ಲೆವೆಲ್ ಕ್ರಾಸಿಂಗ್ ಸಮಸ್ಯೆಗೆ ಕೆಲವೇ ಸಮಯದಲ್ಲಿ ಮುಕ್ತಿ
ವರದಿ: ಉಮಾಪ್ರಸಾದ್ ರೈ ನಡುಬೈಲು
ಪುತ್ತೂರು: ಪರ್ಪುಂಜ-ಪುರುಷರಕಟ್ಟೆ-ಪಂಜಳ-ರಸ್ತೆಯಲ್ಲಿ, ಸಾಂದೀಪನಿ ಶಾಲಾ ಬಳಿ ರೈಲ್ವೇ ಗೇಟು ದಾಟುವ ಸಮಸ್ಯೆಗೆ ಮುಕ್ತಿ ದೊರೆಯುವ ಕಾಲ ಹತ್ತಿರವಾಗಿದೆ. ಇಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅತೀ ಶ್ರೀಘ್ರದಲ್ಲಿ ಇದರ ಲೋಕರ್ಪಣೆಯಾಗಲಿದೆ.

ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಸಂದರ್ಭದಲ್ಲಿ ರಸ್ತೆ ಸಂಚಾರ ಮೊಟಕುಗೊಳಿಸುವ ವೇಳೆ ಪರ್ಯಾಯ ರಸ್ತೆಯಾಗಿ ಬಳಕೆಯಲ್ಲಿರುವ ಈ ರಸ್ತೆಯಲ್ಲಿ ಗೇಟು ದಾಟುವುದು ಬಹುದೊಡ್ಡ ಸವಾಲಾಗಿತ್ತು. ಮಂಗಳೂರು- ಬೆಂಗಳೂರು ರೈಲು ಹಳಿಯಲ್ಲಿನ ಪುತ್ತೂರಿನಿಂದ ನೆಟ್ಟಣ ತನಕ ಅನೇಕ ಕಡೆಗಳಲ್ಲಿ ರೈಲ್ವೇ ಗೇಟುಗಳಿದ್ದು, ಆ ಪೈಕಿ ನರಿಮೊಗರು ಸಾಂದೀಪನಿ ಶಾಲೆ ಹತ್ತಿರದ ಮಾನವ ಆಧಾರಿತ ಗೇಟು ಪದೇ ಪದೇ ಸಂಚಾರಕ್ಕೆ ತಡೆ ಒಡ್ಡಿ ಸಮಸ್ಯೆ ಉಂಟು ಮಾಡುತಿತ್ತು.
ಎರಡೇ ತಿಂಗಳಲ್ಲಿ ಉದ್ಘಾಟನೆ
ಸರಿ ಸುಮಾರು 40 ವರ್ಷಗಳಿಂದ ಈ ಭಾಗದ ಜನ ಅನುಭವಿಸುತ್ತಿರುವ ಸಮಸ್ಯೆ ಇದಾಗಿದ್ದು, ಗೇಟು ಇರುವ ಸ್ಥಳದಿಂದ ತುಸು ದೂರದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಇಕ್ಕೆಲಗಳ ಸಂಪರ್ಕ ರಸ್ತೆ ಕಾಮಗಾರಿ ನಡೆಯುತ್ತಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಲೋಕರ್ಪಣೆಯಾಗಲಿದೆ.
ಸಂಪರ್ಕ ರಸ್ತೆ
ರೈಲ್ವೇ ಮೇಲ್ಸೇತುವೆ ನಿರ್ಮಾಣದಿಂದ ಪ್ರತಿದಿನ ರೈಲ್ವೇ ಗೇಟ್ ಎದುರು ಸ್ಕೂಲ್ ಬಸ್‌ಗಳು, ಇತರ ವಾಹನಗಳು ಹತ್ತಾರು ಬಾರಿ ಕಾಯುವ ಸ್ಥಿತಿ ತಪ್ಪಲಿದೆ. ರೈಲ್ವೇ ಹಳಿಯ ಸನಿಹ ಇರುವ ಸಾಂದೀಪನಿ ಶಾಲೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಸ್ಕೂಲ್ ಬಸ್, ರಿಕ್ಷಾ, ಜೀಪು, ಕಾರು, ಬೈಕ್ ಸ್ಕೂಟಿ ಮುಂತಾದ ವಾಹನಗಳಲ್ಲಿ ಬಂದು ಹೋಗುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಅನೇಕ ಬಾರಿ ರೈಲು ಲೆವೆಲ್ ಕ್ರಾಸಿಂಗ್‌ಗಾಗಿ ಗೇಟ್ ಹಾಕುವ ಕಾರಣ ವಿದ್ಯಾರ್ಥಿಗಳು ಸಾಕಷ್ಟು ಸಮಯ ಕಾಯಬೇಕಾಗುತ್ತಿದೆ. ಈ ಎಲ್ಲ ಸಮಸ್ಯೆಗೆ ಶ್ರೀಘ್ರ ಮುಕ್ತಿ ಸಿಗಲಿದೆ. ಪ್ರಸ್ತುತ ಇರುವ ಲೆವೆಲ್ ಕ್ರಾಸಿಂಗ್ ಪಕ್ಕದಲ್ಲಿಯೇ ಮೇಲ್ಸುತುವೆ ನಿರ್ಮಿಸಲಾಗಿದೆ. ಮುಂದೆ ಇಲ್ಲಿ ಲೆವೆಲ್ ಕ್ರಾಸಿಂಗ್ ಇಲ್ಲವಾಗಲಿದೆ.
ಪ್ರತಿದಿನ 16 ಬಾರಿ ರೈಲು ಸಂಚಾರ
ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಹೊಂದಿರುವ ಈ ರೈಲು ಮಾರ್ಗದಲ್ಲಿ ದಿನವೊಂದಕ್ಕೆ 16 ಬಾರಿ ರೈಲು ಸಂಚಾರಿಸುತ್ತವೆ(ರಿಟರ್ನ್ ಸೇರಿ) ನರಿಮೊಗರು ಗೇಟು ಬಳಿ ಸದಾ ವಾಹನ ದಟ್ಟಣೆ ಇದೆ. ರೈಲು ಬರುವ ಸೂಚನೆ ಕಂಡು ಬಂದರೆ ಹತ್ತರಿಂದ ಹನ್ನೆರಡು ನಿಮಿಷ ಗೇಟನ್ನು ಹಾಕುತ್ತಾರೆ. ಇದರಿಂದ ವಾಹನ ಸವಾರರರಿಗೆ ತೊಂದರೆಯಾಗಿದೆ. ಇನ್ನೂ ಎರಡು ತಿಂಗಳ ಒಳಗೆ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರಕಲಿದೆ.