ಸಂತ ಫಿಲೋಮಿನಾ ಕಾಲೇಜಿನ ಸ್ವಾಯತ್ತತೆಯ ವಾರ್ಷಿಕೋತ್ಸವ, ಅಂಕಪಟ್ಟಿ ವಿತರಣಾ ಸಮಾರಂಭ

0

ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರೈಸುವ ಸತ್ಪ್ರಜೆಗಳಾಗಿ-ಶಕುಂತಳಾ ಟಿ. ಶೆಟ್ಟಿ

ವಿದ್ಯಾರ್ಥಿಗಳು ಈ ಸ್ವಾಯತ್ತ ಕಾಲೇಜಿನ ಪ್ರತಿನಿಧಿಗಳು- ವಂ| ಆಂಟನಿ ಪ್ರಕಾಶ್ ಮಾಂತೆರೊ

ಸಂಸ್ಥೆ ಬೆಳೆಯವಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರ- ವಂ| ಲಾರೆನ್ಸ್ ಮಸ್ಕರೇನಸ್

ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿಗೆ ಸ್ವಾಯತ್ತ ಮಾನ್ಯತೆ ದೊರಕಿದ ಸಲುವಾಗಿ ಅದರ ಪ್ರಥಮ ವಾರ್ಷಿಕೋತ್ಸವ ಹಾಗೂ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಅಂಕಪಟ್ಟಿ ವಿತರಣಾ ಸಮಾರಂಭ ಸೆ.23ರಂದು ಕಾಲೇಜಿನ ಎಸ್.ಜೆ.ಎಂ ಸಭಾಂಗಣದಲ್ಲಿ ಜರಗಿತು.


ಮುಖ್ಯ ಅತಿಥಿ, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಅಂಕಪಟ್ಟಿ ವಿತರಿಸಿದರು. ಬಳಿಕ ಮಾತನಾಡಿದ ಅವರು ಕಲಿತ ವಿದ್ಯೆಗೆ, ಬೆಳೆದ ಮಣ್ಣಿಗೆ ನಾವು ಋಣ ಸಂದಾಯ ಮಾಡಬೇಕು. ಕಲ್ಲಾಗ ಬೇಡಿ, ಮುಳ್ಳಾಗ ಬೇಡಿ. ದೇಶದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರೈಸುವ ಸತ್ಪ್ರಜೆಗಳಾಗಿ ಎಂದು ತಿಳಿಸಿದ ಅವರು ಕಾಲೇಜಿಗೆ ಸ್ವಾಯತ್ತತೆಯ ಮಾನ್ಯತೆ ದೊರಕಿ ಯಶಸ್ವೀ ಒಂದು ವರ್ಷ ಪೂರೈಸಿದಕ್ಕಾಗಿ ಅಭಿನಂದಿಸಿದರು.


ಕಾಲೇಜಿನ ಪ್ರಾಂಶುಪಾಲರಾದ ವಂ| ಆಂಟನಿ ಪ್ರಕಾಶ್ ಮಾಂತೆರೊ ಮಾತನಾಡಿ ನೀವೆಲ್ಲರೂ ಈ ಸ್ವಾಯತ್ತ ಕಾಲೇಜಿನ ಪ್ರತಿನಿಧಿಗಳು. ಈ ಚರಿತ್ರಾರ್ಹ ದಿನದಂದು ಭಗವಂತ ಎಲ್ಲರಿಗೂ ಒಳಿತನ್ನೇ ಮಾಡಲಿ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಹಾಗೆಯೇ ಈ ಸಾಧನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕರಾದ ವಂ| ಲಾರೆನ್ಸ್ ಮಸ್ಕರೇನಸ್ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಧಿಸಬೇಕಾದದ್ದು ಬಹಳಷ್ಟು ಇದೆ. ವಿನಯವೇ ವಿದ್ಯೆಗೆ ಭೂಷಣ ಎನ್ನುವ ರೀತಿಯಲ್ಲಿ ನಡೆದುಕೊಂಡು ಸಂಸ್ಥೆ ಇನ್ನಷ್ಟು ಬೆಳೆಯವಲ್ಲಿ ತಮ್ಮದೇ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು. ಉಪನ್ಯಾಸಕರ ಪರವಾಗಿ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಮಾಲಿನಿ ಕೆ. ಹಾಗೂ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ದ್ವಿತೀಯ ಬಿ.ಕಾಂ.ನ ಅಪೂರ್ವ ಅನಿಸಿಕೆ ತಿಳಿಸಿದರು.

ಕಾಲೇಜಿನ ಪರೀಕ್ಷಾಂಗ ಉಪಕುಲಸಚಿವ ಕ್ಯಾ. ಜಾನ್ಸನ್ ಡೇವಿಡ್ ಸಿಕ್ವೆರಾ ಗರಿಷ್ಠ ಅಂಕ ಪಡೆದವರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ಅಪರ್ಣಾ ಮತ್ತು ಮಾನಸ ಪ್ರಾರ್ಥಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಜಯಕುಮಾರ್ ಎಂ. ಸ್ವಾಗತಿಸಿ, ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ ವಂದಿಸಿದರು. ಕಾಲೇಜಿನ ಪರೀಕ್ಷಾಂಗ ಉಪಕುಲಸಚಿವ ಅಭಿಷೇಕ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here