ಉಪ್ಪಿನಂಗಡಿ: ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ಎಲ್ಲಾ ವ್ಯವಹಾರಗಳಿಂದ 64,52,917.23 ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.20 ಡಿವಿಡೆಂಡ್‌ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಸ್. ತೋಯಜಾಕ್ಷ ಶೆಟ್ಟಿ ತಿಳಿಸಿದರು.

ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ವರ್ಷಾಂತ್ಯಕ್ಕೆ 1,49,74,040.00 ರೂ. ಪಾಲು ಬಂಡವಾಳವಿದ್ದು, ಶೇ.1.04 ವೃದ್ಧಿಯಾಗಿದೆ. ವರ್ಷಾಂತ್ಯಕ್ಕೆ 1882 ಎ ಹಾಗೂ 3599 ಸಿ ದರ್ಜೆಯ ಸದಸ್ಯರಿದ್ದಾರೆ. ಠೇವಣಿಯು ಶೇ.10.48 ಶೇ. ಜಾಸ್ತಿಯಾಗಿದೆ. ಸಂಘದಿAದ ಸದಸ್ಯರಿಗೆ ನೀಡಿದ ಸಾಲದಲ್ಲಿ ವಾಯಿದೆ ದಾಟಿದ ಸಾಲ ಬಾಕಿ ಇರುವುದಿಲ್ಲ. ಶೇ.100 ವಸೂಲಾತಿಯಾಗಿದೆ. ಸಂಘವು ಸತತ 19 ವರ್ಷಗಳಿಂದ ಶೇ. 100 ವಸೂಲಾತಿ ಮಾಡಿದ್ದು, ಲೆಕ್ಕ ಪರಿಶೋಧನಾ ವರ್ಗೀಕರಣದಲ್ಲಿ ಎ ತರಗತಿ ಸ್ಥಾನವನ್ನು ಪಡೆದಿದೆ. ಸಂಘದ ಪ್ರಗತಿಗೆ ಸಂಘದ ಸದಸ್ಯರು, ಠೇವಣಿದಾರರು, ಗ್ರಾಹಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಕಾರಣವಾಗಿದ್ದು, ಇವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಎಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 17 ವಿದ್ಯಾರ್ಥಿಗಳಿಗೆ ಈ ಸಂದರ್ಭ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 14 ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿದೇಶಕರಾದ ನೀಲಪ್ಪ ಗೌಡ, ಲಕ್ಷ್ಮಣ ನಾಯ್ಕ, ಜಯಲಕ್ಷ್ಮೀ, ರೇವತಿ ಪಿ., ಸುನೀಲ್ ನೆಲ್ಸನ್ ಪಿಂಟೋ, ವಿಶ್ವನಾಥ ಶೆಟ್ಟಿ, ಬಶೀರ್ ಕೆ., ಮಹಮ್ಮದ್ ಶರೀಫ್, ಚೆನ್ನಕೇಶವ ಯಾನೆ ಚೆನ್ನ ಮೇರ, ಬೇಬಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಡಿ. ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರಮುಖರಾದ ಉಮಾನಾಥ ಶೆಟ್ಟಿ ಪೆರ್ನೆ, ಅಬ್ದುಲ್ ರಝಾಕ್, ಗಿರೀಶ್ ಪೆರ್ಗಡೆ, ಅಬ್ದುಲ್ ಶಾಫಿ, ಶಿವಪ್ಪ ನಾಯ್ಕ, ನರಸಿಂಹ ನಾಯ್ಕ ಮತ್ತಿತರರು ಉಪಸ್ಥಿತರಿದ್ದು, ಸಲಹೆ- ಸೂಚನೆ ನೀಡಿದರು.
ಸಂಘದ ನಿರ್ದೇಶಕ ಡಾ. ರಾಜಗೋಪಾಲ ಶರ್ಮಾ ಸ್ವಾಗತಿಸಿದರು. ಉಪಾಧ್ಯಕ್ಷ ತನಿಯಪ್ಪ ಪೂಜಾರಿ ವಂದಿಸಿದರು.
ನಿರಂತರ ಪ್ರಗತಿ
ಪೆರ್ನೆ ಹಾಗೂ ಬಿಳಿಯೂರು ಗ್ರಾಮಗಳ ಕಾರ್ಯಕ್ಷೇತ್ರವನ್ನು ಹೊಂದಿರುವ ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘವು 2006ರಲ್ಲಿ ಸ್ಥಾಪನೆಗೊಂಡಿದ್ದು, ಅಂದಿನಿಂದ ಇಂದಿನವರೆಗೆ ಎಸ್. ತೋಯಜಾಕ್ಷ ಶೆಟ್ಟಿಯವರೇ ಇದರ ಅಧ್ಯಕ್ಷರಾಗಿದ್ದಾರೆ. ಇವರ ಅಧ್ಯಕ್ಷತೆಯಲ್ಲಿ ಸಂಘವು ವರ್ಷದಿಂದ ವರ್ಷಕ್ಕೆ ನಿರಂತರ ಪ್ರಗತಿಯನ್ನು ಸಾಧಿಸಿಕೊಂಡು ಬರುತ್ತಿದೆ.