ಉಪ್ಪಿನಂಗಡಿ: ಎಲ್ಲೆಡೆ ಬೀದಿ ನಾಯಿಗಳ ಹಾವಳಿ ಕಾಣಿಸುತ್ತಿರುವಂತೆ ಉಪ್ಪಿನಂಗಡಿಯಲ್ಲಿಯೂ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ನಾಯಿ ದಾಳಿಯ ಭೀತಿಯ ನಡುವೆ ಬೀದಿ ನಾಯಿಯನ್ನೇ ಚಿತ್ತಾರಕ್ಕೆ ಬಳಸಿದ ಘಟನೆ ಉಪ್ಪಿನಂಗಡಿಯಲ್ಲಿ ವರದಿಯಾಗಿದೆ.

ಇಲ್ಲಿನ ಬಸ್ ನಿಲ್ದಾಣದಲ್ಲಿ ಬೀದಿ ನಾಯಿಗಳ ಹಿಂಡು ಕಾಣಿಸುತ್ತಿದ್ದು, ಯಾವ ಸಮಯದಲ್ಲಿ ದಾಳಿ ನಡೆಸುವುದೋ ಎಂಬ ಭೀತಿಯಿಂದ ಜನ ಸಂಚರಿಸುತ್ತಿದ್ದರೆ, ಈ ಭೀತಿಯ ನಡುವೆ ನಾಯಿಯ ಮೇಲೊಂದು ಸಂಖ್ಯೆ , ಮತ್ತಿತರ ಚಿತ್ತಾರಗಳು ಬರೆಯಲ್ಪಟ್ಟು ಗಮನ ಸೆಳೆದಿದೆ. ನಾಯಿಯ ಮೈ ಮೇಲೆ ಮೊಬೈಲ್ ಸಂಖ್ಯೆಯೊಂದು ಬರೆಯಲ್ಪಟ್ಟಿದ್ದು, ಕಣ್ಣಿನ ಹುಬ್ಬುಗಳಿಗೆ ಕಾಡಿಗೆ ಹಚ್ಚಿ ಅದನ್ನು ಶೃಂಗಾರಗೊಳಿಸಿಲಾಗಿದೆ. ನಾಯಿಯ ಮೇಲೆ ಮನಸೋ ಇಚ್ಚೆ ಪೆನ್ನಿನಿಂದ ಗೀಚಲಪಟ್ಟಂತಿದ್ದು, ಈ ವೇಳೆ ನಾಯಿ ಶಾಂತವಾಗಿತ್ತೇ ಎನ್ನುವುದು ಕಾಡುವ ಪ್ರಶ್ನೆಯಾಗಿದ್ದು, ಮನುಷ್ಯರನ್ನು ಕಚ್ಚುವ ನಾಯಿಯಂತೆ ಮನುಷ್ಯರೊಂದಿಗೆ ಬೆರೆಯುವ ನಾಯಿಗಳೂ ಇದೆ ಎನ್ನುವುದಕ್ಕೆ ಈ ನಾಯಿ ಸಾಕ್ಷಿಯಾಗಿದೆ.