✍️ ಶರತ್ ಕುಮಾರ್ ಪಾರ
ಪುತ್ತೂರು: ಈ ಬಾರಿಯ ಮಳೆಗಾಲದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಡಿಕೆ ತೋಟಗಳಿಗೆ ಕೊಳೆರೋಗ ಬಾಧಿಸಿದ್ದು, ತಾಲೂಕಿನಾದ್ಯಂತ ಶೇ.80ಕ್ಕಿಂತಲೂ ಹೆಚ್ಚು ಅಡಿಕೆ ಕೃಷಿಗೆ ಕೊಳೆರೋಗ ಆವರಿಸಿ ಕೃಷಿಕರಿಗೆ ಭಾರೀ ನಷ್ಟವುಂಟಾಗಿದೆ.ಇದರಿಂದ ಕಂಗೆಟ್ಟಿರುವ ಕೃಷಿಕರು ಆರ್ಥಿಕ ನಷ್ಟದ ಭೀತಿಯಲ್ಲಿದ್ದಾರೆ.
ಈ ಬಾರಿ ಮುಂಗಾರು ಮೇ ತಿಂಗಳ ಕೊನೆಯ ಭಾಗದಲ್ಲೇ ಆರಂಭವಾಗಿದ್ದು, ಬಳಿಕ ನಿರಂತರ ಮಳೆ ಸುರಿಯಲಾರಂಭಿಸಿತ್ತು. 2024ರಲ್ಲಿ ಜೂ.15ರ ನಂತರ ಮಳೆ ಆರಂಭವಾಗಿತ್ತು. ಆದರೆ ಈ ವರ್ಷ ಒಂದು ತಿಂಗಳು ಮೊದಲೇ ಮಳೆ ಆರಂಭಗೊಂಡಿತ್ತು. ಅಲ್ಲದೆ ಮುಂಗಾರಿನ ಜೊತೆಗೆ ವಾಯುಭಾರ ಕುಸಿತವೂ ಆಗಿದ್ದ ಕಾರಣ ಮಳೆ ಬೇಗನೇ ಆರಂಭವಾಗಿ ಕಳೆದ ಆಗಸ್ಟ್ ತಿಂಗಳವರೆಗೆ ನಿರಂತರ ಸುರಿದ ಕಾರಣ ಜಿಲ್ಲೆಯ ಜನತೆಯ ಜೀವನಾಧಾರವಾಗಿರುವ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಬಹುತೇಕ ಕೊಳೆರೋಗ ಪಾಲಾಗಿದೆ.
ಬೋರ್ಡೋ ದ್ರಾವಣ ಸಿಂಪಡಣೆಗೂ ಅಡ್ಡಿಯಾಗಿದ್ದ ಮಳೆ
ನಿರಂತರ ಮಳೆಯ ಪರಿಣಾಮ ಅಡಿಕೆ ತೋಟಗಳಿಗೆ ಮದ್ದು ಸಿಂಪಡಣೆ ಕಾರ್ಯಕ್ಕೂ ಅಡಚಣೆಯಾಗಿತ್ತು. ಸಾಮಾನ್ಯವಾಗಿ ಮೇ ಜೂನ್ ತಿಂಗಳಿನಲ್ಲಿ ಪ್ರಥಮ ಸುತ್ತಿನ ಮದ್ದು ಸಿಂಪಡಣೆ ನಡೆದು 45 ದಿನಗಳ ಬಳಿಕ ಮತ್ತೆ ಎರಡನೇ ಬಾರಿ ಮದ್ದು ಸಿಂಪಡಣೆ ಮಾಡುತ್ತಾರೆ ಕೃಷಿಕರು. ಆದರೆ ಈ ಬಾರಿ ನಿರಂತರ ಮಳೆ ಸುರಿದ ಕಾರಣದಿಂದ ಜುಲೈ ತಿಂಗಳವರೆಗೂ ಅಡಿಕೆ ತೋಟಗಳಿಗೆ ಮೊದಲ ಬಾರಿಯ ಮದ್ದು ಸಿಂಪಡಣೆಯೇ ಅಸಾಧ್ಯವಾಗಿತ್ತು. ಇದರಿಂದ ಅಡಿಕೆ ತೋಟದಲ್ಲಿ ಕೊಳೆ ರೋಗ ಬಂದಿದೆ. ಕೊಳೆರೋಗದಿಂದ ದೊಡ್ಡದಾದ ಅಡಿಕೆಗಳೂ(ನಳ್ಳಿ)ಕೆಳಗೆ ಬೀಳುತ್ತಿದೆ. ಇದರಿಂದ ಕಂಗಲಾದ ಕೃಷಿಕರು ಉಳಿದ ಅಡಿಕೆಯನ್ನು ರಕ್ಷಿಸುವುದು ಹೇಗೆ ಎಂಬ ಚಿಂತೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಸಪ್ಟೆಂಬರ್ ತಿಂಗಳಿನಲ್ಲಿಯೂ ಮದ್ದು ಸಿಂಪಡಣೆ ಮಾಡುತ್ತಿದ್ದಾರೆ ರೈತರು.
ಅಡಿಕೆ ಫಸಲು ಸರ್ವನಾಶ, ಆರ್ಥಿಕ ಸಂಕಷ್ಟ
ಅಡಿಕೆ ಕೃಷಿಯನ್ನೇ ನಂಬಿಕೊಂಡು ಬದುಕುತ್ತಿರುವವರು ಇಲ್ಲಿನ ರೈತರು.ದ.ಕ.ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು ಇದರಲ್ಲಿ ಸುಮಾರು ಶೇ.60ರಷ್ಟು ಬೆಳೆಗೆ ಕೊಳೆರೋಗ ಆವರಿಸಿಕೊಂಡಿದೆ. ಪುತ್ತೂರು ತಾಲೂಕಿನಲ್ಲಿ ಸುಮಾರು 14 ಸಾವಿರ ಹೆಕ್ಟೇರ್‌ನಲ್ಲಿ ಅಡಿಕೆ ಕೃಷಿ ಬೆಳೆಯಲಾಗುತ್ತಿದೆ. ಇದರಲ್ಲಿ ಸುಮಾರು ಶೇ.80ರಷ್ಟು ಅಡಿಕೆ ಬೆಳೆಗೆ ಕೊಳೆರೋಗ ಬಂದಿರುವ ಬಗ್ಗೆ ವರದಿಯಾಗಿದೆ.ದ.ಕ.ಜಿಲ್ಲೆಯಲ್ಲಿ ಇಲಾಖೆಯ ವರದಿ ಪ್ರಕಾರ 15,317 ಹೆಕ್ಟೇರ್ ಅಡಿಕೆ ಬೆಳೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ವಿಪರೀತ ಮಳೆಯಿಂದ ಕೊಳೆರೋಗ ಬಂದು ಅಡಿಕೆ ಫಸಲು ಸರ್ವನಾಶವಾದ ಕಾರಣ ರೈತರು ಆರ್ಥಿಕ ಸಂಕಷ್ಟದ ಭೀತಿಯಲ್ಲಿದ್ದಾರೆ. ಅಡಿಕೆಯನ್ನೇ ನಂಬಿಕೊಂಡ ರೈತರಿಗೆ ಇದೀಗ ಆರ್ಥಿಕ ಹೊಡೆತದ ಬಿಸಿ ತಟ್ಟಿದ್ದು ಸಾಲದ ಹೊರೆ ಹೆಚ್ಚಾಗಲಿದೆ.
ಹಳದಿ ಎಲೆ ಚುಕ್ಕೆ ರೋಗ
ಒಂದೆಡೆ ಕೊಳೆರೋಗದಿಂದ ಬಹುತೇಕ ಅಡಿಕೆ ಫಸಲು ನಾಶವಾಗಿದ್ದರೆ ಮತ್ತೊಂದೆಡೆ ಹಳದಿ ಎಲೆ ಚುಕ್ಕೆ ರೋಗ ಅಡಿಕೆ ಗಿಡ,ಮರಗಳನ್ನೇ ನಾಶ ಮಾಡುತ್ತಿರುವ ವಿಚಾರವೂ ಕೃಷಿಕರ ನಿದ್ದೆಗೆಡಿಸಿದೆ. ಅಡಿಕೆ ಮರ ಕಪ್ಪಾಗಿ ಸಾಯುವ ಬಗ್ಗೆಯೂ ಕೃಷಿಕರು ಮಾಹಿತಿ ನೀಡುತ್ತಿದ್ದಾರೆ.
