ಆರ್ಕಿಟೆಕ್ಚರ್, ಇಂಟೀರಿಯರ್, ಪ್ಲ್ಯಾನಿಂಗ್‌ವನ್ನೊಳಗೊಂಡ ಅದ್ವಯ ವಿನ್ಯಾಸ ಸ್ಟುಡಿಯೋ ಶುಭಾರಂಭ

0

ಪುತ್ತೂರು: ಆರ್ಕಿಟೆಕ್ಚರ್(ವಾಸ್ತುಶಿಲ್ಪ), ಇಂಟೀರಿಯರ್(ಒಳಾಂಗಣ), ಪ್ಲ್ಯಾನಿಂಗ್(ಯೋಜನೆ)ವನ್ನೊಳಗೊಂಡ ಅದ್ವಯ ವಿನ್ಯಾಸ ಸ್ಟುಡಿಯೋ ಸೆ.೨೫ ರಂದು ಬಪ್ಪಳಿಗೆ-ಪುತ್ತೂರಿನ ಬೈಪಾಸ್ ರಸ್ತೆಯ ಸಮೃದ್ಧಿ ಸಂಕೀರ್ಣದ ಮೂರನೇ ಮಹಡಿಯಲ್ಲಿ ಶುಭಾರಂಭಗೊಂಡಿತು.


ವ್ಯವಹಾರದಲ್ಲಿ ಗುಣಮಟ್ಟತೆ, ಪಕ್ವತೆ, ಜವಾಬ್ದಾರಿ, ಪ್ರಾಮಾಣಿಕತೆ, ಸವಾಲು ಮುಖ್ಯ-ಕಾವು ಹೇಮನಾಥ ಶೆಟ್ಟಿ:

ವೇದಿಕೆಯಲ್ಲಿನ ಅತಿಥಿ ಗಣ್ಯರು ದೀಪ ಬೆಳಗಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಲಾಯಿತು. ಬಳಿಕ ಮಾತನಾಡಿದ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು, ವ್ಯವಹಾರದಲ್ಲಿ ಬೆಳೆಯಬೇಕಾದರೆ ಉತ್ಕೃಷ್ಟ ಗುಣಮಟ್ಟತೆ, ಪಕ್ವತೆ, ಜವಾಬ್ದಾರಿ, ಪ್ರಾಮಾಣಿಕತೆ, ಸವಾಲು ಮುಖ್ಯವಾಗಿರುತ್ತದೆ. ಯಾರೇ ಆಗಲಿ, ಗೆದ್ದಾಗ ಮಾತ್ರವಲ್ಲ, ಸೋತಾಗಲೂ ಆ ವ್ಯಕ್ತಿಯ ಜೊತೆಗೆ ಇರಬೇಕಾಗುತ್ತದೆ. ದಿನದಿಂದ ದಿನಕ್ಕೆ ಬದಲಾವಣೆಗೊಳ್ಳುತ್ತಿರುವ ಈ ಯುಗದಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸದಲ್ಲೂ ಬದಲಾವಣೆಗೊಳ್ಳಬೇಕಾಗಿದೆ ಎಂದರು.


ಬೆಳೆಯುತ್ತಿರುವ ಸಮಾಜದಲ್ಲಿ ಕಟ್ಟಡಗಳ ವಿನ್ಯಾಸದಲ್ಲಿ ಆವಿಷ್ಕಾರಗಳಾಗಲಿ-ವಿಕ್ರಂ ದತ್ತ:
ರೋಟರಿ ಜಿಲ್ಲೆ ೩೧೮೧ ನಿಕಟಪೂರ್ವ ಜಿಲ್ಲಾ ಗವರ್ನರ್ ವಿಕ್ರಮ ದತ್ತ ಮಾತನಾಡಿ, ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ನಾವೇ ಸಾಧಕರಾಗಿ ಸಾಧಿಸಿ ತೋರಿಸಬೇಕಾಗುತ್ತದೆ. ಗುಣಮಟ್ಟದ ಸೇವೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವ್ಯವಹಾರವನ್ನು ಹೊಸತನದೊಂದಿಗೆ ಮುಂದಡಿಯಿಡಬೇಕಾಗುತ್ತದೆ. ಬೆಳೆಯುತ್ತಿರುವ ಸಮಾಜದಲ್ಲಿ ಕಟ್ಟಡಗಳ ವಿನ್ಯಾಸದಲ್ಲಿ ಆವಿಷ್ಕಾರಗಳು ಮೂಡಿ ಬರಲಿ ಎಂದರು.


