ಪುತ್ತೂರು: ಬೆಟ್ಟಂಪಾಡಿ ಹಾಗೂ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅತಿಥಿ ಶಿಕ್ಷಕರ ನೇಮಕಾತಿ ಮಾಡುವಂತೆ ಆಗ್ರಹಿಸಿ ಎರಡೂ ಕಾಲೇಜಿನ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಶಾಸಕ ಅಶೋಕ್ ರೈ ಗೆ ಮನವಿ ಮಾಡಿದರು.

ಉಪನ್ಯಾಸಕರ ಕೊರತೆ ಇರುವ ಕಾರಣ ವ್ಯಾಸಂಗಕ್ಕೆ ತೊಂದರೆಯಾಗಿದೆ. ಈಗ ಕಾಲೇಜಿನಲ್ಲಿ ಪರ್ಮನೆಂಟ್ ಉಪನ್ಯಾಸಕರು ಮಾತ್ರ ಇದ್ದಾರೆ ಎಂದು ಶಾಸಕರಲ್ಲಿ ದೂರು ನೀಡಿದರು. ಈ ಬಗ್ಗೆ ವಿವರಣೆ ನೀಡಿದ ಶಾಸಕರು ಅತಿಥಿ ಉಪನ್ಯಾಸಕರ ನೇಮಕಾತಿ ವೇಳೆ ಗುಣಮಟ್ಟದ ಶಿಕ್ಷಕರನ್ನೇ ನೇಮಕ ಮಾಡಬೇಕೆಂಬ ಶಿಕ್ಷಣ ಇಲಾಖೆಯ ಆದೇಶ ಇರುತ್ತದೆ. ಕೇವಲ ಡಿಗ್ರಿಯಾದ ಮಾತ್ರಕ್ಕೆ ಉಪನ್ಯಾಸ ಮಾಡಲು ಸಾಧ್ಯವಿಲ್ಲ, ಪಿಎಚ್ ಡಿ ಸೇರಿದಂತೆ ಉನ್ನತ ವ್ಯಾಸಂಗ ಮಾಡಿರಬೇಕು ಎಂಬ ಕಾನೂನು ಜಾರಿಯಾದ ಕಾರಣ ಈ ಹಿಂದೆ ಅತಿಥಿ ಉಪನ್ಯಾಸಕರಾಗಿದ್ದವರು ಶಿಕ್ಷಣ ಇಲಾಖೆಯ ಹೊಸ ಆದೇಶದ ವಿರುದ್ದ ನ್ಯಾಯಾಲಯ ಮೆಟ್ಟಿಲೇರಿದ ಕಾರಣ ನೇಮಕಾತಿ ವಿಳಂಬವಾಗಿದೆ. ವಿದ್ಯಾರ್ಥಿಗಳ ಪರವಾಗಿ ನಾನು ಸಚಿವರ ಜೊತೆ ಮತ್ತು ಇಲಾಖೆ ಪ್ರಮುಖರ ಜೊತೆ ಮಾತನಾಡಿ 15ದಿನದೊಳಗೆ ಸಮಸ್ಯೆ ಇತ್ಯರ್ಥಮಾಡುವುದಾಗಿ ಭರವಸೆ ನೀಡಿದರು.