ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕಿನ ವಿವಿಧ ವಿಶ್ವಕರ್ಮ ಸಮಾಜ ಸೇವಾ ಸಂಸ್ಥೆಗಳ ಸಂಯುಕ್ತ ಸಹಯೋಗದಲ್ಲಿ ಶ್ರೀ ವಿಶ್ವಕರ್ಮ ಜಯಂತಿಯು ಸೆ.17ರಂದು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ಸಂಸ್ಮರಣಾ ಉಪನ್ಯಾಸ ನೀಡಿದ ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ಕಿಶನ್ ಬಿ.ವಿ ಮಾತನಾಡಿ, ಎಲ್ಲದರ ಸೃಷ್ಟಿಕರ್ತ ವಿಶ್ವಕರ್ಮ. ಪ್ರತಿ ವಸ್ತುವಿನಲ್ಲಿಯೂ ವಿಶ್ವಕರ್ಮರ ಸೂಕ್ಷ್ಮತೆ, ಕೌಶಲ್ಯ ಕಾಣಲು ಸಾಧ್ಯ. ಶ್ರಮ ಜೀವಿಗಳಾಗಿರುವ ವಿಶ್ವಕರ್ಮ ಸಮಾಜದ ಮೇಲೆ ಇತರ ಜಾತಿಯವರಿಗೂ ಅಭಿಮಾನವಿದೆ. ಜನಸಂಖ್ಯೆ ಕಡಿಮೆಯಿದ್ದರೂ ಸಂಘಟಿತರಾಗಿ ಬಲಿಷ್ಠ ಸಮಾಜವಾಗಿ ಬೆಳೆಯುತ್ತಿದೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸಿರುವುದಲ್ಲದೆ ಸೂಕ್ಷ್ಮ ಕೆಲಸಗಳಿಗೆ ವಿಶ್ವಕರ್ಮ ಸಮಾಜ ಮಾತ್ರ ಸಾಧ್ಯವಾಗಿದೆ. ವಿಶ್ವಕರ್ಮ ಕುಶಲ ಕರ್ಮಿಗಳಿಗೆ ಅಮರ ಶಿಲ್ಪಿ ಜಕ್ಕಣಾಚಾರ್ಯ ಪ್ರಶಸ್ತಿ ನೀಡುತ್ತಿದ್ದು ಅಮರ ಶಿಲ್ಪಿ ಜಕ್ಕಣಾಚಾರ್ಯ ಪ್ರತಿಮೆ ಸ್ಥಾಪಿಸಬೇಕು. ವಿಶ್ವಕರ್ಮ ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ವಿಶ್ವಕರ್ಮ ಜಯಂತಿ ಬದಲು ವಿಶ್ವಕರ್ಮ ಉತ್ಸವ ಹಾಗೂ ಸಂಸ್ಮರಣಾ ಉಪನ್ಯಾಸದ ಬದಲು ಧಾರ್ಮಿಕ ಉಪನ್ಯಾಸ ಎಂದು ಬದಲಾವಣೆ ಮಾಡುವಂತೆ ವಿನಂತಿಸಿದರು.
ನಗರ ಯೋಜನಾ ಪ್ರಾಧೀಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ, ಆಧುನಿಕ ಯುಗದಲ್ಲಿ ತಮ್ಮ ಅಸ್ಮಿತೆ ಕಂಡುಕೊಳ್ಳಲು, ಸಮಾಜದ ಪ್ರಾಮುಖ್ಯತೆ ತಿಳಿದುಕೊಳ್ಳಲು ಜಯಂತಿ ಆಚರಣೆಗಳು ಪ್ರಸ್ತುತ. ಸಮಾಜದ ಮೇಲಾಗುವ ಶೋಷಣೆಗಳನ್ನು ಮೆಟ್ಟಿ ನಿಲ್ಲಲು ಇಂತಹ ಮಹಾತ್ಮರ ದಿನಾಚರಣೆ ಪ್ರಾರಂಭವಾಗಿದೆ. ಸಮಾಜದಲ್ಲಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ದಿನಾಚರಣೆಗಳು ಸಹಕಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ತಹಶೀಲ್ದಾರ್ ನಾಗರಾಜ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಿಕ್ಷಣವೇ ಪ್ರಮುಖ ಅಂಗ. ವಿಶ್ವಕರ್ಮ ಸಮಾಜದವರು ಕುಲ ಕಸುಬುಗಳೊಂದಿಗೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಸುಶಿಕ್ಷಿತರನ್ನಾಗಿ ಮಾಡುವಂತೆ ತಿಳಿಸಿದರು.
