ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸೆ.22ರಿಂದ ಅ.2ರ ವಿಜಯದಶಮಿಯವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆ.
ಕಾರ್ಯಕ್ರಮಗಳು:
ಸೆ.22ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಕುಸುಮ ಎಂ.ರೈ ಕೆದಿಕಂಡೆಗುತ್ತು ಉದ್ಘಾಟಿಸಲಿದ್ದಾರೆ. ನಂತರ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ. ರಾತ್ರಿ ಶ್ರೀ ದೇವಿಗೆ ವಿಶೇಷ ರಂಗ ಪೂಜೆ ನಡೆಯಲಿದೆ. ಸೆ.23ರಂದು ಬೆಳಿಗ್ಗೆ ಭಜನಾ ಸೇವೆ, ಸಂಜೆ ಹೂ ಹಾರ ಕಟ್ಟುವ ಸ್ಪರ್ಧೆ, ರಾತ್ರಿ ಭಜನಾ ಸೇವೆ, ಶ್ರೀ ದೇವಿಗೆ ಅಲಂಕಾರ ಪೂಜೆ, ಬಳಿಕ ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಸುಮ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಮಹಿಳಾ ಸಭಾ ಕಾರ್ಯಕ್ರಮ-ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ನಳಿನಿ ಪಿ. ಶೆಟ್ಟಿ ಬಿಜಂದಾಡಿಗುತ್ತು ಅವರಿಗೆ ಸನ್ಮಾನ, ಸಭೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಮುರಳಿ ಬ್ರದರ್ಸ್ ತಂಡ ಪುತ್ತೂರು ಇವರಿಂದ ಡ್ಯಾನ್ಸ್ ಝಲಕ್ ಕಾರ್ಯಕ್ರಮ ನಡೆಯಲಿದೆ.
ಸೆ.24ರಂದು ಬೆಳಿಗ್ಗೆ ಮತ್ತು ಸಂಜೆ ಭಜನಾ ಸೇವೆ, ಸಂಜೆ ಕೋಡಿಂಬಾಡಿ, ಬೆಳ್ಳಿಪ್ಪಾಡಿ ಮತ್ತು ಶಾಂತಿನಗರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ರಾತ್ರಿ ಶ್ರೀ ದೇವಿಗೆ ವಿಶೇಷ ರಂಗ ಪೂಜೆ, ಬಳಿಕ ಸಾಂಸ್ಕೃತಿಕ ವೈವಿಧ್ಯ ಮುಂದುವರಿಯಲಿದೆ. ಸೆ.25ರಂದು ಬೆಳಿಗ್ಗೆ ಗಣಪತಿ ಹೋಮ, ಭಜನಾ ಸೇವೆ, ರಾತ್ರಿ ಸ್ಥಳೀಯ ಪ್ರತಿಭೆಗಳಿಂದ ವೈವಿಧ್ಯಮಯ ಕಾರ್ಯಕ್ರಮ, ಶ್ರೀ ದೇವಿಗೆ ವಿಶೇಷ ರಂಗಪೂಜೆ, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಂ. ಜಯಪ್ರಕಾಶ್ ಅವರಿಂದ ವಿಶೇಷ ಉಪನ್ಯಾಸ ‘ಭಾರತ ದರ್ಶನ’ ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ.
ಸೆ.26ರಂದು ಬೆಳಿಗ್ಗೆ ಚಂಡಿಕಾಯಾಗ, ಭಜನಾ ಸೇವೆ, ರಾತ್ರಿ ಶ್ರೀ ದೇವಿಗೆ ವಿಶೇಷ ರಂಗ ಪೂಜೆ, ಸಾಯಿಕಲಾ ಯಕ್ಷಬಳಗ ಡಾ.ಶಿವರಾಮ ಕಾರಂತ ಬಾಲವನ ಪುತ್ತೂರು ಇವರಿಂದ ಕದಂಬ ಕೌಶಿಕೆ, ಸೆ.27ರಂದು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಭಜನಾ ಸೇವೆ, ರಾತ್ರಿ ಶ್ರೀ ದೇವಿಗೆ ರಂಗಪೂಜೆ, ಪೊರ್ಲು ಕಲಾವಿದರು ಮಠಂತಬೆಟ್ಟು ಕೋಡಿಂಬಾಡಿ ಇವರಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಮಚ್ಚಿಮಲೆ ವಿರಚಿತ ಬರೆವೊಡಾತೆ-ಬರೆನಗ ಪೊರ್ತಾವು ಹಾಸ್ಯಮಯ ನಾಟಕ ಶಿವಪ್ರಸಾದ್ ರೈ ಮಠಂತಬೆಟ್ಟು ಸಂಯೋಜನೆಯಲ್ಲಿ ನಡೆಯಲಿದೆ.
