ಪುತ್ತೂರು: ಪಡ್ನೂರು ಗ್ರಾಮದ ಸೇಡಿಯಾಪು ಕೆದಿಮಾರ್ ರಸ್ತೆಗೆ ಕೊನೆಗೂ ಮುಕ್ತಿ ದೊರಕಿದೆ. ರಸ್ತೆ ವಿವಾದದಿಂದ ಇಲ್ಲಿನ ಸುಮಾರು ಕುಟುಂಬಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದರು. ಈ ವಿಚಾರವನ್ನು ಶಾಸಕ ಅಶೋಕ್ ರೈ ಗಮನಕ್ಕೆ ತಂದ ಗ್ರಾಮಸ್ಥರು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದರು.
ವಿವಾದಯುತ ರಸ್ತೆಯ ವಿಚಾರವಾಗಿ ಮಾತುಕತೆ ನಡೆಸಿದ ಶಾಸಕರು ರಸ್ತೆ ವಿವಾದಕ್ಕೆ ತೆರೆ ಎಳೆದಿದ್ದಾರೆ. ಈ ಮೂಲಕ 25 ವರ್ಷಗಳ ನರಕಯಾತನೆಗೆ ಮುಕ್ತಿಯನ್ನು ನೀಡಿದ್ದಾರೆ.

ರಸ್ತೆ ಮಾಡಿಸಿಕೊಟ್ಟ ಶಾಸಕ ಅಶೋಕ್ ರೈ ಅವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ. ಈ ವೇಳೆ ಮಾತನಾಡಿದ ಗ್ರಾಮಸ್ಥರು ನೀವು ಮಾಡಿದ ಉಪಕಾರವನ್ನು ಎಂದಿಗೂ ಮರೆಯಲಾರೆವು. ದೇವರ ರೂಪದಲ್ಲಿ ಬಂದು ನಮ್ಮ ಕಷ್ಟಕ್ಕೆ ಪರಿಹಾರ ನೀಡಿದ್ದೀರಿ ಎಂದು ಅಭಿನಂದಿಸಿದರು.
ಸ್ಥಳೀಯರ ಪರವಾಗಿ ಮಾತನಾಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಣ ಪಂಜಿಗುಡ್ಡೆ ಈಶ್ವರಭಟ್ ಅವರು ಈ ಭಾಗದ ಜನರು ಅನೇಕ ವರ್ಷಗಳಿಂದ ಗ್ರಾ.ಪಂ ಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾರೂ ಕ್ಯಾರೇ ಮಾಡಿರಲಿಲ್ಲ. ಶಾಸಕರು ಮಾತುಕತೆ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಿದ್ದಾರೆ. ಶಾಸಕರು ಇಲ್ಲದೇ ಇರುತ್ತಿದ್ದರೆ ಈ ರಸ್ತೆಯೇ ಆಗುತ್ತಿರಲಿಲ್ಲ. ಬಡ ಜನತೆಯ ಕಣ್ಣೀರೊರೆಸಿದ ಶಾಸಕರನ್ನು ಜನತೆ ಎಂದೂ ಮರೆಯಬಾರದು ಎಂದು ಹೇಳಿದರು.
ಈ ರಸ್ತೆಯನ್ನು ಕಾಂಕ್ರೀಟ್ ಮಾಡಿ ಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಾಳಪ್ಪ ಗೌಡ, ಪುಷ್ಪಾವತಿ, ವಿಶ್ವಾಸ್ ನಂದೀಸ್, ಮನೋಜ್, ದೇವಕಿ, ಪ್ರೇಮ, ಪುರುಷೋತ್ತಮ ಕುಲಾಲ್, ವಿಧ್ವಪ್ರಸಾದ್, ತುಶಾನ್, ಶೀನಪ್ಪ ಪೂಜಾರಿ, ಗಂಗಾಧರ ಕಡ್ತಿಮಾರ್, ರೋಜನ್ ರಾಜ್ ಉಪಸ್ಥಿತರಿದ್ದರು.