ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುತ್ತೂರು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ 5 ವಿವಿಧ ಕಡೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಪುತ್ತೂರು ಶಾಸಕ ಅಶೋಕ್ ರೈ ಅವರ ಮನವಿಯ ಮೇರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಒಟ್ಟು 5.70 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ.
ಸದ್ಯ ಮಂಜೂರುಗೊಂಡಿರುವ ಕಿಂಡಿ ಅಣೆಕಟ್ಟು ಅತ್ಯಂತ ಬೇಡಿಕೆಯದ್ದಾಗಿತ್ತು. ಹಲವು ವರ್ಷಗಳಿಂದ ಈ ಭಾಗದ ಜನರು ಕಿಂಡಿಅಣೆಕಟ್ಟು ನಿರ್ಮಾಣಕ್ಕೆ ಹೋರಾಟವನ್ನು ನಡೆಸಿದ್ದರು. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಅಣೆಕಟ್ಟು ಮಂಜೂರುಗೊಳಿಸುವ ಬಗ್ಗೆ ಅಶೋಕ್ ರೈ ಅವರು ವಾಗ್ದಾನ ಮಾಡಿದ್ದರು.
ಎಲ್ಲಿ ನಿರ್ಮಾಣವಾಗಲಿದೆ?
ಕೊಳ್ತಿಗೆ ಗ್ರಾಮದ ಪಾಲ್ತಾಡಿಗೆ ರೂ 90 ಲಕ್ಷ, ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಗುತ್ತು ಕಾಲನಿ 70 ಲಕ್ಷ, ಬಂಟ್ವಾಳ ತಾಲೂಕು ಪುಣಚ ಗ್ರಾಮದ ದೇವರ ಗುಂಡಿ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣ 130 ಲಕ್ಷ, ಕೆಯ್ಯೂರು ಗ್ರಾಮದ ದೇರ್ಲದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ರೂ 125 ಲಕ್ಷ ಹಾಗೂ ಬಂಟ್ವಾಳ ತಾಲೂಕು ವಿಟ್ಲ ಗ್ರಾಮದ ನೆಕ್ಕಿಕಾರ್ ನಲ್ಲಿ ಕಿಂಡಿಅಣೆಕಟ್ಟು ನಿರ್ಮಾಣಕ್ಕೆ 150 ಲಕ್ಷ ರೂ ಅನುದಾನ ಮಂಜೂರಾಗಿರುತ್ತದೆ.
ಸಣ್ಣ ನೀರಾವರಿ ಇಲಾಖೆಯಿಂದ ತನ್ನ ಕ್ಷೇತ್ರ ವ್ಯಾಪ್ತಿಯ 5 ಕಿಂಡಿ ಅಣೆಕಟ್ಟಿಗೆ 5.70 ಕೋಟಿ ರೂ ಅನುದಾನ ಮಂಜೂರಾಗಿದೆ. ಅಗತ್ಯವಾಗಿ ಈ ಐದು ಕಡೆಗಳಲ್ಲಿ ಅಣೆಕಟ್ಟು ನಿರ್ಮಾಣವಾಗಬೇಕೆಂಬ ಬೇಡಿಕೆ ಇತ್ತು. ಜನರ ಬೇಡಿಕೆಯನ್ನು ಈಡೇರಿಸಿದ್ದೇನೆ. ಇನ್ನೂ ಹಲವು ಬೇಡಿಕೆಗಳಿದ್ದು ಅದನ್ನೂ ಮಾನ್ಯ ಮಾಡಲಾಗುವುದು. ಬೇಡಿಕೆಯನ್ನು ಮನ್ನಿಸಿದ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
ಅಶೋಕ್ ರೈ, ಶಾಸಕರು ಪುತ್ತೂರು