ಉಪ್ಪಿನಂಗಡಿ: ಶತಮಾನಗಳ ಇತಿಹಾಸವನ್ನು ಹೊಂದಿದ್ದ ಉಪ್ಪಿನಂಗಡಿಯ ಕದಿಕ್ಕಾರು ಚಂದ್ರನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಕೆಲಸ ಕಾರ್ಯಗಳು ಪೂರ್ಣಗೊಂಡ ಬಳಿಕ ಪ್ರತಿಷ್ಠಾ ಕಾರ್ಯಕ್ಕೆ ಚಾಲನೆ ದೊರೆಯಲಿದೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಕಾರಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆಗೆ ಒಳಗಾಗಿತ್ತು. ಆಗ ಇಲ್ಲಿನ ಬಸದಿಯಲ್ಲಿದ್ದ ಚಂದ್ರನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಮೂರ್ತಿಯನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದವು ಹಾಗೂ ಸನಿಹದಲ್ಲೇ ಬಸದಿಯನ್ನು ಪುನರ್ ನಿರ್ಮಿಸಲು ಸಂಕಲ್ಪಿಸಿ ಬಸದಿಯ ನಿರ್ಮಾಣ ಕಾರ್ಯಕ್ಕೆ ಕೈ ಹಾಕಲಾಯಿತು. ಕಗ್ಗಲ್ಲಿನ ಪಂಚಾಂಗದಲ್ಲಿ ಕೆಂಪು ಮುರಕಲ್ಲಿನ ಗೋಡೆಯಿಂದ ನಿರ್ಮಾಣಗೊಂಡ ಬಸದಿಯ ಎಲ್ಲಾ ಪ್ರವೇಶ ದ್ವಾರಗಳು ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಸುತ್ತು ಶಿಲಾಮಯ ಸ್ತಂಭಗಳನ್ನು ಅಳವಡಿಸಿ ಬಸದಿಯ ಪ್ರಧಾನ ಗುಡಿಯನ್ನು ನಿರ್ಮಿಸಲಾಗಿದ್ದು, ಆ ಬಳಿಕ ಸುತ್ತು ಪೌಳಿಯ ಕಾರ್ಯ ನಡೆಯಬೇಕಾಗಿದೆ. ಈ ಹಿಂದಿನ ಬಸದಿಯು ಶಿಲಾಮಯ ಬಸದಿಯಾಗಿದ್ದು, ಪ್ರಸಕ್ತ ನೂತನವಾಗಿ ನಿರ್ಮಾಣವಾಗುತ್ತಿರುವ ಬಸದಿಯ ಮೇಲ್ಛಾವಣಿಯು ಮರದಿಂದ ನಿರ್ಮಾಣವಾಗುತ್ತಿದೆ. ಮೇಲ್ ಹೊದಿಕೆಯಾಗಿ ಎರಡು ಸ್ತರದಲ್ಲಿ ಹಂಚು ಅಳವಡಿಸಲಾಗುತ್ತಿದ್ದು, ಪಾರಂಪರಿಕ ಶೈಲಿಯಲ್ಲಿ ಇಲ್ಲಿ ಬಸದಿಯನ್ನು ನಿರ್ಮಿಸಲಾಗುತ್ತಿದೆ.

ಒಂದುವರೆ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ:
ಬಸದಿ ಪುನರ್ ನಿರ್ಮಾಣ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಿರುವ ಉದ್ಯಮಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಅವರು ಮಾತನಾಡಿ, ಉಪ್ಪಿನಂಗಡಿ , ನೆಕ್ಕಿಲಾಡಿ ಗ್ರಾಮ ವ್ಯಾಪ್ತಿಯಲ್ಲಿನ ಈ ಬಸದಿಗೆ ಹತ್ತಕ್ಕೂ ಕಡಿಮೆ ಸಂಖ್ಯೆಯಲ್ಲಿ ಜೈನ ಕುಟುಂಬಗಳಿದ್ದು, ಭಕ್ತ ಸಮೂಹದ ಸಹಕಾರ ಪಡೆದು ಬಸದಿ ಪುನರ್ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಈ ಹಿಂದಿನ ಶಾಸಕ ಸಂಜೀವ ಮಟಂದೂರು ಒದಗಿಸಿದ 50 ಲಕ್ಷ ರೂ. ಅನುದಾನದಲ್ಲಿ ತಡೆಗೋಡೆಯ ನಿರ್ಮಾಣ ಕಾರ್ಯ ನಡೆದಿದ್ದು, ಪ್ರಸಕ್ತ ಸರಕಾರದಿಂದ ೫೦ ಲಕ್ಷ ರೂ. ಅನುದಾನವನ್ನು ನಿರೀಕ್ಷಿಸಲಾಗಿದೆ. ಬಸದಿಯ ನಿರ್ಮಾಣ ಕಾರ್ಯ ಒಂದಷ್ಟು ಮಂದಗತಿಯಿಂದ ನಡೆದಿದ್ದರೂ, ಉತ್ತಮ ಶೈಲಿಯಲ್ಲಿ ಆಕರ್ಷಕವಾಗಿ ನಿರ್ಮಾಣವಾಗುತ್ತಿದೆ. ಆಡಳಿತ ಸಮಿತಿ ಸದಸ್ಯರು ಮುಂದಿನ ದಿನಗಳಲ್ಲಿ ಸಭೆ ಸೇರಿ ಬಸದಿಯ ಲೋಕಾರ್ಪಣೆ ಕಾರ್ಯದ ಬಗ್ಗೆ ನಿರ್ಣಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಅತ್ಯಾಕರ್ಷಕ ಬಸದಿ ಉಪ್ಪಿನಂಗಡಿಗೆ ಕಳಶಪ್ರಾಯವಾಗಲಿದೆ:
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಯುವ ಉದ್ಯಮಿ ವಿದ್ಯಾಧರ ಜೈನ್ ಈ ಬಗ್ಗೆ ಪ್ರತಿಕ್ರಿಯಿಸಿ, ನಾವು ಬಯಸಿದಷ್ಟು ವೇಗದಲ್ಲಿ ಬಸದಿಯ ಪುನರ್ ನಿರ್ಮಾಣ ಕಾರ್ಯ ನಡೆಯದಿದ್ದರೂ, ಅತ್ಯಾಕರ್ಷಕ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಾ ಪ್ರಸಕ್ತ ಒಂದಷ್ಟು ವೇಗವನ್ನು ಪಡೆದುಕೊಳ್ಳುತ್ತಿದೆ. ಹೆದ್ದಾರಿ ವಿಸ್ತರಣೆ, ಮೇಲ್‌ಸೇತುವೆಗಳ ನಿರ್ಮಾಣದಿಂದ ಬದಲಾದ ಉಪ್ಪಿನಂಗಡಿಯ ಸ್ವರೂಪಕ್ಕೆ ಇದೀಗ ಪುನರ್ ನಿರ್ಮಾಣಗೊಳ್ಳುತ್ತಿರುವ ಬಸದಿಯು ಕಲಶಪ್ರಾಯವಾಗಿ ಮೂಡಿಬರಲಿದೆ. ಈ ಮೂಲಕ ಹಿಂದೂ, ಜೈನ, ಕ್ರೈಸ್ತ, ಮುಸ್ಲಿಂ ಮತಪಂಥಗಳ ಧಾರ್ಮಿಕ ಕೇಂದ್ರಗಳೆಲ್ಲವೂ ಹೊಸತನವನ್ನು ಪಡೆಯುವಂತಾಗಿದೆ ಎಂದರು.