ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ, ರಾಮಕುಂಜ ಇದರ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಮತ್ತು ರೋಟರಿ ಕ್ಲಬ್ ಪುತ್ತೂರು, ಕಣ್ಣಿನ ಆಸ್ಪತ್ರೆ ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ಜಿ.ಎಲ್.ಆಚಾರ್ಯ ಜನ್ಮ ಶತಾಬ್ಧಿ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ ಮತ್ತು ಉಚಿತ ಕಣ್ಣಿನ ಪರೀಕ್ಷೆ ಸೆ.13ರಂದು ಬೆಳಿಗ್ಗೆ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿ.ಎಲ್.ಆಚಾರ್ಯ ಅವರ ಪುತ್ರ, ಪುತ್ತೂರಿನ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಿ.ಎಲ್.ಆಚಾರ್ಯ ಅವರು ಜನ್ಮಶತಾಬ್ದಿ ಸ್ಮರಣಾರ್ಥ 2024ರ ನವೆಂಬರ್ನಿಂದ 2026ರ ತನಕ ವಿವಿಧ ಆಯೋಜಿಸಿದ್ದೇವೆ. ಅದರಲ್ಲಿ ಇಂದು ನಡೆಯುತ್ತಿರುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹೆಚ್ಚು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ. ತಂದೆಯವರ ಕಾಲದಿಂದಲೂ ರಾಮಕುಂಜದ ಜೊತೆ ನಿಕಟ ಸಂಬಂಧ ಹೊಂದಿದ್ದೇನೆ. ಇಲ್ಲಿನ ವಿದ್ಯಾಸಂಸ್ಥೆಗಳು ಉನ್ನತ ಮಟ್ಟದಲ್ಲಿ ಬೆಳೆಯುತ್ತಿದ್ದು ವಿದ್ಯಾಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಇದು ಹೀಗೆ ಮುಂದುವರಿಯಲಿ ಎಂದರು.
ಅತಿಥಿಯಾಗಿದ್ದ ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಅವರು ಮಾತನಾಡಿ, ಜಿ.ಎಲ್.ಆಚಾರ್ಯ ಅವರು ರೋಟರಿ ಕ್ಲಬ್ನ ಮೇಜರ್ ಡೋನರ್. ಅವರು ಅಧ್ಯಕ್ಷರಾಗಿದ್ದ ವೇಳೆ ಪುತ್ತೂರು ರೋಟರಿ ಕ್ಲಬ್ ಬೆಳೆದಿದೆ. ರೋಟರಿ ಕ್ಲಬ್ನಿಂದ ಬ್ಲಡ್ ಕಲೆಕ್ಷನ್ ಸೆಂಟರ್, ಡಯಾಲಿಸಿಸ್ ಸೆಂಟರ್, ಕಣ್ಣಿನ ಆಸ್ಪತ್ರೆ ಇದೆ ಎಂದರು. ಇನ್ನೋರ್ವ ಅತಿಥಿ ಎಸ್ಆರ್ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ ಮಾತನಾಡಿ, ಅನ್ನದಾನಕ್ಕಿಂತ ರಕ್ತದಾನ ಮಿಗಿಲಾದದ್ದು. ಅನ್ನ ಒಂದು ಹೊತ್ತಿನ ಹಸಿವು ನೀಗಿಸಿದರೆ ರಕ್ತದಾನ ಒಂದು ಜೀವ ಉಳಿಸಬಳ್ಳದು. ಜಿ.ಎಲ್.ಆಚಾರ್ಯರವರು ಪುತ್ತೂರು ನಗರದ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಜನ್ಮಶತಾಬ್ದಿ ಸ್ಮರಣಾರ್ಥ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯುವಂತದ್ದು ಸೂಕ್ತವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ಕೆ.ಎಸ್.ರಾಧಾಕೃಷ್ಣ ಅವರು ಮಾತನಾಡಿ, ಜಿ.ಎಲ್.ಆಚಾರ್ಯರವರು ರಾಮಕುಂಜದ ವಿದ್ಯಾಸಂಸ್ಥೆಯ ಬೆಳವಣಿಗೆಗೆ ಪ್ರಮುಖ ಕಾರಣಕರ್ತರು. 38 ವರ್ಷ ಸಂಸ್ಥೆಯ ಅಧ್ಯಕ್ಷರಾಗಿ ಮುನ್ನಡೆಸಿದ್ದಾರೆ. ಈಗ ಅವರ ಪುತ್ರ ಬಲರಾಮ ಆಚಾರ್ಯ ಅವರು ಉಪಾಧ್ಯಕ್ಷರಾಗಿ ಸಂಸ್ಥೆಯ ಬೆನ್ನೆಲುಬು ಆಗಿ ಸಂಸ್ಥೆಯ ಬೆಳವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿ.ಎಲ್.ಆಚಾರ್ಯ ಅವರು ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ಪ್ರಥಮ ಕರ್ತ ಆಗಿದ್ದಾರೆ. ಅವರು ಇಲ್ಲಿನ ವಿದ್ಯಾಸಂಸ್ಥೆಯೊಂದಿಗೆ ನಿಕಟಸಂಪರ್ಕ ಹೊಂದಿದ್ದು ಸಂಸ್ಥೆ ಹಂತ ಹಂತವಾಗಿ ಬೆಳೆಯಲು ಅವರೇ ಮೂಲ ಕಾರಣರು ಎಂದರು.
ಶ್ರೀ ರಾಮಕುಂಜೇಶ್ವರ ಸಿಬಿಎಸ್ಇ ವಿದ್ಯಾಲಯದ ಸಂಚಾಲಕ ಶಿವಪ್ರಸಾದ್ ಇಜ್ಜಾವು, ಆಲಂಕಾರು ಜೆಸಿಐ ಅಧ್ಯಕ್ಷ ಗುರುರಾಜ್ ರೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕಿ ಜಯಶ್ರೀ, ಪುತ್ತೂರು ಬ್ಲಡ್ ಬ್ಯಾಂಕ್ನ ಡಾ.ರಾಮಕೃಷ್ಣ ರಾವ್, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ., ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕ ಸತೀಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಗಾಯತ್ರಿ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತಾ ವಂದಿಸಿದರು. ಸಹಶಿಕ್ಷಕ ಹರೀಶ್ಕುಮಾರ್ ನಿರೂಪಿಸಿದರು. ಆಡಳಿತಾಧಿಕಾರಿ ಆನಂದ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ ಸಹಕರಿಸಿದರು. ಕಾರ್ಯಕ್ರಮ ಆರಂಭಕ್ಕೆ ಮೊದಲು ಜಿ.ಎಲ್.ಆಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ ಸತೀಶ್ ಭಟ್ಗೆ ಸನ್ಮಾನ
2025-26ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಸತೀಶ್ ಭಟ್ ಅವರನ್ನು ಈ ಸಂದರ್ಭದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
50 ಮಂದಿಯಿಂದ ರಕ್ತದಾನ;
ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಸುಮಾರು 50 ಮಂದಿ ರಕ್ತದಾನ ಮಾಡಿದರು. ಜೆಸಿಐ ಆಲಂಕಾರು, ಎಸ್.ಆರ್.ಬಿಲ್ಡರ್ಸ್ ಆಂಡ್ ಡೆವಲಪ್ಪರ್ಸ್ ಪುತ್ತೂರು, ಎಸ್ಆರ್ಕೆ ಲ್ಯಾಡರ್ಸ್ ಪುತ್ತೂರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಆಲಂತಾಯ ವಲಯದ ಸದಸ್ಯರು ರಕ್ತದಾನ ಮಾಡಿ ಸಹಕರಿಸಿದರು. ರಕ್ತದಾನ ಮಾಡಿದವರಿಗೆ ಕೃತಜ್ಞತಾ ಪತ್ರ ಮತ್ತು ರಕ್ತ ವರ್ಗೀಕರಣ ಕಾರ್ಡ್ ನೀಡಲಾಯಿತು. 2ನೇ ಹಂತದಲ್ಲಿ ಮತ್ತೆ 50 ಮಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಲು ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಉಚಿತ ಕಣ್ಣಿನ ಪರೀಕ್ಷೆಯೂ ನಡೆಯಿತು.