ಪುತ್ತೂರು ತೋಟಗಾರಿಕಾ ಇಲಾಖೆಯಿಂದ ಜೇನು ಕೃಷಿ ತರಬೇತಿ ಆಯೋಜನೆ

0

ಸಮಗ್ರ ತೋಟಗಾರಿಕಾ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ-ಅಶೋಕ್ ಕುಮಾರ್ ರೈ

ಪುತ್ತೂರು: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನ ಜಿಲ್ಲಾ, ವಲಯ ಯೋಜನೆಯ ಜೇನು ಸಾಕಾಣಿಕೆ ಕಾರ್ಯಕ್ರಮದಡಿ ಮಂಜಲ್ಪಡ್ಪುವಿನಲ್ಲಿರುವ ತಾಲೂಕು ತೋಟಗಾರಿಕೆ ಕಛೇರಿಯಲ್ಲಿ ಸೆ.23 ಹಾಗೂ 24ರಂದು ಆಯೋಜಿಸಲಾದ 2 ದಿನದ ಜೇನು ಕೃಷಿ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.


ಶಾಸಕ ಆಶೋಕ ಕುಮಾರ್ ರೈ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಮಗ್ರ ತೋಟಗಾರಿಕಾ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು, ಅಡಿಕೆ ಮಾತ್ರವಲ್ಲದೆ ಹೊಸ ಹೊಸ ಬೆಳೆಗಳನ್ನು ಬೆಳೆಯುವಲ್ಲಿ ಆಸಕ್ತಿ ವಹಿಸಬೇಕು, ಜೇನಿನ ಬಹು ಉಪಯೋಗವನ್ನು ಮಾಡಬೇಕು, ಈ ನಿಟ್ಟಿನಲ್ಲಿ ಸರಕಾರದಿಂದ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದ ಅವರು ತೋಟಗಾರಿಕಾ ಇಲಾಖೆಯ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಇಲಾಖಾಧಿಕಾರಿಗಳ ಕಾರ್ಯತತ್ಪರತೆಯನ್ನು ಶ್ಲಾಘಿಸಿದರು.


ತೋಟಗಾರಿಕೆ ಇಲಾಖೆಯ 2025-26ನೇ ಸಾಲಿನಲ್ಲಿ ಸಹಾಯಧನದಡಿ ಜೇನು ಪೆಟ್ಟಿಗೆಯನ್ನು ಸಾಂಕೇತಿಕವಾಗಿ ಫಲಾನುಭವಿ ದೇವಪ್ಪ ನಾಯ್ಕ ಬೆಟ್ಟಂಪಾಡಿರವರಿಗೆ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕಕ್ಕೆ 2.70 ಲಕ್ಷ ರೂಪಾಯಿ ಸಹಾಯಧನ ಪಡೆದ ರೀತಾ ಅಡ್ಯಂತಾಯ ಅರಿಯಡ್ಕರವರಿಗೆ ಶಾಸಕರು ಮಂಜೂರಾತಿ ಆದೇಶದ ಪ್ರತಿ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ವೀರಪ್ಪ ಗೌಡ, ರಾಧಾಕೃಷ್ಣ ಹಾಗೂ ಮನಮೋಹನರವರು ತರಬೇತಿ ನಡೆಸಿಕೊಟ್ಟರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ರೇಖಾರವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯ ಯೋಜನೆಗಳ ಮಾಹಿತಿ ನೀಡಿದರು. ತಾಂತ್ರಿಕ ಸಹಾಯಕ ಶಿವಪ್ರಕಾಶ ಕಾರ್ಯಕ್ರಮ ಸಂಯೋಜಿಸಿದರು. ತೋಟಗಾರಿಕೆ ಇಲಾಖೆಯ ಸಿಬಂದಿಗಳಾದ ಸುಧೀರ್, ಡಾ. ವಿಜೇತ್ ಹಾಗೂ ಕಛೇರಿ ಸಹಾಯಕರು ಸಹಕರಿಸಿದರು.

LEAVE A REPLY

Please enter your comment!
Please enter your name here