ಸೀತಾರಾಮ ರೈ ಕೆದಂಬಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ಪುತ್ತೂರಿನಲ್ಲಿ 91ನೇ ವರ್ಷದ ಶಾರದೋತ್ಸವ – ಸೆ.22 ಶಾರದಾ ಭಜನಾ ಮಂದಿರದಲ್ಲಿ ನವರಾತ್ರಿ ಪೂಜೆ ಆರಂಭ

0

ಪುತ್ತೂರು: ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯುತ್ತಿರುವ 91ನೇ ವರ್ಷದ ಶಾರದೋತ್ಸವವರು ಸೆ.22ರಿಂದ ನವರಾತ್ರಿ ಪೂಜೆಯಿಂದ ಆರಂಭಗೊಳ್ಳಲಿದೆ. ಸೆ.29ಕ್ಕೆ ಶ್ರೀ ಶಾರದೆಯ ವಿಗ್ರಹ ಪ್ರತಿಷ್ಠೆ, ಸೆ.30ಕ್ಕೆ ಸಾಮೂಹಿಕ ಚಂಡಿಕಾ ಹೋಮ ನಡೆಯಲಿದ್ದು, ಅ.2ಕ್ಕೆ ವೈಭವದ ಶೋಭಾಯಾತ್ರೆಯು ಸಂಜೆ ಬೊಳುವಾರಿನಿಂದ ದರ್ಬೆಯ ತನಕ ನಡೆಯಲಿದೆ ಎಂದು ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ಭಜನಾ ಮಂದಿರದಲ್ಲಿ ಸೆ.22ರಿಂದ ನವರಾತ್ರಿ ಉತ್ಸವವು ಪ್ರಾರಂಭಗೊಳ್ಳಲಿದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಭಜನೆ ಮತ್ತು ಮಹಾಪೂಜೆ ನಡೆಯಲಿದೆ. ನವರಾತ್ರಿ ಪೂಜೆಯನ್ನು ಮಾಜಿ ಶಾಸಕರು ಮತ್ತು ಶೋಭಯಾತ್ರೆ ಸಮಿತಿ ಗೌರವಾಧ್ಯಕ್ಷ ಸಂಜೀವ ಮಠಂದೂರು ಅವರು ದೀಪ ಪ್ರಜ್ವಲನೆಯೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸೆ.29ಕ್ಕೆ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಶಾರದೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಸೆ.29ರಿಂದ ಪ್ರತಿ ದಿನ ಸಂಜೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ.29ಕ್ಕೆ ಸಂಎಜ ಗಂಟೆ 5.30ಕ್ಕೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ತೆರಿಗೆ ಸಲಹೆಗಾರ ಕೃಷ್ಣ ಎಂ ಅಳಿಕೆ, ಮಾನಕ ಜ್ಯುವೆಲ್ಲರ‍್ಸ್‌ನ ಮಾಲಕ ಸಿದ್ದನಾಥ್ ಅವರು ಗೌರವ ಉಪಸ್ಥಿತಿಯಲ್ಲಿರುತ್ತಾರೆ. ಸಭಾ ಕಾರ್ಯಕ್ರಮದ ಮೊದಲು ಲಲಿತ ಸಹಸ್ರನಾಮ ಪಠಣ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿಯಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ಸೆ.30ಕ್ಕೆ ಸಂಜೆ ಗಂಟೆ 5.30ಕ್ಕೆ ಕಾಮತ್ ಕ್ರಷರ್ ಆಂಡ್ ಗ್ರಾನೈಟ್ ಪುತ್ತೂರು ಇದರ ಮಾಲಕ ಸುರೇಶ್ ಕಾಮತ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಹಾವೀರ ಆಸ್ಪತ್ರೆಯ ಡಾ. ಸುರೇಶ್ ಪುತ್ತೂರಾಯ, ಪಿಡಬ್ಲ್ಯೂಡಿ ಗುತ್ತಿಗೆದಾರ ರಂಜಿತ್ ಬಂಗೇರ ಅವರು ಗೌರವ ಉಪಸ್ಥಿತಿಯಲ್ಲಿರುತ್ತಾರೆ.

ಸಭಾ ಕಾರ್ಯಕ್ರಮದ ಬಳಿಕ ಹರಿಣಿ ಮತ್ತು ಬಳಗದಿಂದ ಭಕ್ತಿ ಭಾವಗೀತಾ ಸಂಗಮ ನಡೆಯಲಿದೆ. ಅ.1ಕ್ಕೆ ಸಂಜೆ ಮಂಗಳೂರು ಶ್ರೀ ಕಟೀಲೇಶ್ವರಿ ಲಾಜಿಸ್ಟಿಕ್ಸ್‌ನ ಜನಾರ್ದನ ಪಡುಮಲೆ ಅವರು ದೀಪ ಪ್ರಜ್ವಲನೆ ಮಾಡಲಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನಳಿನಿ ಪಿ ಶೆಟ್ಟಿ, ಶ್ರೀ ಶಾರದಾ ಭಜನಾ ಮಂದಿರದ ಹಿರಿಯ ಸದಸ್ಯ ಕಿಟ್ಟಣ್ಣ ಗೌಡ ಅವರು ಗೌರವ ಉಪಸ್ಥಿತಿಯಲ್ಲಿರುತ್ತಾರೆ. ಸಭಾ ಕಾರ್ಯಕ್ರಮದ ಬಳಿಕ ಪಾಂಚಜನ್ಯ ಯಕ್ಷ ಕಲಾ ವೃಂದ ಪುತ್ತೂರು ಇವರಿಂದ ಶ್ರೀದೇವಿ ಚರಿತಾಮೃತ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅ.2ಕ್ಕೆ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದವರು ಹೇಳಿದರು.


ಅ.2ಕ್ಕೆ ವೈಭವದ ಶೋಭಾಯತ್ರೆ:
ಅ.2ರಂದು ಸಂಜೆ 5 ಗಂಟೆಗೆ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆಯಲಿದೆ. ಬೊಳುವಾರು ವೃತ್ತದಿಂದ ದರ್ಬೆ ವೃತ್ತದ ತನಕ ನಡೆಯಲಿರುವ ಶೋಭಾಯಾತ್ರೆಗೆ ಬೊಳುವಾರು ವೃತ್ತದ ಬಳಿ ಮಾಜಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಅವರು ಶ್ರೀ ಶಾರದಾ ದೇವಿಗೆ ಪುಷ್ಪಾರ್ಚಣೆ ಮಾಡಲಿದ್ದಾರೆ.

ಶೋಭಾಯಾತ್ರೆಯ ಆರಂಭದಲ್ಲಿ ಸಂಜೆ ಗಂಟೆ 3ರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಬೊಳುವಾರು ವೃತ್ತದಲ್ಲಿ ನಡೆಯಲಿದೆ. ಅದಾದ ಬಳಿಕ ಸಂಜೆ ಗಂಟೆ 5ಕ್ಕೆ ಶೋಭಯಾತ್ರೆ ಅರಂಭಗೊಳ್ಳಲಿದೆ. ಶೋಭಾಯಾತ್ರೆಯಲ್ಲಿ ಚೆಂಡೆಮೇಳ, ವಾದ್ಯಮೇಳ, ಕುಣಿತ ಭಜನೆ, ಕರ್ನಾಟಕ, ಕೇರಳ ಹಾಗೂ ತುಳುನಾಡಿನ ವೈವಿದ್ಯಮಯ ಕಲಾ ತಂಡಗಳ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಸಾಗಲಿದೆ. ವಿಶೇಷವಾಗಿ ಶೋಭಾಯಾತ್ರೆಯಲ್ಲಿ ಡಿಜೆ, ಸುಡುಮದ್ದು ಪ್ರದರ್ಶನಗಳನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ನಾಸಿಕ್ ಬ್ಯಾಂಡ್‌ಗಳಿಗೆ ಅವಕಾಶ ಇರುವುದಿಲ್ಲ. ನಮ್ಮ ನಾಡಿನ ಸಂಪ್ರದಾಯ, ಸಂಸ್ಕೃತಿ, ಧಾರ್ಮಿಕತೆಗೆ ಅನುಗುಣವಾಗಿ ಶೋಭಾಯಾತ್ರೆ ಸುಂದರವಾಗಿ, ಶಿಸ್ತು ಹಾಗೂ ಅಚ್ಚುಕಟ್ಟಾಗಿ ನೆರವೇರಲಿದೆ. ಶೋಭಾಯಾತ್ರೆಯು ನಿಗದಿತ ಸಮಯದಲ್ಲಿ ಸಂಜೆ 5 ಗಂಟೆಗೆ ಬೊಳುವಾರಿನಿಂದ ಪ್ರಾರಂಭಗೊಂಡು ದರ್ಬೆ ವೃತ್ತದ ಬಳಿ ತಲುಪಲಿದೆ. ಅಲ್ಲಿಂದ ಹಿಂದಿರುಗಿ ದೇವಳದ ಕೆರೆಯಲ್ಲಿ ಶ್ರೀ ಶಾರದೆಯ ವಿಗ್ರಹವು ಜಲಸ್ತಂಭಗೊಳ್ಳಲಿದೆ ಎಂದು ಹೇಳಿದ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಈ ಭಾರಿ ಆಂಧ್ರ ಪ್ರದೇಶದ ಕಲಾ ತಂಡಗಳು ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಲಿದೆ ಎಂದರು. ಕಾನೂನಿನ ಚೌಕಟ್ಟಿನಂತೆ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲಿದೆ ಎಂದರು.