ಮೆಚ್ಚಿದ ಕೆಲಸ ಸಿಗದಿದ್ದರೆ ಸಿಕ್ಕಿದ ಕೆಲಸವನ್ನು ಮೆಚ್ಚಿಕೊಳ್ಳಿ-ಎಸ್.ಕೆ ಆನಂದ್ ಕುಮಾರ್:

ಹಿರಿಯ ಇಂಜಿನಿಯರ್ ಮಾಸ್ಟರ್ ಪ್ಲಾನರಿಯ ಎಸ್.ಕೆ ಆನಂದ್ ಕುಮಾರ್ ಮಾತನಾಡಿ, ಬದುಕಿನಲ್ಲಿ ಗೆಲ್ಲಬೇಕಾದರೆ ನಾವು ಜ್ಞಾನವನ್ನು ಉಪಯೋಗಿಸಿ ಗ್ರಾಹಕರನ್ನು ಗೆಲ್ಲಿಸಿ ನಾವು ಗೆಲ್ಲಬೇಕಾಗಿದೆ. ವ್ಯವಹಾರದಲ್ಲಿ ಹೊಸತನದ ವಿನ್ಯಾಸವನ್ನು ನಿರ್ಮಾಣ ಮಾಡಿ ತೋರಿಸಬೇಕು. ಯಶಸ್ಸು ಸುಲಭವಾಗಿ ಸಿಗದು. ಯಶಸ್ಸು ಸಿಗಬೇಕಾದರೆ ಅದರ ಹಿಂದೆ ಕಷ್ಟ, ಪರಿಶ್ರಮ, ಇಂಟಲಿಜೆನ್ಸ್ ಹೊಂದಬೇಕಾಗಿದೆ. ಮೆಚ್ಚಿದ ಕೆಲಸ ಸಿಗದಿದ್ದರೆ ಸಿಕ್ಕಿದ ಕೆಲಸವನ್ನು ಮೆಚ್ಚಿಕೊಂಡು ಮುಂದೆ ಸಾಗಬೇಕು ಎಂದರು.


ಸಂತೋಷ್ ಶೆಟ್ಟಿಯವರು ಹಂತ ಹಂತದಲ್ಲೂ ಬೆಳೆದು ಪುತ್ತೂರಿನಲ್ಲಿ ಹೆಸರು-ವಲೇರಿಯನ್ ಡಾಯಸ್:
ಎಪಿಎಂಸಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ವಲೇರಿಯನ್ ಡಾಯಸ್ ಮಾತನಾಡಿ, ಸಂತೋಷ್ ಶೆಟ್ಟಿರವರು ಸುಮಾರು ಮೂವತೈದು ವರ್ಷದ ಹಿಂದಿನಿಂದ ನನಗೆ ಪರಿಚಯ. ವ್ಯವಹಾರದಲ್ಲಿ ಪರಸ್ಪರ ಸಹಕರಿಸುತ್ತಾ ಸಂತೋಷ್ ಶೆಟ್ಟಿಯವರು ಹಂತ ಹಂತದಲ್ಲೂ ಬೆಳೆದು ಪುತ್ತೂರಿನಲ್ಲಿ ಹೆಸರನ್ನು ಗಿಟ್ಟಿಸಿಕೊಂಡಿದ್ದಾರೆ ಎಂದರು.


ಯಶಸ್ಸಿನ ಬೆನ್ನೆತ್ತುವಲ್ಲಿ ಪರಿಕಲ್ಪನೆ, ಸಂಕಲ್ಪ, ಸಾಧಿಸುವ ಛಲ, ಕನಸು ಇರಲಿ-ಶೇಖರ್ ಶೆಟ್ಟಿ:

ಪುತ್ತೂರು ಕೋಆಪರೇಟಿವ್ ಟೌನ್ ಬ್ಯಾಂಕ್ ಮುಖ್ಯ ನಿರ್ವಹಣಾಧಿಕಾರಿ ಶೇಖರ್ ಶೆಟ್ಟಿ ಮಾತನಾಡಿ, ಹಿರಿಯರಾದ ಎಸ್.ಕೆ ಆನಂದ್, ಮಧ್ಯ ವಯಸ್ಕರಾದ ಸಚ್ಚಿದಾನಂದ, ಕಿರಿಯರಾದ ಅನಿಕೇತನ್‌ರವರನ್ನು ಕೃತಜ್ಞತಾ ಮನೋಭಾವನೆಯೊಂದಿಗೆ ನೂತನ ಸಂಸ್ಥೆಯು ಉಪಕಾರ ಸ್ಮರಣೆ ಮಾಡಿ ಸನ್ಮಾನಿಸಿರುವುದು ಎಲ್ಲರನ್ನು ಗೌರವಿಸಿದಂತಾಗಿದೆ. ಯಶಸ್ಸನ್ನು ಬೆನ್ನೆತ್ತಿ ಹೋಗಬೇಕಾದರೆ ನಮ್ಮಲ್ಲಿ ಪರಿಕಲ್ಪನೆ, ಸಂಕಲ್ಪ, ಸಾಧಿಸುವ ಛಲ, ಕನಸು ಇರಬೇಕು. ನಾವು ಮಾಡುವ ಕೆಲಸ ದೇವರ ಕೆಲಸ ಎಂದು ತಿಳಿದುಕೊಂಡು ಮುನ್ನೆಡೆಯಬೇಕು ಎಂದರು.


