಕ್ಕೆ ಯೋಗ್ಯ ಬಟ್ಟೆಗಳಾದ ಶರ್ಟ್, ಪ್ಯಾಂಟ್, ಲುಂಗಿ, ಬನಿಯನ್, ಬರ್ಮುಡ ಚಟ್ಟಿ, ಸೀರೆ, ನೈಟಿ, ಚೂಡಿದಾರ, ಬೆಡ್‌ಶೀಟ್, ಬ್ಯಾಗ್ ಇತ್ಯಾದಿ ಬಟ್ಟೆಗಳನ್ನು ನೀಡಬಹುದು. ಈ ಬಟ್ಟೆಗಳನ್ನು ಅಗತ್ಯವಿರುವವರು ಯಾರೇ ಆದರೂ ಮುಕ್ತವಾಗಿ ಪಡೆದುಕೊಳ್ಳಬಹುದು. ಇದು ಸಂಪೂರ್ಣ ಉಚಿತ ಸೇವೆಯಾಗಿದ್ದು, ಮುಂದಿನ ದಿನಗಳಲ್ಲಿ ನವಜಾತ ಶಿಶುಗಳಿಗಾಗಿ ಪ್ರತ್ಯೇಕ ವಿಭಾಗದಲ್ಲಿ ಬಟ್ಟೆಗಳನ್ನು ಸ್ವೀಕರಿಸುವ ಯೋಜನೆ ಇದೆ ರೋಟರಿ ಯುವ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸನ್ಮಾನ..
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ಮಿಷನ್ ಸ್ವಚ್ಛ ಪುತ್ತೂರಿನ ಪ್ರಮುಖರಾಗಿರುವ ಪ್ರಾಧ್ಯಾಪಕ ಡಾ|ರಾಜೇಶ್ ಬೆಜ್ಜಂಗಳ, ಗಾಂಧಾರಿ ವಿದ್ಯೆಯ ಮೂಲಕ ಸ್ಯಾಂಡ್ ಆರ್ಟ್‌ನಲ್ಲಿ ಸುಮಾರು 350ಕ್ಕೂ ಮಿಕ್ಕಿ ಮರಳಿನಲ್ಲಿ ಚಿತ್ರಕಲೆಯನ್ನು ರಚಿಸಿ ಏಷ್ಯನ್ ಗೋಲ್ಡನ್ ಬುಕ್ ವರ್ಲ್ಡ್ ರೆಕಾರ್ಡ್ ಯುವ ಸಾಧಕಿ ಶಮಿಕಾ ಎಂ.ಕೆ ಹಾಗೂ ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಧ್ಯಕ್ಷರಿಂದ ರೂ.1 ಲಕ್ಷ ದೇಣಿಗೆ..
ಬಲ್ನಾಡು ಉಜ್ರುಪಾದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅಬಿವೃದ್ಧಿಗೆ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಕುಸುಮ್‌ರಾಜ್ ಫ್ಯಾಮಿಲಿಯಿಂದ ರೂ.1 ಲಕ್ಷ ದೇಣಿಗೆಯ ಚೆಕ್‌ನ್ನು ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರು ಉಜ್ರುಪಾದೆ ಶಾಲೆಯ ಶಿಕ್ಷಕ ವೃಂದ, ಎಸ್‌ಡಿಎಂಸಿ ವೃಂದದವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here