ಪುತ್ತಿಲರಿಗೆ ನೀಡಿದ್ದ ಭರವಸೆ ಈಡೇರಿಸದ ವಿಚಾರ

0

ಪುತ್ತಿಲ ಪರಿವಾರದ ಬಿಜೆಪಿ ಪ್ರಮುಖರ ತುರ್ತು ಸಭೆ ; ನಾಯಕರ ವಿರುದ್ಧ ಅಸಮಾಧಾನ

ಪುತ್ತೂರು: ಪುತ್ತಿಲ ಪರಿವಾರ ಬಿಜೆಪಿ ಜೊತೆ ವಿಲೀನ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಅರುಣ್ ಕುಮಾರ್ ಪುತ್ತಿಲ ಅವರಿಗೆ ನೀಡಿದ್ದ ಭರವಸೆಯನ್ನು ಇನ್ನೂ ಈಡೇರಿಸದೇ ಇರುವ ವಿಚಾರದಲ್ಲಿ, ಪುತ್ತಿಲ ಪರಿವಾರದಲ್ಲಿ ಸಕ್ರಿಯರಾಗಿರುವ ಬಿಜೆಪಿ ಪ್ರಮುಖರು ತುರ್ತು ಸಭೆ ಸೇರಿ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷ ಮತ್ತು ಸಂಘದ ಪ್ರಮುಖರು ಸಮನ್ವಯ ಸಾಧಿಸಿ ತಕ್ಷಣ ಪರಿಹಾರ ಒದಗಿಸಬೇಕು ಎಂದು ಸಭೆಯಲ್ಲಿ ಒಮ್ಮತದ ತೀರ್ಮಾನವಾಗಿದೆ ಎಂದು ವರದಿಯಾಗಿದೆ.


ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರ ಅಧ್ಯಕ್ಷತೆಯಲ್ಲಿ ಮುಕ್ರಂಪಾಡಿ ಸುಭದ್ರ ಸಭಾ ಮಂದಿರದ ಬಳಿಯಿರುವ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಕಚೇರಿಯಲ್ಲಿ ಸಭೆ ನಡೆಯಿತು. ಪುತ್ತಿಲ ಪರಿವಾರದಲ್ಲಿಯೂ ಸಕ್ರಿಯರಾಗಿರುವ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು, ಪ್ರಶಾಂತ್ ನೆಕ್ಕಿಲಾಡಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ,ಲೋಕೇಶ್ ನಾಯ್ಕ ಮತ್ತಿತರ ಪ್ರಮುಖರಲ್ಲದೆ ಪುತ್ತಿಲ ಪರಿವಾರದ ಹಲವರು ಸಭೆಯಲ್ಲಿದ್ದರು.


ಪುತ್ತಿಲ ಪರಿವಾರ ಭಾರತೀಯ ಜನತಾ ಪಾರ್ಟಿ ಜೊತೆ ವಿಲೀನವಾದ ಸಂದರ್ಭದಲ್ಲಿ, ಪಕ್ಷದ ಮತ್ತು ಸಂಘದ ಪ್ರಮುಖ ನಾಯಕರು ಅರುಣ್ ಪುತ್ತಿಲ ಅವರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪದಾಧಿಕಾರಿಗಳು ತಮ್ಮ ಮುಂದಿನ ನಡೆಯ ಬಗ್ಗೆ ಅಭಿಪ್ರಾಯ ಮಂಡಿಸಿದರು. ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ದ.ಕ.ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು ನೀಡಿದ ಭರವಸೆ ಈಡೇರಿಸದೇ ಇರುವುದು ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಕೆರಳಿಸಿದೆ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತಲ್ಲದೆ, ಕೇಸರಿ ಶಾಲನ್ನು ಹಾಕುವ ದೇವ ದುರ್ಲಭ ಕಾರ್ಯಕರ್ತರನ್ನು ಅವಮಾನಿಸಿ ಹೇಳಿಕೆ ನೀಡುವ ಸಂಘ ಮತ್ತು ಪಕ್ಷದ ನಾಯಕರ ನಡೆಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು ಎನ್ನಲಾಗಿದೆ. ಈ ಎಲ್ಲ ವಿಚಾರದಲ್ಲಿ ಪಕ್ಷ ಮತ್ತು ಸಂಘದ ಹಿರಿಯರು ಸಮನ್ವಯ ಸಾಧಿಸಿ ತಕ್ಷಣ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಸಭೆಯಲ್ಲಿ ನಿರ್ಣಯಿಸಲಾಯಿತು.


ಟ್ರಸ್ಟ್‌ನ ಅಧ್ಯಕ್ಷರು, ತಂಡದ ನಿರ್ಣಯಕ್ಕೆ ಬದ್ಧ
ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಸಭೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದು ಟ್ರಸ್ಟಿನ ಅಧ್ಯಕ್ಷರು ಮತ್ತು ತಂಡ ತೆಗೆದುಕೊಳ್ಳುವ ನಿರ್ಣಯಕ್ಕೆ ತಾವೆಲ್ಲರೂ ಬದ್ದರಾಗಿರುವುದಾಗಿ ಸಭೆಯಲ್ಲಿದ್ದ ಪದಾಧಿಕಾರಿಗಳು ತಿಳಿಸಿದರು. ಆರ್‌ಎಸ್‌ಎಸ್ ಶತಾಬ್ಧಿಯ ನಿಮಿತ್ತ ಇದೇ ನವಂಬರ್ ತಿಂಗಳಿನಲ್ಲಿ ನಡೆಯುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಪ್ರಥಮ ಸಾಮೂಹಿಕ ವಿವಾಹ ಮತ್ತು ಹಿಂದವಿ ಸಾಮ್ರಾಜ್ಯೋತ್ಸವದ ಯಶಸ್ವಿಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅಲ್ಲಿನ ತನಕ ಯಾವುದೇ ಭಿನ್ನಾಭಿಪ್ರಾಯ ಮಾಡದಂತೆ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ವರದಿಯಾಗಿದೆ.


ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದೂ ಸಂಘಟನೆ ಮುಖಂಡ ಅರುಣ್ ಪುತ್ತಿಲ ಅವರಿಗೆ ಬಿಜೆಪಿ ಟಿಕೆಟ್ ಸಿಗದಿದ್ದಾಗ ಕಾರ್ಯಕರ್ತರ ಒತ್ತಾಸೆಯಂತೆ ಅವರು ಪಕ್ಷೇತರರಾಗಿ ಸ್ಪಧಿಸಿ ಮತಗಳಿಕೆಯಲ್ಲಿ ಎರಡನೇ ಸ್ಥಾನ ಪಡೆದು ವಿರೋಚಿತ ಸೋಲು ಅನುಭವಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಶೋಕ್ ಕುಮಾರ್ ರೈಯವರು ಶಾಸಕರಾಗಿ ಗೆಲುವು ಸಾಧಿಸಿದ್ದರು. ಚುನಾವಣೆಯ ಬಳಿಕ ಬಿಜೆಪಿಯಿಂದ ದೂರ ಉಳಿದಿದ್ದ ಅರುಣ್ ಕುಮಾರ್ ಪುತ್ತಿಲ ಅವರು ‘ಪುತ್ತಿಲ ಪರಿವಾರ’ ಸಂಘಟನೆಯನ್ನು ಕಟ್ಟಿಕೊಂಡು ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈ ಮಧ್ಯೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಪುತ್ತಿಲ ಪರಿವಾರದಿಂದ ಅಭ್ಯರ್ಥಿಗಳು ಸ್ಪಧಿಸಿದ್ದರು. ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಅಂತರ ದೂರವಾಗುತ್ತಲೇ ಹೋಗಿತ್ತು.ಇದು ಮುಂದುವರಿದರೆ ಮುಂದಿನ ಚುನಾವಣೆಗಳಲ್ಲಿಯೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವುದನ್ನು ತಿಳಿದು ಪುತ್ತಿಲ ಪರಿವಾರವನ್ನು ಬಿಜೆಪಿಯಲ್ಲಿ ವಿಲೀನ ನಿಟ್ಟಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಪ್ರಮುಖರ ಮಧ್ಯೆ ನಿರಂತರ ಮಾತುಕತೆಗಳು ನಡೆಯುತ್ತಿದ್ದರೂ ಒಂದು ನಿರ್ಣಾಯಕ ಹಂತಕ್ಕೆ ಬಂದಿರಲಿಲ್ಲ.ಈ ನಡುವೆ ಪುತ್ತಿಲ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ನೀಡುವ ಮಾತುಕತೆ ನಡೆಯುತ್ತಿತ್ತು. ಜಿಲ್ಲಾಧ್ಯಕ್ಷ ಸ್ಥಾನ ಇಲ್ಲವೇ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲವನ್ನು ಒಂದು ಮಾಡಿ ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಸಮಿತಿ ರಚನೆ ಮಾಡಿ ಅದರ ನಾಯಕತ್ವವನ್ನು ಅರುಣ್ ಕುಮಾರ್ ಪುತ್ತಿಲ ಅವರಿಗೆ ನೀಡುವುದು ಎಂಬಿತ್ಯಾದಿ ಅಭಿಪ್ರಾಯಗಳು ವ್ಯಕ್ತವಾಗಿದ್ದ ಕುರಿತು ವರದಿಯಾಗಿತ್ತು. ಕೊನೆಗೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕ್ಯಾ|ಬ್ರಿಜೇಶ್ ಚೌಟರಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದ ಮರುದಿನವೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೊಂಡಿದ್ದರು. ಈ ವೇಳೆಯೂ ಅರುಣ್ ಪುತ್ತಿಲರಿಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಆದರೆ,ಇದಾಗಿ 15 ತಿಂಗಳು ಕಳೆದರೂ ಅವರಿಗೆ ಯಾವುದೇ ಪ್ರಮುಖ ಸ್ಥಾನಮಾನ ನೀಡದೇ ಇರುವ ವಿಚಾರದಲ್ಲಿ ಇದೀಗ ಪುತ್ತಿಲ ಪರಿವಾರ ಸಂಘಟನೆಯೊಳಗಿರುವ ಬಿಜೆಪಿ ಪ್ರಮುಖರು ಅಸಮಾಧಾನ ಹೊರ ಹಾಕಿದ್ದಾರೆ. ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿರುವ ಪ್ರಸನ್ನ ಕುಮಾರ್ ಮಾರ್ತ, ಉಮೇಶ್ ಕೋಡಿಬೈಲು,ಪ್ರಶಾಂತ್ ನೆಕ್ಕಿಲಾಡಿ, ಅನಿಲ್ ತೆಂಕಿಲ ಸಹಿತ ಕೆಲವರಿಗೆ ಬಿಜೆಪಿ ವಿವಿಧ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ ಅರುಣ್ ಪುತ್ತಿಲ ಅವರಿಗೆ ಇನ್ನೂ ಯಾವುದೇ ಪ್ರಮುಖ ಹುದ್ದೆ ನೀಡದೇ ಇರುವುದು ಇದೀಗ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here