ನಗರ ಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಮಾತನಾಡಿ, ಶುಭಹಾರೈಸಿದರು. ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಆಚಾರ್ಯ ಕೊಕ್ಕಡ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ ಹಾಗೂ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಗರ ಸಭಾ ಸದಸ್ಯೆ ಇಂದಿರಾ ಪುರುಷೋತ್ತಮ ಆಚಾರ್ಯ, ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್, ಜಗದೀಶ್ ಎಸ್.ಎನ್, ಭುಜಂಗ ಆಚಾರ್ಯ, ದಿಶಾ ಸಮಿತಿ ಮಾಜಿ ನಾಮ ನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ ಸಹಿತ ಹಲವು ಮಂದಿ ವಿಶ್ವಕರ್ಮ ಸಮಾಜ ಬಾಂಧವರು ಹಾಗೂ ವಿವಿಧ ಇಲಾಖಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಷಯ ನಿರ್ವಾಹಕ ದಯಾನಂದ ಡಿ.ಟಿ ಸ್ವಾಗತಿಸಿದರು. ಶ್ರೀಕಲಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉಷಾ ಪ್ರಾರ್ಥಿಸಿದರು, ಉಪ ತಹಶೀಲ್ದಾರ್ ರವಿಕುಮಾರ್, ಕಂದಾಯ ನಿರೀಕ್ಷಕ ಗೋಪಾಲ್, ಚುನಾವಣಾ ಶಾಖೆಯ ಶಿವಾನಂದ ನಾಟೆಕರ್ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು.
ವಿಶ್ವಕರ್ಮ ಸಮಾಜದವರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ, ರಾಜ್ಯ ಸರಕಾರಗಳು ಸಾಕಷ್ಡು ಯೋಜನೆಗಳನ್ನು ತಂದಿದೆ. ಪ್ರದಾನಿ ನರೇಂದ್ರ ಮೋದಿಯವರು ಸಮಾಜದ ಮೇಲಿನ ವಿಶೇಷ ಕಾಲಜಿಯಿದ್ದು ಪಿಎಂ ವಿಶ್ವಕರ್ಮ ಯೋಜನೆ ಪ್ರಾರಂಭಿಸಿದ್ದರಾರೆ. ಈ ಯೋಜನೆಯಿಂದ ಸಮಾಜದಲ್ಲಿ ಆರ್ಥಿಕ ದೃಡತೆ, ಕೌಶಲ್ಯ ಬಳಸಿಕೊಳ್ಳಲು ಹಾಗೂ ಸಬಲೀಕರಣಗೊಳಿಸಲು ಸಾಕಷ್ಟು ಸಹಕಾರಿಯಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮಾಜದ ಅಭಿವೃದ್ಧಿ ಪ್ರೋತ್ಸಾಹ ನೀಡಿರುವ ಜೊತೆಗೆ ಮುಜರಾಯಿ ಇಲಾಖೆಯಲ್ಲಿ ಸಂಬಂಧಿಸಿದ ಇಲಾಖೆಗಳಲ್ಲಿ ವಿಶ್ವಕರ್ಮ ಸಮಾಜಕ್ಕೆ ಪ್ರಧಾನ್ಯತೆ ನೀಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಯಲ್ಲಿ ಅವಕಾಶ ನೀಡುವಂತೆ ಆದೇಶ ಮಾಡಿರುತ್ತಾರೆ.
-ಕಿಶನ್ ಬಿ.ವಿ. ಸಹಶಿಕ್ಷಕರು, ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರು