ಅ.1ಕ್ಕೆ ಪ್ರಥಮ ಬಾರಿ ಗಾಯತ್ರಿ ಪೂಜೆ ವಿಶೇಷ
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅ.1ರ ತನಕ ನಡೆಯುವ ನವರಾತ್ರಿ ಪೂಜಾ ಕಾರ್ಯಕ್ರಮ ಸೆ.22ರಂದು ಆರಂಭಗೊಂಡಿದೆ.
61 ವಿವಿಧ ಭಜನಾ ತಂಡಗಳಿಂದ ನಿತ್ಯ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಬೆಳಿಗ್ಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ನಿತ್ಯ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಮಹಾಲಿಂಗೇಶ್ವರ ದೇವಸ್ಥಾನದ ದುರ್ಗಾ ಗುಡಿಯಲ್ಲಿ ನವರಾತ್ರಿಯ ವಿಶೇಷ ಪೂಜೆ ಪ್ರತಿ ದಿನ ನಡೆಯಲಿದೆ. ಈ ಬಾರಿ ಪ್ರಥಮ ಬಾರಿಗೆ ವಿಶೇಷವಾಗಿ ಅ.1ರಂದು ದುರ್ಗಾ ಗುಡಿಯಲ್ಲಿ ಗಾಯತ್ರಿ ಪೂಜೆಯೂ ನಡೆಯಲಿದೆ. ಜೊತೆಗೆ ಪ್ರತಿ ದಿನ ಭಕ್ತರಿಗೆ ತುಪ್ಪದ ದೀಪ ಸೇವೆಗೂ ಅವಕಾಶವಿದೆ. ಪ್ರತಿ ದಿನ ಸಂಜೆ ಗಂಟೆ 7ರ ನಂತರ ದುರ್ಗಾಗುಡಿಯಲ್ಲಿ ದುರ್ಗಾರಾಧನೆ ಸಹಿತ ಸಪ್ತಸತಿ ಪಾರಾಯಣ ಸೇವೆ ನಡೆಯಲಿದೆ.
ಸೆ.26ಕ್ಕೆ ಬೆಳಿಗ್ಗೆ ಗಂಟೆ 9ರಿಂದ ಸಾಮೂಹಿಕ ಚಂಡಿಕಾಹೋಮ ಜರುಗಲಿದೆ. ಅ.1ಕ್ಕೆ ಬೆಳಿಗ್ಗೆ ಗಂಟೆ 7 ರಿಂದ ಶ್ರೀ ದೇವಳದ ಬ್ರಹ್ಮರಥ, ಸಣ್ಣರಥ, ಚಂದ್ರಮಂಡಲ ರಥಕ್ಕೆ ಪೂಜೆ ನೆರವೇರಿದ ಬಳಿಕ ದೇವಳದ ಎದುರು ಗದ್ದೆಯಲ್ಲಿ ಸಾಮೂಹಿಕ ಆಯುಧ ಪೂಜೆ ಜರುಗಲಿದೆ. ಪ್ರತಿ ದಿನ ಬೆಳಗ್ಗೆ ಗಂಟೆ 7.30ರ ನಂತರ ಅಕ್ಷರಾಭ್ಯಾಸ ಮಾಡಿಸಲು ಅವಕಾಶವಿದೆ ಎಂದು ಅವರು ತಿಳಿಸಿದರು.
ಬೆಳಗ್ಗೆ ಭಜನಾ ಕಾರ್ಯಕ್ರಮ ಉದ್ಘಾಟನೆಯ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ, ನಳಿನಿ ಪಿ ಶೆಟ್ಟಿ, ಕೃಷ್ಣವೇಣಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಮತ್ತು ಭಜನಾ ನಿರ್ವಾಹಕ ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ನ ಸಂಚಾಲಕ ಡಾ. ಗೋಪಾಲಕೃಷ್ಣ ಯಂ ಉಪಸ್ಥಿತರಿದ್ದರು.