ಸೆ.30ಕ್ಕೆ ಚಂಡಿಕಾ ಯಾಗ:
ನವರಾತ್ರಿ ಉತ್ಸವದಲ್ಲಿ ಸೆ.30ರಂದು ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಚಂಡಿಕಾ ಯಾಗವು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಮಧ್ಯಾಹ್ನ ಗಂಟೆ 12ಕ್ಕೆ ಪೂರ್ಣಾಹುತಿ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಮೂಹಿಕ ಚಂಡಿಕಾ ಹೋಮ ಸೇವೆ ಮಾಡಿಸುವ ಭಕ್ತರು ಸೇವಾ ರಶೀದಿಯನ್ನು ಮಾಡುವಂತೆ ವಿನಂತಿ
ಸೀತಾರಾಮ ರೈ ಕೆದಂಬಾಡಿಗುತ್ತು,
ಅಧ್ಯಕ್ಷರು ಶ್ರೀ ಶಾರದಾ ಭಜನಾ ಮಂದಿರ

6 ಕೇಂದ್ರಗಳಲ್ಲಿ ಕಲಾ ಪ್ರದರ್ಶನ:
ಶೋಭಾಯಾತ್ರೆಯಲ್ಲಿ ಬೊಳುವಾರು ವೃತ್ತದಿಂದ ದರ್ಬೆಯ ತನಕ 6 ಕೇಂದ್ರಗಳಲ್ಲಿ ನಿಂತು ಸಾರ್ವಜನಿಕರಿಗೆ ಶೋಭಾಯಾತ್ರೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕೇಂದ್ರಗಳಲ್ಲಿ ಕಲಾ ತಂಡಗಳಿಗೆ ಪ್ರದರ್ಶನ ನೀಡಲು ಸ್ಥಳಗಳನ್ನು ನಿಗದಿಪಡಿಸಲಾಗಿದ್ದು, ಬೊಳುವಾರು ವೃತ್ತ, ಇನ್‌ಲ್ಯಾಂಡ್ ಮಯೂರ, ಶ್ರೀಧರ ಭಟ್ ಬ್ರದರ್ಸ್, ಬಸ್ ನಿಲ್ದಾಣ, ಹೊಟೇಲ್ ಸುಜಾತ ಬಳಿ ಹಾಗು ದರ್ಬೆ ವೃತ್ತದ ಬಳಿ ಕಲಾ ತಂಡಗಳಿಂದ ವಿಶೇಷ ಪ್ರದರ್ಶನಗಳು ನಡೆಯಲಿದೆ.

ಸಮಾಜ ವ್ಯವಸ್ಥೆಯಲ್ಲಿ ವ್ಯತ್ಯಾಸ ಆದಾಗ ಭಜನಾ ಮಂದಿರದ ಈ ಹಿಂದಿನ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಧಾರ್ಮಿಕ ಕಾರ್ಯಕ್ರಮವಾದ ಶಾರದಾ ಭಜನಾ ಮಂದಿರದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿಕೆ ಕೊಟ್ಟು ಅವರು ಹಿಂದೆ ಸರಿದಿದ್ದಾರೆ. ಅದಾದ ಬಳಿಕ ಸಮಿತಿ ಸಭೆ ಕರೆದು ನೂತನ ಸಮಿತಿ ರಚನೆ ಮಾಡಿದ್ದೇವೆ. ಇದೇ ವಿಚಾರದಲ್ಲಿ ಮೊದಲು ವಿಶ್ವಕರ್ಮ ಸಮಾಜದವರು ಕೂಡಾ ಮನವಿ ಕೊಟ್ಟಿದ್ದರು. ಶಾರದೋತ್ಸವಕ್ಕೆ ಇಷ್ಟು ವರ್ಷ ಬಹಳ ಕೊಡುಗೆ ನೀಡಿದ್ದೇವೆ ಎಂದೂ ಮನವಿ ಕೊಟ್ಟಿದ್ದರು. ಆ ಮನವಿಯನ್ನೂ ಸ್ವೀಕರಿಸಿದ್ದೇವೆ. ವಿಶ್ವಕರ್ಮ ಸಮಾಜದವರ ಸಹಕಾರದ ನಿರೀಕ್ಷೆಯಲ್ಲಿದ್ದೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಅಧ್ಯಕ್ಷರು ಉತ್ತರಿಸಿದರು.

LEAVE A REPLY

Please enter your comment!
Please enter your name here