ಕೊಳ್ತಿಗೆ ಗ್ರಾಮದಲ್ಲಿ ಮುಂದುವರಿದ ಕಾಡಾನೆ ದಾಳಿ

0

ಸವಣೂರು: ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮ ವ್ಯಾಪ್ತಿಯಲ್ಲಿಯೇ ಆಗಸ್ಟ್ ತಿಂಗಳಿನಲ್ಲಿ ಬೀಡುಬಿಟ್ಟು ಕೃಷಿ ಪ್ರದೇಶಗಳಿಗೆ ಲಗ್ಗೆಯಿಟ್ಟು ಫಸಲನ್ನು ಹಾನಿ ಮಾಡಿದ್ದ ಕಾಡಾನೆಗಳು ಇದೀಗ ಮತ್ತೆ ಆ ಭಾಗಕ್ಕೆ ಲಗ್ಗೆ ಇಟ್ಟಿದ್ದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ.


ಆಗಸ್ಟ್ ತಿಂಗಳಲ್ಲಿ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಸಮೀಪದ ಕೆಂಪುಗುಡ್ಡೆ , ಪುರುಷರಕೋಡಿ, ಕಟ್ಟಪುಣಿ, ಕುಂಟಿಕಾನ, ಚಾಲೆಪಡ್ಪು,ದೊಡ್ಡಮನೆ, ಕೊಡಂಬು, ಕೂರೇಳು ಪ್ರದೇಶದಲ್ಲಿ ಅಪಾರ ಪ್ರಮಾಣದ ಫಸಲನ್ನು ಹಾನಿ ಮಾಡಿತ್ತು. ಇದೀಗ ಮತ್ತೆ ಕಾಡಾನೆಗಳು ಕೊಳ್ತಿಗೆ ಗ್ರಾಮಕ್ಕೆ ಲಗ್ಗೆ ಇಟ್ಟಿದ್ದು, ಸೆ.11ರ ರಾತ್ರಿ ಕೊರಿಕ್ಕಾರು, ಕೊರಂಬಡ್ಕ ಬೀಡು,ಉಬರಾಜೆ ಪರಿಸರದಲ್ಲಿ ಕೃಷಿ ಹಾನಿ ಮಾಡಿರುವ ಬಗ್ಗೆ ವರದಿಯಾಗಿದೆ. ರಾತ್ರಿ ವೇಳೆ ಅರಣ್ಯ ಇಲಾಖೆಯವರು ವಾಹನದಲ್ಲಿ ಸೈರನ್ ಮೊಳಗಿಸಿ ಸಾರ್ವಜನಿಕರನ್ನು ಜಾಗರೂಕತೆಯಿಂದ ಇರುವಂತೆ ಎಚ್ಚರಿಸುತ್ತಿದ್ದಾರೆ. ರಾತ್ರಿ ವೇಳೆ ಕೃಷಿ ಪ್ರದೇಶಗಳಿಗೆ ಇಳಿದು ಕೃಷಿ ಹಾನಿ ಮಾಡುತ್ತಿರುವ ಕಾಡಾನೆ, ಹಗಲು ವೇಳೆಗಾಗಲೇ ಸ್ಥಳೀಯ ರಕ್ಷಿತಾರಣ್ಯ ಸೇರಿಕೊಳ್ಳುತ್ತಿದೆ ಎನ್ನಲಾಗಿದೆ.


ಕಾಡಾನೆ ಹೀಗೆ ಹಾನಿ ಮುಂದುವರಿದರೆ ಕೃಷಿ ಉಳಿಸಿಕೊಳ್ಳುವುದಾದರೂ ಹೇಗೆ, ಇದಕ್ಕೆ ಪರಿಹಾರ ಇಲ್ಲವೇ ಎಂದು ಕೃಷಿಕರು ಪ್ರಶ್ನಿಸಿದ್ದಾರೆ. ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here