ಸೆ.28ರಂದು ಭಜನಾ ಸೇವೆ, ರಾತ್ರಿ ಶ್ರೀ ದೇವಿಗೆ ಅಲಂಕಾರ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶಾರದಾ ಕಲಾಕೇಂದ್ರ ಟ್ರಸ್ಟ್ ಪುತ್ತೂರು ಇದರ ಸುದರ್ಶನ್ ಎಂ.ಎಲ್.ಭಟ್ ಅವರ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯಾಭಿವಂದನೆ ಹಾಗೂ ಶ್ರೀನಿವಾಸ ಕಲ್ಯಾಣ ನೃತ್ಯರೂಪಕ ನಡೆಯಲಿದೆ. ಸೆ.29ರಂದು ಭಜನಾ ಸೇವೆ, ರಾತ್ರಿ ಶ್ರೀದೇವಿಗೆ ವಿಶೇಷ ರಂಗಪೂಜೆ, ಸೆ.30ರಂದು ಭಜನಾ ಸೇವೆ, ರಾತ್ರಿ ಶ್ರೀದೇವಿಗೆ ಹೂವಿನ ಪೂಜೆ, ಶ್ಯಾಂ ಜಾದೂಗಾರ್ ಬಳಗದಿಂದ ಮಾಯಾಲೋಕ ಜಾದೂ ಮತ್ತು ವೈವಿಧ್ಯಮಯ ಕಾರ್ಯಕ್ರಮ, ಅ.1ರಂದು ಭಜನಾ ಸೇವೆ, ರಾತ್ರಿ ಶ್ರೀದೇವಿಗೆ ಅಲಂಕಾರ ಪೂಜೆ, ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ-ಶ್ರೀ ದೇವಿಗೆ ಸ್ವರ್ಣ ಕವಚದ ವಿಜ್ಞಾಪನಾ ಪತ್ರ ಬಿಡುಗಡೆ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಮತ್ತು ಧಾರ್ಮಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಸಾಧನೆಗಾಗಿ ಸದಾಶಿವ ರೈ ಮಠಂತಬೆಟ್ಟು ತರವಾಡು ಮನೆ ಅವರಿಗೆ ಸನ್ಮಾನ ನಡೆಯಲಿದೆ.
2024-25 ವರ್ಷದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇ.90 ಮತ್ತು ಮೇಲ್ಪಟ್ಟು ಅಂಕ ಗಳಿಸಿದ ಗ್ರಾಮದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದ್ದು ಸಭೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಮ್ಮ ಕಲಾವಿದೆರ್ ಕುಡ್ಲ ಅಭಿನಯದ, ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ ತುಳುನಾಡ ಕಲಾ ಸಿಂಧೂರ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ ತುಳುನಾಡ ಕಲಾ ಬಿರ್ಸೆ ದೀಪಕ್ ರೈ ಪಾಣಾಜೆ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಪಿಂಕಿರಾಣಿ ಅಭಿನಯದಲ್ಲಿ ರಂಗ್ ದ ರಾಜೆ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ಆನ್ಮಗೆ ತುಳು ನಾಟಕ ನಡೆಯಲಿದೆ.
ಅ.2ರಂದು ಬೆಳಿಗ್ಗೆ ಭಜನಾ ಸೇವೆ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಶ್ರೀ ದೇವಿಗೆ ಮಹಾ ಅಲಂಕಾರ, ತ್ರಿಮಧುರ ನೈವೇದ್ಯ, ಕ್ಷೀರ ಪಾಯಸ ಸೇವೆ, ಲಲಿತಾ ಸಹಸ್ರನಾಮ ಪಾರಾಯಣ, ಅಕ್ಷರಾಭ್ಯಾಸ, ತುಲಾಭಾರ ಸೇವೆ, ಆಯುಧ ಪೂಜೆ, ತೆನೆ ತುಂಬಿಸುವುದು, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದೇವಿಗೆ ಮಹಾಪೂಜೆ, ಮಧ್ಯಾಹ್ನ ಹೊಸ ಅಕ್ಕಿ ಊಟ ಸಾಮೂಹಿಕ ಪುದ್ವಾರ್, ಸಂಜೆ ಭಜನಾ ಸೇವೆ, ಶ್ರೀ ದುರ್ಗಾಪೂಜೆ, ಹರಕೆ ಬಂದ ಸೀರೆಗಳ ಏಲಂ ನಂತರ ದೀಪೋತ್ಸವ, ಶ್ರೀ ದೇವಿಗೆ ವಿಶೇಷ ಪೂಜೆ, ಶ್ರಮ ವಹಿಸಿ ಯಶಸ್ವಿಗೊಳಿಸಿದ ಸ್ವಯಂಸೇವಕರಿಗೆ ಮತ್ತು ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸುಸ್ವರ ಮೆಲೋಡೀಸ್ ಉಪ್ಪಿನಂಗಡಿ ಇವರಿಂದ ಬಿ.ರಂಗಯ್ಯ ಬಲ್ಲಾಳ್ ಸಾರಥ್ಯದಲ್ಲಿ, ವೈಶಾಲಿ ಎಂ.ಕುಂದರ್ ನಿರ್ದೇಶನದಲ್ಲಿ ಭಕ್ತಿ ಗಾನ ಸಂಗಮ ನಡೆಯಲಿದೆ.
ಪ್ರತೀ ದಿನ ಮಹಾಅನ್ನದಾನ ಸೇವೆ ನಡೆಯಲಿದೆ ಎಂದು ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈ ಕೆ.ಯಸ್., ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಂ.ನಿರಂಜನ ರೈ ಮಠಂತಬೆಟ್ಟು, ಪ್ರಧಾನ ಅರ್ಚಕ ರಾಮಕೃಷ್ಣ ಭಟ್, ಜೀರ್ಣೋದ್ಧಾರ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಉತ್ಸವ ಸಮಿತಿ ಸದಸ್ಯರು, ಧರ್ಮಶ್ರೀ ಧರ್ಮ ದೈವ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮದ ಹತ್ತು ಸಮಸ್ತರು ತಿಳಿಸಿದ್ದಾರೆ.