ಪುತ್ತೂರು:ದೇವಳದ ಸಿಬ್ಬಂದಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ದೇವಸ್ಥಾನ ಪರಿಸರದಲ್ಲಿ ಇರುತ್ತಿದ್ದ ಲೀಲು ಎಂಬವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಸೆ.16ರಂದು ಮಧ್ಯಾಹ್ನ ದೇವಸ್ಥಾನದ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆಂದು ಆಕೆ ಆರೋಪಿಸಿದ್ದಾರೆ.ನಾನು ಪ್ರತಿನಿತ್ಯ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲೇ ಇರುತ್ತಿದ್ದೆ ಭಿಕ್ಷೆ ಬೇಡುತ್ತಿರಲಿಲ್ಲ.ಭಕ್ತರು ಚಿಲ್ಲರೆ ಕೊಡುತ್ತಿದ್ದರು.ನಿನ್ನೆ ನನ್ನನ್ನು ದೂಡಿ ಹಾಕಿದ್ದಾರೆ ಎಂದು ಲೀಲು ಅವರು ಆರೋಪಿಸಿದ್ದಾರೆ.ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.
ಯಾರಿಗೂ ಹಲ್ಲೆ ನಡೆಸಿಲ್ಲ-ಸ್ಪಷ್ಟನೆ:
ದೇವಸ್ಥಾನದ ವಠಾರದಲ್ಲಿ ಭಕ್ತರ ಚಪ್ಪಲಿ, ಬ್ಯಾಗ್ ಕಳವು ಕುರಿತು ಹಲವು ದೂರುಗಳು ಬರುತ್ತಿವೆ.ಇದರ ಜೊತೆಗೆ ಅಮಲು ಪದಾರ್ಥ ಸೇವಿಸಿ ದೇವಸ್ಥಾನದ ಹೊರಗಿರುವ ಗೋಪುರ, ಹಾಲ್ ಬಳಿ ಗಲಾಟೆ ಮಾಡಿದ ದೂರು ಕೂಡಾ ಭಕ್ತರಿಂದ ಬಂದಿದೆ.ದೇವಸ್ಥಾನ ಪರಿಸರ ಶುದ್ದತೆಯಲ್ಲಿರಬೇಕು.ಅಲ್ಲಿ ಗಲೀಜು ಮಾಡುವುದು ಬೆಳಕಿಗೆ ಬಂದಿದೆ.ಹಾಗಾಗಿ ಇದನ್ನೆಲ್ಲ ತಡೆಗಟ್ಟಲು ಅನುಮಾನ ಇದ್ದವರನ್ನು ಅಲ್ಲಿಂದ ತೆರಳಲು ಹೇಳುತ್ತೇವೆ ಹೊರತು ಯಾರಿಗೂ ಹಲ್ಲೆ ನಡೆದಿಲ್ಲ ಎಂದು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಪ್ರತಿಕ್ರಿಯಿಸಿದ್ದಾರೆ.