ಆಹಾರ, ಕೃಷಿ, ಶೈಕ್ಷಣಿಕ, ವಾಣಿಜ್ಯ ಮೇಳ | ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ
ಕಡಬ: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದ.ಕ., ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಽಕಾರಿಗಳ ಕಚೇರಿ ಪುತ್ತೂರು ಇವರ ಸಹಯೋಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧಿನದಲ್ಲಿರುವ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಯ ಆಶ್ರಯದಲ್ಲಿ ಮೈಸೂರು ವಿಭಾಗ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕರ ಮತ್ತು ಬಾಲಕಿಯರ ’ಕಬಡ್ಡಿ ಪಂದ್ಯಾಟ-2025’ ಸೆ.27 ಮತ್ತು 28ರಂದು ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜು ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಜೊತೆಗೆ ಅಂತರ್ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಖ್ಯಾತಿಯ ಆಳ್ವಾಸ್ ಸಾಂಸ್ಕೃತಿಕ ವೈಭವ, ಆಹಾರ, ಕೃಷಿ, ವಾಣಿಜ್ಯ, ಶೈಕ್ಷಣಿಕ, ವಿಜ್ಞಾನ ಮೇಳ ಹಾಗೂ ಹಾಸ್ಯ-ನೃತ್ಯ-ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜನಾ ಸಮಿತಿ ಸಂಚಾಲಕ ಕೇಶವ ಅಮೈ ತಿಳಿಸಿದ್ದಾರೆ.
ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೆ.27ರಂದು ಪೂರ್ವಾಹ್ನ 9 ಕ್ಕೆ ಆತೂರು ಸಿ.ಎ.ಬ್ಯಾಂಕ್ ಬಳಿಯಿಂದ ಕ್ರೀಡಾಪಟುಗಳ ಮೆರವಣಿಗೆ ನಡೆಯಲಿದೆ. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು ಮೆರವಣಿಗೆ ಉದ್ಘಾಟಿಸಲಿದ್ದಾರೆ. ಪೂರ್ವಾಹ್ನ 10ಕ್ಕೆ ಪ್ರವೇಶದ್ವಾರ, ಮಳಿಗೆ, ಸಭಾಂಗಣದ ಉದ್ಘಾಟನೆ ನಡೆಯಲಿದೆ. ’ಪ್ರದೀಪ ಬಾಕಿಲ’ದ್ವಾರವನ್ನು ಶಿಕ್ಷಕಿ ಹೇಮಲತಾ, ಮಳಿಗೆಗಳನ್ನು ಯು.ಎ.ಇ.ಯಲ್ಲಿ ಇಂಜಿನಿಯಾರ್ ಆಗಿರುವ ವೀರಪ್ಪ ಪುರಿಕೆರೆ, ವಿಶ್ವೇಶತೀರ್ಥ ಸಭಾಂಗಣವನ್ನು ಫಿನ್ಲ್ಯಾಂಡ್ನಲ್ಲಿ ವಿಜ್ಞಾನಿಯಾಗಿರುವ ಡಾ.ನೋಣಪ್ಪ ಹಾಗೂ ಕ್ರೀಡಾಂಗಣವನ್ನು ಉದ್ಯಮಿಗಳಾದ ಡಾ| ವಿ.ಕನಕರಾಜ್, ದೀಪಕ್ ದೀಕ್ಷಿತ್ ಉದ್ಘಾಟಿಸಲಿದ್ದಾರೆ.
ಪೂರ್ವಾಹ್ನ 10.30ರಿಂದ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಉದ್ಘಾಟಿಸಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಧ್ವಜಾರೋಹಣ ನೆರವೇರಿಸಲಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಿಕ್ಷಣ ಸಚಿವ ಮಧು ಎಸ್.ಬಂಗಾರಪ್ಪ, ಸಂಸದ ಕ್ಯಾ| ಬ್ರಿಜೇಶ್ ಚೌಟ ಸಹಿತ ದ.ಕ.ಜಿಲ್ಲೆಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬಳಿಕ ಕಬಡ್ಡಿ ಪಂದ್ಯಾಟ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಆಳ್ವಾಸ್ ಸಾಂಸ್ಕೃತಿಕ ವೈಭವ;