ಹೊಸ ಹೊಸ ಕಟ್ಟಡ ವಿನ್ಯಾಸಗಳು ಸಮಾಜಕ್ಕೆ ಪರಿಚಯಿಸುವಂತಾಗಲಿ-ಸಚ್ಚಿದಾನಂದ:
ಸೀನಿಯರ್ ಆರ್ಕಿಟೆಕ್ಟ್ ನಿರ್ಮಾಣ್ ಅಸೋಸಿಯೇಟ್ಸ್‌ನ ಸಚ್ಚಿದಾನಂದ ಮಾತನಾಡಿ, ಅಪ್ಪ ಸಂತೋಷ್ ಶೆಟ್ಟಿ ಇಂಜಿನಿಯರ್, ಮಗ ಆರ್ಕಿಟೆಕ್ಟ್ ಹೀಗೆ ಇವರೀರ್ವರ ಕಾಂಬಿನೇಷನಿನಲ್ಲಿ ಹೊಸ ಹೊಸ ಕಟ್ಟಡ ವಿನ್ಯಾಸಗಳು ಸಮಾಜಕ್ಕೆ ಪರಿಚಯಿಸುವಂತಾಗಲಿ ಎಂದರು.


ನವನವೀನ ವಿನ್ಯಾಸಗಳು ಮೂಡಿ ಬರಲಿ-ರಾಮಪ್ಪ:

ಪುತ್ತೂರು ಕೆನರಾ ಬ್ಯಾಂಕ್‌ನ ಮುಖ್ಯ ಪ್ರಬಂಧಕ ರಾಮಪ್ಪ ಮಾತನಾಡಿ, ವ್ಯವಹಾರದಲ್ಲಿ ಲಾಭ-ನಷ್ಟ ಇದ್ದೇ ಇರುತ್ತದೆ. ನಾವು ಬೆಳೆಯಬೇಕು, ಗ್ರಾಹಕರೂ ಬೆಳೆಯಬೇಕು ಎಂದಾಗ ಮಾತ್ರ ಯಾವುದೇ ಉದ್ಯಮವಾಗಲಿ ನಡೆಸಲು, ಬೆಳೆಸಲು ಸಾಧ್ಯ. ನವನವೀನ ಸೃಜನಶೀಲ ವಿನ್ಯಾಸಗಳು ಈ ನೂತನ ಸಂಸ್ಥೆಯಿಂದ ಮೂಡಿ ಬರಲಿ ಎಂದರು.


ನಾವೂ ಬೆಳೆಯೋಣ ಗ್ರಾಹಕರನ್ನೂ ಬೆಳೆಸೋಣ-ರವಿಕೃಷ್ಣ ಕಲ್ಲಾಜೆ:
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕೃಷ್ಣ ಡಿ ಕಲ್ಲಾಜೆ ಮಾತನಾಡಿ, ಪುತ್ತೂರಿನ ಇಂಜಿನಿಯರ್ಸ್‌ಗಳಿಗೆ ಮಾಸ್ಟರ್ ಪ್ಲಾನರಿಯ ಎಸ್.ಕೆ ಆನಂದ್ ರವರು ಪ್ರೇರೇಪಣಾ ಶಕ್ತಿಯಾಗಿದ್ದಾರೆ. ಇಂಜಿನಿಯರ್ ಗಳು ಹೇಗೆ ಇರಬೇಕು, ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಎನ್ನುವುದನ್ನು ಅವರ ಕಾರ್ಯವೈಖರಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ನಾವೂ ಬೆಳೆಯೋಣ ಗ್ರಾಹಕರನ್ನೂ ಬೆಳೆಸೋಣ ಎಂಬಂತೆ ಸಂಸ್ಥೆ ಮುನ್ನಡೆಯಲಿ ಎಂದರು.


ವ್ಯಕ್ತಿಯ ಮುಖದಲ್ಲಿ ಮಂದಹಾಸ ಮೂಡಿಸುವುದು ವಿನ್ಯಾಸಗಾರನ ಕೈಚಳಕ-ಸತ್ಯಗಣೇಶ್:
ಪುತ್ತೂರು ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಅಧ್ಯಕ್ಷ ಸತ್ಯಗಣೇಶ್ ಮಾತನಾಡಿ, ಜೀವನದಲ್ಲಿ ಒಮ್ಮೆ ಮನೆ ನಿರ್ಮಿಸುವುದು. ಆದರೆ ಆ ಮನೆ ತನ್ನ ಕನಸಿಗೆ ಪೂರಕವಿರುವಂತೆ ವಿನ್ಯಾಸಗೊಳಿಸಿ ಮನೆ ಕಟ್ಟುವ ವ್ಯಕ್ತಿಯ ಮುಖದಲ್ಲಿ ಮಂದಹಾಸ ಮೂಡಿಸುವುದು ವಿನ್ಯಾಸಗಾರನ ಕೈಚಳಕವಾಗಿದೆ ಎಂದರು.


ಗುಣಮಟ್ಟದ ಸೇವೆ ನೀಡಿದಾಗ ಉದ್ಯಮ ಯಶಸ್ವಿ-ಚಂದ್ರಹಾಸ್ ರೈ:
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಚಂದ್ರಹಾಸ ರೈ ಮಾತನಾಡಿ, ಗ್ರಾಹಕರಿಗೆ ಏನು ಬೇಕು ಅದನ್ನು ತಿಳಿದುಕೊಂಡು ಉತ್ತಮವಾದುದನ್ನು ನೀಡುವುದು ವ್ಯವಹಾರದ ಉದ್ಧೇಶವಾಗಿದೆ. ಯಾವುದೇ ಕ್ಷೇತ್ರವಾಗಲಿ, ಎಲ್ಲಿ ಅವಕಾಶ ಸಿಗುತ್ತದೆಯೋ ಆವಾಗ ಗುಣಮಟ್ಟದ ಉತ್ತಮ ಸೇವೆ ನೀಡಿದಾಗ ಉದ್ಯಮ ಯಶಸ್ವಿಯಾಗುತ್ತದೆ ಎಂದರು.


ಗ್ರಾಹಕರ ಮೆಚ್ಚುಗೆಯ ರೀತಿಯಲ್ಲಿ ಪ್ರಾಜೆಕ್ಟ್ ಆಗಲಿ-ಅನಿಕೇತನ್ ಹೆಗ್ಡೆ:
ಬೆಳ್ತಂಗಡಿ ವೇಸ್ಟ್ ಕೋಸ್ಟ್ ಇದರ ಆರ್ಕಿಟೆಕ್ಟ್ ಬಿ.ಕೆ ಅನಿಕೇತ್ ಹೆಗ್ಡೆ ಮಾತನಾಡಿ, ಹಣ ಎಂಬುದು ಸಂಪನ್ಮೂಲ ಆದರೆ ಬಳಕೆ ಮಾನವನ ಶರೀರ ಹಾಗೂ ಮನಸ್ಸಿಗೆ ಇಂಪ್ಯಾಕ್ಟ್ ಆಗಬೇಕು. ತಾನು ಕೈಗೆತ್ತಿಗೊಂಡ ಕಾರ್ಯ ಗ್ರಾಹಕನ ಮೆಚ್ಚುಗೆಯ ರೀತಿಯಲ್ಲಿ ನಿಜರೂಪಕ್ಕೆ ಬರುವ ಹಾಗೆ ಪ್ರಾಜೆಕ್ಟ್ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವಂತಾಗಲಿ ಎಂದರು.


ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಅಭಿಜ್ಞಾಪ್ರಹಾಸ್ ಶೆಟ್ಟಿ, ಶ್ರೀಮತಿ ಅಮಿತ ಎಸ್.ಶೆಟ್ಟಿ ಉಪಸ್ಥಿತರಿದ್ದರು. ಅದ್ವಯ ಸ್ಟುಡಿಯೋ ಮಾಲಕ ಅಭಿಜ್ಞಾಪ್ರಹಾಸ್ ಶೆಟ್ಟಿರವರ ತಂದೆ, ಇಂಜಿನಿಯರ್ ಸಂತೋಷ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಪೂರ್ವಾಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು.

ಬಂಟರ ಸಂಘದ ರೂ.5 ಕೋಟಿ ಪ್ರಾಜೆಕ್ಟ್ ವಿನ್ಯಾಸ ಹಸ್ತಾಂತರ..
ಪುತ್ತೂರು ಬಂಟರ ಸಂಘದ ವತಿಯಿಂದ ರೂ.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೂರು ಸಾವಿರ ಆಸನವುಳ್ಳ, ೫೦೦ ವಾಹನಗಳ ಪಾರ್ಕಿಂಗ್ ಒಳಗೊಂಡ ಸುಸಜ್ಜಿತ ಸಭಾಭವನ ಅಲ್ಲದೆ ಸಂಘದ ವತಿಯಿಂದ ಜಿಲ್ಲೆಯಲ್ಲಿ ಪ್ರಥಮ ಎಂಬಂತೆ ರ್ಂಡ್ ಶೇಪ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ತರಗತಿ ಕೊಠಡಿಗಳ ಶಾಲಾ ಕಟ್ಟಡದ ವಿನ್ಯಾಸವನ್ನು ಅದ್ವಯ ವಿನ್ಯಾಸ ಸ್ಟುಡಿಯೋದವರಿಗೆ ವಹಿಸಿಕೊಂಡಿದ್ದು ಇದರ ಪ್ರಾಜೆಕ್ಟ್ ವಿನ್ಯಾಸವನ್ನು ಸಂಸ್ಥೆಯ ಮಾಲಕ ಅಭಿಜ್ಞಾಪ್ರಹಾಸ್ ಶೆಟ್ಟಿರವರು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಹೇಮನಾಥ ಶೆಟ್ಟಿರವರು ಪ್ರಾಜೆಕ್ಟ್‌ನ ಪ್ರಥಮ ಮೊತ್ತದ ಕಾಣಿಕೆಯ ಚೆಕ್‌ನ್ನು ಅಭಿಜ್ಞಾಪ್ರಹಾಸ್ ಶೆಟ್ಟಿರವರು ನೀಡಿ, ವಿನ್ಯಾಸದ ಕುರಿತಾಗಿ ಮಾತನಾಡಿದರು.

ಸನ್ಮಾನ..
ಈ ಸಂದರ್ಭದಲ್ಲಿ ಹಿರಿಯ ಇಂಜಿನಿಯರ್ ಮಾಸ್ಟರ್ ಪ್ಲಾನರಿಯ ಎಸ್.ಕೆ ಆನಂದ್ ಕುಮಾರ್, ಸೀನಿಯರ್ ಆರ್ಕಿಟೆಕ್ಟ್ ನಿರ್ಮಾಣ್ ಅಸೋಸಿಯೇಟ್ಸ್‌ನ ಸಚ್ಚಿದಾನಂದ, ಬೆಳ್ತಂಗಡಿ ವೇಸ್ಟ್ ಕೋಸ್ಟ್ ಇದರ ಆರ್ಕಿಟೆಕ್ಟ್ ಬಿ.ಕೆ ಅನಿಕೇತ್ ಹೆಗ್ಡೆರವರನ್ನು ಸನ್ಮಾನಿಸಲಾಯಿತು.

ಸೇವೆಗಳು..
*ವಾಸ್ತುಶಿಲ್ಪ ಯೋಜನೆ ಮತ್ತು ವಿನ್ಯಾಸ, *ಕಟ್ಟಡ ನವೀಕರಣ ಮತ್ತು ಪುನಃಸ್ಥಾಪನೆ, *ಕಟ್ಟಡದ ದಾಖಲೆ, *ವೆಚ್ಚ ಮತ್ತು ಅಂದಾಜು, *ಸಮಾಲೋಚನೆ, ನಿರ್ಮಾಣ ಸೇವೆಗಳು, *ತ್ರಿಡಿ ಎತ್ತರದ ವಿನ್ಯಾಸ, ತ್ರಿಡಿ ದೃಶ್ಯೀಕರಣ ಮತ್ತು ದರ್ಶನ, *ಬಾಹ್ಯ ಮತ್ತು ಒಳಾಂಗಣ ವಿನ್ಯಾಸ, *ಭೂದೃಶ್ಯ ವಿನ್ಯಾಸ, *ಕಚೇರಿ ಮತ್ತು ಅಂಗಡಿ ನವೀಕರಣ, *ಯೋಜನಾ ನಿರ್ವಹಣೆ, *ರಚನಾತ್ಮಕ ವಿನ್ಯಾಸ ಒಳಗೊಂಡಿದೆ.

LEAVE A REPLY

Please enter your comment!
Please enter your name here