ಪುತ್ತೂರು,ಕಡಬದಲ್ಲಿ 4150 ಹೆಕ್ಟೇರ್ ಅಡಿಕೆ ಕೊಳೆರೋಗ
ನಿರಂತರ ಮಳೆಯಿಂದ ಹಾನಿಯಾದ ಬೆಳೆಯ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಪುತ್ತೂರು ತಾಲೂಕಿನಲ್ಲಿ 2100 ಹೆಕ್ಟೇರ್ ಹಾಗೂ ಕಡಬ ತಾಲೂಕಿನಲ್ಲಿ 2150 ಹೆಕ್ಟೇರ್ ಅಡಿಕೆ ಬೆಳೆ ತೀವ್ರತರದ ಕೊಳೆರೋಗಕ್ಕೆ ತುತ್ತಾಗಿದೆ. ಮೇ ತಿಂಗಳಿನಿಂದ ಆಗಸ್ಟ್‌ವರಗೆ ಭಾರೀ ಮತ್ತು ನಿರಂತರ ಮಳೆಯಿಂದಾಗಿ ಕೊಳೆ ರೋಗದಿಂದ ಹಾನಿಯಾಗಿದೆ.
ಮಂಜುನಾಥ್ ಡಿ. ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ, ದ.ಕ.
ಮೂರು ತಿಂಗಳು ಮಳೆ ಬಂದ ಕಾರಣ ಕೊಳೆರೋಗ ಬಂದು ಅಡಿಕೆ ತೋಟ ಸರ್ವನಾಶವಾಗಿದೆ. ನಾನು ಸಮಗ್ರ ಕೃಷಿಕ. ಬೇರೆ ಬೇರೆ ಕೃಷಿ ಇದ್ದ ಕಾರಣ ನಮಗೆ ಜೀವನಾಂಶ ಆಗುತ್ತಿದೆ. ಮೂರು ತಿಂಗಳು ಮಳೆ ಬಂದರೆ ಕೃಷಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ. ಹೈಬ್ರಿಡ್ ತಳಿಗಳಿಗೆ ಕೊಳೆರೋಗ ಬೇಗ ಬಾಧಿತವಾಗುತ್ತದೆ. ಊರಿನ ತಳಿಗೆ ಬೇಗ ಬಾಧಿಸುವುದಿಲ್ಲ. ಈ ಬಾರಿ ದೊಡ್ಡ ಪ್ರಮಾಣದಲ್ಲಿ, ಅಡಿಕೆ, ಕಾಳುಮೆಣಸು. ಕೊಕ್ಕೋ ಬೆಳೆ ನಷ್ಟವಾಗಿದೆ. ಸಂಬಂದಪಟ್ಟ ಇಲಾಖಾಧಿಕಾರಿಗಳು ರೈತನ ತೋಟಕ್ಕೆ ಹೋಗಿ ಸಮೀಕ್ಷೆ ಮಾಡಿ ರೈತರ ಸಮಸ್ಯೆಗೆ ಸ್ಪಂದಿಸಬೇಕು.
ಕಡಮಜಲು ಸುಭಾಷ್ ರೈ, ಅಡಿಕೆ ಕೃಷಿಕರು
ದೊಡ್ಡ ಮಟ್ಟದಲ್ಲಿ ಅಡಿಕೆಗೆ ಹಾನಿಯಾಗಿರುವುದು ಇದೇ ಮೊದಲು. ಜೂನ್ ತಿಂಗಳ ನಂತರ ಅಡಿಕೆ(ನಳ್ಳಿ) ಬೀಳಲು ಆರಂಭವಾಯಿತು. ಶೇ.80 ಅಡಿಕೆ ಕೊಳೆರೋಗಕ್ಕೆ ಹೋಗಿದೆ. ಶೇ.20 ಮಾತ್ರ ಉಳಿದಿದೆ. ನಾಲ್ಕು ಬಾರಿ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿದ್ದೇವೆ. ಹೆಚ್ಚಿನ ರೈತರ ತೋಟದಲ್ಲಿ ಕೊಳೆರೋಗ ಬಾಧಿಸಿದೆ. ಸರಕಾರ ವಿಶೇಷ ಗಮನ ಹರಿಸಿ ದ.ಕ.ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು.
ವಿಜಯ ಕುಮಾರ ಕೋರಂಗ, ಜಿಲ್ಲಾಧ್ಯಕ್ಷರು, ಕೃಷಿಕ ಸಮಾಜ