ಸೆ.27ರಂದು ಸಂಜೆ 6 ಗಂಟೆಯಿಂದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 350 ವಿದ್ಯಾರ್ಥಿಗಳಿಂದ 3 ಗಂಟೆಗಳ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಖ್ಯಾತಿಯ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ. ಇದರಲ್ಲಿ ಗುಜರಾತಿನ ಗಾರ್ಭನೃತ್ಯ ಮತ್ತು ದಾಂಡಿಯ, ಬಡಗುತಿಟ್ಟು ಯಕ್ಷಗಾನ ಶ್ರೀರಾಮ ಪಟ್ಟಾಭಿಷೇಕ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಪುರುಲಿಯಾ, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಡೊಳ್ಳು ಕುಣಿತ, ಸೃಜನಾತ್ಮಕ ನೃತ್ಯ, ಕಥಕ್ ನೃತ್ಯ ವರ್ಷಧಾರೆ, ಶಾಸೀಯ ನೃತ್ಯ-ನವದುರ್ಗೆಯರು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಅಭಿನಂದನಾ ಸಮಾರಂಭ:
ಸೆ.27ರಂದು ರಾತ್ರಿ 8.30ರಿಂದ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸತೀಶ್ ಭಟ್ ಇವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ. ಬಿಳಿನೆಲೆ ಹಾಗೂ ರಾಮಕುಂಜದ ಅವರ ವಿದ್ಯಾರ್ಥಿಗಳಿಂದ ಗೌರವ ಸನ್ಮಾನ ನಡೆಯಲಿದೆ. ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ಖ್ಯಾತ ವಾಗ್ಮಿಗಳೂ ಆದ ರಾಜೇಂದ್ರ ಭಟ್ ಕೆ.ಅಭಿನಂದನಾ ಭಾಷಣ ಮಾಡಲಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಶಶಿಧರ ಜಿ.ಎಸ್. ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಕನ್ನಡ-ತುಳು ಹಾಸ್ಯ ಕಲಾವಿದ ಅರವಿಂದ್ ಬೋಳಾರ್, ಸು ಫ್ರಮ್ ಸೋ ಚಲನಚಿತ್ರದ ನಾಯಕ ನಟ ಜೆ.ಪಿ.ತುಮಿನಾಡು ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರೋಪ/ಸಾಂಸ್ಕೃತಿಕ ರಸಸಂಜೆ:
ಸೆ.28ರಂದು ಬೆಳಿಗ್ಗೆ ಉಪಾಂತ್ಯ ಹಾಗೂ ಅಂತಿಮ ಪಂದ್ಯಗಳು ನಡೆಯಲಿದೆ. ಅಪರಾಹ್ನ 2 ಗಂಟೆಗೆ ರಾಮಕುಂಜ ಗ್ರಾ.ಪಂ.ಸದಸ್ಯ ಸೂರಪ್ಪ ಕುಲಾಲ್ ಅಧ್ಯಕ್ಷತೆಯಲ್ಲಿ ಸಮಾರೋಪ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 4ರಿಂದ ನಾಡಿನ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ರಸಸಂಜೆ ’ಚುರುಮುರಿ’ ಹಾಸ್ಯ-ನೃತ್ಯ-ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಹಾಸ್ಯ ಕಲಾವಿದರಾದ ಸುಂದರ್ ರೈ ಮಂದಾರ, ದೀಪಕ್ ರೈ ಪಾಣಾಜೆ, ಅರುಣ್ಚಂದ್ರ ಬಿ.ಸಿ.ರೋಡ್, ರಂಜನ್ ಬೋಳೂರು, ಸೋಮನಾಥ್ ಮಂಗಲ್ಪಾಡಿ, ಸುರೇಶ್ ಸರಪಾಡಿ, ರವಿ ಸುಂಕದಕಟ್ಟೆ ಭಾಗವಹಿಸಲಿದ್ದಾರೆ.
100ಕ್ಕೂ ಹೆಚ್ಚು ಮಳಿಗೆಗಳು;
ಕಾರ್ಯಕ್ರಮದಲ್ಲಿ ಕೃಷಿ, ವಾಣಿಜ್ಯ, ಶೈಕ್ಷಣಿಕ, ವಿಜ್ಞಾನ ಹಾಗೂ ಆಹಾರ ಮೇಳ ನಡೆಯಲಿದ್ದು 100ಕ್ಕಿಂತಲೂ ಹೆಚ್ಚು ಮಳಿಗೆಗಳಿರಲಿವೆ. ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರೋಗ್ಯ, ಪೊಲೀಸ್ ಇಲಾಖೆಯ ಸಹಕಾರವೂ ಪಡೆಯಲಾಗುವುದು. ಒಟ್ಟಿನಲ್ಲಿ ಕುಟುಂಬದ ಎಲ್ಲರೂ ಜೊತೆಯಾಗಿ ಬಂದು ನೋಡಬಹುದಾದ ಕಾರ್ಯಕ್ರಮ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಬಡ್ಡಿ ಪಂದ್ಯಾಟದ ಆಯೋಜನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೆ.ಎಸ್., ಪ್ರಧಾನ ಕಾರ್ಯದರ್ಶಿ ಸತೀಶ್ ಭಟ್, ಉಪಾಧ್ಯಕ್ಷ ಸೇಸಪ್ಪ ರೈ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕೆ., ಪ್ರಚಾರ ಸಮಿತಿ ಸಂಚಾಲಕ ಗಣೇಶ್ ಕಟ್ಟಪುಣಿ ಅವರು ಪಂದ್ಯಾಟದ ಕುರಿತಂತೆ ಮಾಹಿತಿ ನೀಡಿದರು.