ಪುತ್ತೂರು: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ 32 ನೇ ವಾರ್ಷಿಕೋತ್ಸವ ಸೆ.14ರಂದು ಕಬಕ ಗ್ರಾಮದ ವಿದ್ಯಾಕುಟೀರದಲ್ಲಿ ಸಂಪನ್ನಗೊಂಡಿತು. ಬೆಳಗ್ಗೆ 6 ಗಂಟೆಯಿಂದ ವೈದಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಮಹಾಗಣಪತಿ ಹವನ, ಏಕಾದಶ ರುದ್ರಾಭಿಷೇಕ ಪುರಸ್ಸರ ಶಿವಾರಾಧನೆ, ಶ್ರೀ ರಾಮ ಕಲ್ಪೋಕ್ತ ಪೂಜೆ, ಶ್ರೀ ಸರಸ್ವತೀಪೂಜೆ, ಆಂಶಿಕ ಯಜುಸಂಹಿತಾ ಹವನ ಇತ್ಯಾದಿ, 9.30ರಿಂದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆ ನೂತನ ಆಡಳಿತ ಮಂಡಳಿ ಸದಸ್ಯರ ಸೇರ್ಪಡೆ, ಲೆಕ್ಕಪತ್ರ ಮಂಡನೆ ಇತ್ಯಾದಿ ಕಾರ್ಯಕ್ರಮಗಳು ನಡೆದವು.

10.30 ರಿಂದ 32ನೇ ವಾರ್ಷಿಕೋತ್ಸವದ ಅಂಗವಾಗಿ ವಸಿಷ್ಠಸಂಹಿತ ಸಹಿತ, ನೂತನ ಗ್ರಂಥಗಳ ಅನಾವರಣ, ವಿವಿಧ ಪ್ರಶಸ್ತಿಪ್ರಧಾನ, ವಿದ್ಯಾರ್ಥಿಗಳಿಗೆ ಸಂಸ್ಕೃತ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಪೂಗ ಸಂಶೋಧಕರಾದ ಬದನಾಜೆ ಶಂಕರ ಭಟ್ ಅಧ್ಯಕ್ಷತೆಯಲ್ಲಿ ನಡೆದವು. ಮುಖ್ಯ ಅಭ್ಯಾಗತರಾಗಿ ಶೃಂಗೇರಿ ರಾಷ್ಟ್ರೀಯ ಸಂಸ್ಕೃತ ವಿಶ್ವ ವಿದ್ಯಾಯಲದ ಸಹಾಯಕ ಆಚಾರ್ಯರಾದ ಡಾ. ವಿಶ್ವನಾಥ ಸುಂಕಸಾಳ ಆಗಮಿಸಿದ್ದರು. ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ ಭಟ್ ಬಿ, ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಸರ್ವಶ್ರೀ ವೇ.ಬ್ರ. ಪಂಜರಿಕೆ ಗಣಪತಿ ಭಟ್ಟ, ಡಾ. ರಾಧಾಕೃಷ್ಣನ್ ನಂಬೂದಿರಿ ಕಾಂಞಂಗಾಡು, ಡಾ. ಎಸ್.ಎನ್.ಹೆಗಡೆ ಮೈಸೂರು, ಶ್ರೀರಾಮ ಪಟ್ಟಾಜೆ, ಕು. ಅರ್ಚನಾ ಉಪಾಧ್ಯಾಯ ಮತ್ತು ಕು. ಸಮನ್ವಿ, ಉಡುಪಿ, ಇವರೆಲ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಧ್ಯಾಹ್ನ 2.30 ಗಂಟೆಯಿಂದ ಬೊಳುವಾರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ಭೀಷ್ಮಾರ್ಜುನ (ಕರ್ಮ ಬಂಧ) ಎಂಬ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದೊಂದಿಗೆ ವಾರ್ಷಿಕೋತ್ಸವವು ಸಂಪನ್ನಗೊಂಡಿತು.