ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯಲಿದೆ ಯೋಜನಾ ಪ್ರಾಧಿಕಾರದ ಅದಾಲತ್

0

ಸೆ.30ಕ್ಕೆ ಶಾಸಕರ ಕಚೇರಿಯ 2ನೇ ಅಂತಸ್ತಿನಲ್ಲಿ ಅದಾಲತ್

ಪುತ್ತೂರು: ಪುತ್ತೂರು ಮತ್ತು ಕಡಬ ಗ್ರಾಮಾಂತರ ಪ್ರದೇಶದ ಗ್ರಾಮ ಪಂಚಾಯತ್‌ಗಳಲ್ಲಿ ಸಲ್ಲಿಸುವ ಏಕ ನಿವೇಶನ ಸಂಬಂಧಿಸಿ ಗೊಂದಲ ನಿವಾರಣೆ ಹಾಗು 4ಕೆ ನಿಯಮಾವಳಿಗಳು ಜಾರಿಯಾಗಿರುವ ಮೊದಲು ಪ್ರಾಧಿಕಾರಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಮಾಡುವ ಸಂಬಂಧ ಸೆ.30ರಂದು ಶಾಸಕರ ಕಚೇರಿಯ 2ನೇ ಅಂತಸ್ತಿನಲ್ಲಿ ಯೋಜನಾ ಪ್ರಾಧಿಕಾರ ಅದಾಲತ್ ಅನ್ನು ನಡೆಸಲಾಗುವುದು ಎಂದು ಪುತ್ತೂರು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


2024ರ ಆ.7 ರಿಂದ ಕಡಬ ಮತ್ತು ಪುತ್ತೂರು ತಾಲೂಕಿನ ಗ್ರಾಮ ಪಂಚಾಯತ್‌ಗಳಲ್ಲಿ ಸ್ವೀಕೃತವಾಗಿರುವ ಏಕ ನಿವೇಶನ ವಿನ್ಯಾಸ ಅನುಮೋದನೆ ನೀಡುವ ಅಧಿಕಾರವನ್ನು ಪುತ್ತೂರು ನಗರ ಯೋಜನಾ ಪ್ರಾಧಿಕಾರಕ್ಕೆ ನೀಡಲಾಗಿದೆ. ಅದರಂತೆ ಈಗಾಗಲೇ ಪ್ರಾಧಿಕಾರದ ವತಿಯಿಂದ ಕಡಬ ಮತ್ತು ಪುತ್ತೂರು ಗ್ರಾಮಾಂತರ ಪ್ರದೇಶದ ಗ್ರಾಮ ಪಂಚಾಯತ್‌ಗಳಲ್ಲಿ ಸಲ್ಲಿಸುವ ಏಕ ನಿವೇಶನ ವಿನ್ಯಾಸ ಅನುಮೋದನೆ ಪ್ರಕರಣವನ್ನು ಪರಿಶೀಲಿಸಿ ಅನುಮೋದನೆ ನೀಡಲಾಗಿದೆ. 2025ರ ಮೇ 7 ರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯಲಿ ಎಕ ನಿವೇಶನ, ಬಹುನಿವೇಶನ, ಕಟ್ಟಡಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಸಂಬಂಧ 4 ಕೆ ನಿಯಮಗಳನ್ನು ನಿರೂಪಿಸಲಾಗಿದೆ. ಈ ನಿಯಮಾವಳಿಯಂತೆ ಏಕ ನಿವೇಶನ ವಿನ್ಯಾಸ ಅನುಮೋದನೆ ನೀಡಲು ಕೆಲವೊಂದು ಗೊಂದಲಗಳು ಹಾಗು ನಿಯಮವಳಿಗಳ ಅಂಶಗಳನ್ನು ಅರ್ಥೈಸಿಕೊಳ್ಳಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗು ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ಗಮನಿಸಿ ಈ ಅದಾಲತ್ ಅನ್ನು ರೂಪಿಸಲಾಗಿದೆ. ಈಗಾಗಲೇ ಬಂದ ಅರ್ಜಿಯಲ್ಲಿ ತಿರಸ್ಕೃತ ಆರ್ಜಿಯನ್ನು ಹೊರತು ಪಡಿಸಿ ಕೆಲವೊಂದು ಸರಿಯಾದ ದಾಖಲೆ ನೀಡುವಂತೆ ಹಿಂಬರಹ ನೀಡಿದ ಪುತ್ತೂರು ಕಡಬ ತಾಲೂಕಿನ ಒಟ್ಟು 558 ಪ್ರಕರಣಗಳನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಅದಾಲತ್ ನಡೆಯಲಿದೆ. ಈ ವಿಷಯದ ಕುರಿತು ಇಷ್ಟರ ತನಕ ಅದಾಲತ್ ನಡೆದಿಲ್ಲ. ಇದು ಪ್ರಥಮ ಬಾರಿಗೆ ನಡೆಯುತ್ತಿದೆ ಎಂದರು.


