ಪುತ್ತೂರು: ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿಯ ನೇತೃತ್ವದಲ್ಲಿ ಪುತ್ತೂರು ತಾಲೂಕನ್ನು ಕೇಂದ್ರವಾಗಿರಸಿಕೊಂಡು ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂಣೇಶ್ವರಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಶ್ರೀ ಗಣಪತಿ, ಶಾರದೆ, ನವದುರ್ಗೆಯರ ಸಹಿತ ಪುತ್ತೂರು ದಸರಾ ಮಹೋತ್ಸವವು ಸೆ.22ರಿಂದ ಅ.4 ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ.

ಪುತ್ತೂರು ದಸರಾ ಮಹೋತ್ಸವ ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ 23ನೇ ವರ್ಷದ ಪುತ್ತೂರು ದಸರಾ ಮಹೋತ್ಸವ ವೈಭವದಿಂದ ನಡೆಯಲಿದೆ. ಸೆ.22ಕ್ಕೆ ಗಣಪತಿ ಮತ್ತು ನವದುರ್ಗೆಯರ ಪ್ರತಿಷ್ಠೆ ನಡೆಯಲಿದೆ. ಸೆ.28ಕ್ಕೆ ರಾತ್ರಿ ಸಾಮೂಹಿಕ ಆಯುಧಪೂಜೆ, ಸೆ.೨೯ಕ್ಕೆ ಶಾರದಾ ಪ್ರತಿಷ್ಠೆ, ಅ.೪ಕ್ಕೆ ಸಾಮೂಹಿಕ ಚಂಡಿಕಾಹವನ, ಸಂಜೆ ಪುತ್ತೂರು ದಸರಾ ಶೋಭಾಯಾತ್ರೆ ನಡೆಯಲಿದೆ. ಶೋಭಯಾತ್ರೆಯು ಬೊಳುವಾರಿನಿಂದ ಸಂಪ್ಯ ತನಕ ನಡೆಯಲಿದೆ ಎಂದು ಅವರು ಹೇಳಿದರು.
ಪುತ್ತೂರು ದಸರಾ ಮಹೋತ್ಸವ ಉದ್ಘಾಟನೆ:
ಸೆ.22ರಂದು ನವದುರ್ಗೆರಯ ಪ್ರತಿಷ್ಠೆಯಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮವನ್ನು ಆರ್ಯಾಪು ಗ್ರಾ.ಪಂ ಅರ್ಧಯಕ್ಷೆ ಗೀತಾ ಎಂ ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಉಪಸ್ಥಿತಿಯಲ್ಲಿರುತ್ತಾರೆ. ಅದೇ ದಿನ ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ದಸರಾ ಸಮಿತಿಯ ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದ್ವಾರಕಾ ಕನ್ಸ್ಟ್ರಕ್ಷನ್ನ ಗೋಪಾಲಕೃಷ್ಣ ಭಟ್, ಚಲನಚಿತ್ರ ನಟ ಶೋಧನ್ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಸಾಮಾಜಿಕ ಮುಂದಾಳು ಸಾಜ ರಾಧಾಕೃಷ್ಣ ಆಳ್ವ, ಧಾರ್ಮಿಕ ಮುಂದಾಳು ಬೂಡಿಯಾರು ರಾಧಾಕೃಷ್ಣ ರೈ, ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಜಂಬೂರಾಜ್ ಮಹಾಜನ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಪ್ರತಿ ದಿನ ಬೆಳಿಗ್ಗೆ ವಿವಿಧ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಧಾರ್ಮಿಕ ಸಭೆ ನಡೆಯಲಿದೆ. ಅ.೪ರಂದು ವೈಭವ ಶೋಭಾಯಾತ್ರೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಲಿದ್ದಾರೆ ಎಂದು ಕೆ ಪ್ರೀತಂ ಪುತ್ತೂರಾಯ ಹೇಳಿದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ:
ಸೆ.23ರಂದು ಸಂಜೆ ಮೊಟ್ಟೆತ್ತಡ್ಕ ನಾಟ್ಯರಂಜಿನಿ ಕಲಾಲಯದಿಂದ ಭರತನಾಟ್ಯ, ಸೆ.24ಕ್ಕೆ ಗಾನಿಸಿರಿ ಕಲಾಕೇಂದ್ರದಿಂದ ಸುಮಧುರ ಸಂಗೀತ ಲಹರಿ, ಸೆ.25ಕ್ಕೆ ಗಾನ ಸರಸ್ವತಿ ಕಲಾಕೇಂದ್ರದಿಂದ ಶಾಸ್ತ್ರೀಯ ಸಂಗೀತ, ಸೆ.26ಕ್ಕೆ ಸಂಜೆ ಅಕ್ಷಯ ಕಾಲೇಜ್ ವಿದ್ಯಾರ್ಥಿಗಳಿಂದ ಅಕ್ಷಯ ಕಲಾ ವೈಭವ ಸಾಂಸ್ಕ್ರತಿಕ ಕಾರ್ಯಕ್ರ, ಸೆ.27ಕ್ಕೆ ಸಾಧನಾ ಸಂಗೀತ ಕಲಾ ವಿದ್ಯಾಲಯದಿಂದ ಶಾಸ್ತ್ರೀಯ ಸಂಗೀತ, ಸೆ.28ಕ್ಕೆ ಕಲಾಸೃಷ್ಟಿ ತಂಡದಿಂದ ಮಾಯಾ ಮ್ಯಾಜಿಕ್ ಮತ್ತು ವೈವಿಧ್ಯಮಯ ಕಾರ್ಯಕ್ರಮ, ಸೆ.29ಕ್ಕೆ ವಿಶ್ವಕಲಾನಿಕೇತನ ಇನ್ಸ್ಟೀಟ್ಯೂಟ್ ಆರ್ಟ್ಸ್ ಆಂಡ್ ಕಲ್ಚರಲ್ ವತಿಯಿಂದ ನೃತ್ಯ ವೈಭವ ಕಾರ್ಯಕ್ರಮ, ಸೆ.30ಕ್ಕೆ ನೃತ್ಯ ನಿನಾದ ಕಡಬದಿಂದ ನೃತ್ಯಾರ್ಪಣ, ಅ.1ಕ್ಕೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ನೃತ್ಯಾರ್ಪಣ, ಅ.2ರಂದು ಕುಂಬ್ರ ಶ್ರೀ ಶಾರದಾ ಭರತನಾಟ್ಯ ಕಲಾಶಾಲೆಯಿಂದ ಶಂಭೋ ಶಂಕರ ಭಕ್ತಿಗೀತೆ ಮತ್ತು ಭಾವಗೀತೆ, ಅ.3ಕ್ಕೆ ಸಂಜೆ ಊರ ಕಲಾವಿದರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮದ ನಡುವೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕಾಯಾಧ್ಯಕ್ಷ ಟಿ.ರಂಗನಾಥ ರಾವ್ ಬೊಳುವಾರು, ಸಹ ಸಂಚಾಲಕರಾದ ರಾಜೇಶ್ ಬನ್ನೂರು, ಜಯಂತ ಶೆಟ್ಟಿ ಕಂಬಳತ್ತಡ್ಡ ಉಪಸ್ಥಿತರಿದ್ದರು.