ಕನ್ನಡ ಮಾಧ್ಯಮದ ವಿದ್ಯಾರ್ಥಿಗೆ ವೈದ್ಯಕೀಯ ಸೀಟು : ಕೈ ಬಿಡಲಿಲ್ಲ ಕನ್ನಡವೆಂದು ಹೇಳಿದ ತಾಯಿ

0

ಉಪ್ಪಿನಂಗಡಿ: ಪ್ರವಾಹದ ವಿರುದ್ಧದ ಈಜು ಎಂಬಂತೆ ಪ್ರಸಕ್ತ ಸನ್ನಿವೇಶದಲ್ಲಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳನ್ನು ಕಲಿಸುವುದೆಂದರೆ ಹೆತ್ತವರಿಗೆ ಸಮಾಜದ ತಿರಸ್ಕಾರದ ನುಡಿಗಳನ್ನು ಎದುರುಸುವುದೇ ಒಂದು ದೊಡ್ಡ ಸವಾಲು. ಅಂತಹ ಸವಾಲನ್ನು ಎದುರಿಸಿ ತನ್ನ ಮೂರು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಕಲಿಸುತ್ತಿರುವ ತಾಯಿಯೋರ್ವರು ತನ್ನ ಹಿರಿ ಮಗನಿಗೆ ಸರಕಾರಿ ಕೋಟದಲ್ಲಿ ವೈದ್ಯಕೀಯ ಸೀಟ್ ದೊರಕಿದ್ದು ಸಂತಸದಿಂದ ಆಕೆ “ ಕೈ ಬಿಡಲಿಲ್ಲ ಕನ್ನಡ” ಎಂಬ ಶೀರ್ಷಿಕೆಯಡಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


ಸುನಿತಾ ರವರು ಕೆಮ್ಮಾರದ ನಿವಾಸಿ. ಮಧ್ಯಮವರ್ಗಕ್ಕೆ ಸೇರಿದ ಕುಟುಂಬದ ಗೃಹಿಣಿ ಈಕೆ. ತನ್ನ ಹಿರಿ ಮಗ ಶಿಶಿರ್ ದೇವಾಡಿಗ ನನ್ನು ಉಪ್ಪಿನಂಗಡಿಯ ಮಾಧವ ಶಿಶು ಮಂದಿರಕ್ಕೆ ಸೇರಿಸಿದ ಬಳಿಕ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಲ್ಲಿನ ಶ್ರೀ ರಾಮ ಶಾಲೆ ಎಂಬ ಕನ್ನಡ ಮಾಧ್ಯಮ ಶಾಲೆಗೆ ಸೇರಿಸುತ್ತಾರೆ. ಊರಿನವರು, ಕುಟುಂಬಸ್ಥರು ಮಗನ ಶ್ರೇಯಸ್ಸು ಬಯಸಿದವರಂತೆ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಲು ಒತ್ತಾಯಿಸುತ್ತಾರೆ. ಕನ್ನಡ ಭಾಷಾ ಶಿಕ್ಷಣದ ಬಗ್ಗೆ ವಿಶ್ವಾಸವನ್ನು ಹೊಂದಿದ್ದ ಶಿಶಿರ್ ಹೆತ್ತವರು ದೃಢ ನಿರ್ಧಾರದಿಂದ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಶಿಕ್ಷಣವನ್ನು ಕೊಡಿಸುತ್ತಾರೆ. ಶಾಲೆಯ ಕಲಿಕಾ ಶೈಲಿ, ಹೆತ್ತವರ ಪ್ರೋತ್ಸಾಹದಿಂದ ಶಿಶಿರ್ ಎಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 9 ನೇ ಸ್ಥಾನಿಯಾಗಿ ಉತ್ತೀರ್ಣನಾದಾಗ ಹೆತ್ತವರು ಅಭಿಮಾನ ಪೂರ್ವಕ ಸಂತಸ ಪಟ್ಟರು. ಆದರೆ ಕನ್ನಡ ಮಾಧ್ಯಮದಲ್ಲಿ ಕಲಿತವನಿಗೆ ಮುಂದಿನ ಶಿಕ್ಷಣದಲ್ಲಿ ತುಂಬಾ ಕಷ್ಠವಾಗಲಿದೆ ಎಂದು ಆ ಕ್ಷಣದಲ್ಲೇ ಹಲವರು ಭವಿಷ್ಯ ನುಡಿದು ಕನ್ನಡ ಮಾಧ್ಯಮದಿಂದ ಮಗ ಸಮಸ್ಯೆಗೆ ಸಿಲುಕುತ್ತಾನೆಂದು ಎಚ್ಚರಿಸಿದರು.


ಆದರೆ ಪಿಯುಸಿ ಶಿಕ್ಷಣಕ್ಕೆ ಉಪ್ಪಿನಂಗಡಿಯ ಇಂದ್ರಪ್ರಸ್ಥ ಪಿ ಯು ಕಾಲೇಜಿಗೆ ಸೇರ್ಪಡೆಗೊಂಡ ಶಿಶಿರ್ ಅಲ್ಲಿನ ಆಂಗ್ಲ ಮಾಧ್ಯಮ ಭೋಧನಾ ಕ್ರಮವನ್ನು ಚೆನ್ನಾಗಿ ಅರ್ಥೈಸಿ ದ್ವಿತೀಯ ಪಿಯುಸಿಯಲ್ಲಿ ಶೇ. 93 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣನಾಗುತ್ತಾನೆ. ಮಾತ್ರವಲ್ಲದೆ ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕೆಂಬ ಕನಸು ಹೊತ್ತು ನೀಟ್ ಪರೀಕ್ಷೆಯನ್ನು ಉತ್ತಮ ಅಂಕದೊಂದಿಗೆ ಪಾಸ್ ಮಾಡಿದ ಆತನಿಗೆ ಇದೀಗ ಕನ್ನಡ ಮಾಧ್ಯಮ ಕೆಟಗರಿಯಲ್ಲಿ ಸರಕಾರಿ ಕೋಟದಡಿ ಮಂಗಳೂರಿನ ಏಜೆ ಇನ್ಸಿ ಟ್ಯೂಟ್ ಆಫ್ ಡೆಂಟಲ್ ಸೈನ್ಸ್ ನಲ್ಲಿ ಸೀಟು ದೊರಕಿದೆ. ಶುಲ್ಕ ಭರಿಸಿ ವೈದ್ಯಕೀಯ ಶಿಕ್ಷಣ ಪಡೆಯುವಷ್ಟು ಆರ್ಥಿಕ ಸ್ಥಿತಿ ನಮ್ಮದಲ್ಲ. ಅಂತಹದ್ದರಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು, ಕನ್ನಡ ಮಾಧ್ಯಮ ಕೆಟಗರಿಯಲ್ಲೇ ನನ್ನ ಮಗನಿಗೆ ಸರಕಾರಿ ಕೋಟದಡಿ ವೈದ್ಯಕೀಯ ಸೀಟ್ ದೊರಕಿರಲು ಮಾತೃ ಭಾಷೆಯ ಶಿಕ್ಷಣ ಮಾತೆಯಂತೆ ಕೈ ಹಿಡಿಯಿತು ಎಂದು ಸುನೀತಾ ಶ್ರೀರಾಮ ಕೊಯಿಲ ರವರು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿರುವುದು ಗಮನ ಸೆಳೆದಿದೆ.

LEAVE A REPLY

Please enter your comment!
Please enter your name here