ಪೋರ್ಜರಿ ಸಹಿ ಸ್ಪಷ್ಟನೆ;
ನಗರಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಪೋರ್ಜರಿ ಸಹಿ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ ಅವರು ’ ನಮ್ಮ ಕಚೇರಿಗೆ ಓರ್ವ ಅರ್ಜಿ ಹಾಕಿರುತ್ತಾನೆ. ಅದು ಮೂರು ತಿಂಗಳು ಪೆಂಡಿಂಗ್ ಇರುತ್ತದೆ. ನಾನು ವಾರಕ್ಕೆ ಒಂದು ದಿನ ಮಾತ್ರ ಇಲ್ಲಿಗೆ ಬರುತ್ತಿದ್ದೆ. ಒಂದು ಕಚೇರಿಗೆ ಬಂದು ನನ್ನನ್ನು ಉಲ್ಲೇಖಿಸಿ ಸಿಬ್ಬಂದಿಗಳ ಜೊತೆ ಸರ್ ಪೈಲ್ ತರಲು ಹೇಳಿದ್ದಾರೆಂದು ಹೇಳಿ ನಮ್ಮ ಟೈಪಿಸ್ಟ್ ಜೊತೆಯಲ್ಲಿ ಟೈಪ್ ಮಾಡಿಸಿಕೊಂಡು ನನ್ನ ಸಹಿಯನ್ನು ದುರುಪಯೋಗ ಪಡಿಸಿಕೊಂಡಿದ್ದರು. ಕಟ್ಟಡ ಅನುಮೋದನೆಗೆ ಬಂದಾಗ ನಾನು ಪೋರ್ಜರಿ ಸಹಿ ತಿಳಿದು ತಕ್ಷಣ ಅದನ್ನು ಕ್ಯಾನ್ಸಲ್ ಮಾಡಿದ್ದೇನೆ. ಈ ಕುರಿತು ಪೊಲೀಸರಿಗೆ ದೂರು ನೀಡಲು ಹೋಗಿದ್ದ ಸಂದರ್ಭ ಕಚೇರಿಯ ಅಮಾಯಕ ಸಿಬ್ಬಂದಿಗಳ ಮೇಲೂ ಪ್ರಕರಣ ದಾಖಲಾಗುವ ಸಾಧ್ಯತೆ ಇರುವುದರಿಂದ ಅದನ್ನು ಮುಂದುವರಿಸಿಲ್ಲ. ಆದರೆ ಯಾರು ಪೋರ್ಜರಿ ಸಹಿ ಮಾಡಿದ್ಧಾರೋ ಅವರ ಕಟ್ಟಡ ಅನುಮೋದನೆ ಕಡತವನ್ನು ಕ್ಯಾನ್ಸಲ್ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ನಗರಯೋಜನಾ ಪ್ರಾಧಿಕಾರದ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಅನ್ವರ್ ಖಾಸಿಂ, ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಉಪಸ್ಥಿತರಿದ್ದರು.

ಅದಾಲತ್‌ನಲ್ಲಿ ಸಮಸ್ಯೆಗಳನ್ನು ಗೊಂದಲ ನಿವಾರಣೆ
ಅದಾಲತ್‌ನಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಗಳು, ಸಂಬಂಧಿಸಿ ಇತರ ಇಲಾಖೆ ಅಧಿಕಾರಿಗಳು ಇರುತ್ತಾರೆ. ಜನಸಾಮಾನ್ಯರಲ್ಲಿರುವ ಗೊಂದಲ ನಿವಾರಣೆ ಮತ್ತು ನಗರಯೋಜನಾ ಪ್ರಾಧಿಕಾರ ಮತ್ತು ಗ್ರಾಮ ಪಂಚಾಯತ್‌ಗಳ ಸಮನ್ವತೆಗೆ ಈ ಅದಾಲತ್ ಪ್ರಾಮುಖ್ಯತೆ ಪಡೆದಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಎಷ್ಟು ಸರಿಯಾಗಿ ಕಡತ ಕಳುಹಿಸಿ ಕೊಟ್ಟರೆ ನಮಗೆ ವೇಗವಾಗಿ ಕೆಲಸ ಮಾಡಲು ಆಗುತ್ತದೆ. ಇಲ್ಲಿ ಸಮನ್ವಯ ತುಂಬಾ ಅಗತ್ಯ. ಇಲ್ಲಿ ಅದಾಲತ್ ಜೊತೆಗೆ ಮಾಹಿತಿ ವಿನಿಮಯ ಕಾರ್ಯಗಾರವೂ ನಡೆಯಲಿದೆ.
ಗುರುಪ್ರಸಾದ್, ಸದಸ್ಯ ಕಾರ್ಯದರ್ಶಿ
ನಗರಯೋಜನಾ ಪ್ರಾಧಿಕಾರ ಪುತ್ತೂರು

LEAVE A REPLY

Please enter your comment!
Please enter your name here