ರಾಮಕುಂಜ: ಕಡಬ ತಾಲೂಕಿನ ಕೊಲ ಗ್ರಾಮದ ವಳಕಡಮ ರಸ್ತೆ ಬದಿಯ ಪೊದೆ, ಗಿಡಗಂಟಿಗಳ ತೆರವು ಕಾರ್ಯವನ್ನು ಕೊಲ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಗ್ರಾಮಸ್ಥರು ಸೆ.28ರಂದು ಶ್ರಮದಾನದ ಮೂಲಕ ಮಾಡಿದರು.
ನೆಹರು ತೋಟದಿಂದ ವಳಕಡಮ ಭಜನಾ ಮಂದಿರದ ತನಕದ ರಸ್ತೆ, ವಳಕಡಮ ಶಾಲಾ ರಸ್ತೆ, ಹೀಗೆ ಸುಮಾರು ಮೂರು ಕಿಲೋ ಮೀಟರ್ ರಸ್ತೆಯ ಎರಡು ಬದಿಗಳಲ್ಲಿ ಅಪಾಯಕಾರಿಯಾಗಿ ಬೆಳೆದಿದ್ದ ಗಿಡಗಂಟಿಗಳನ್ನು ಹಾಗೂ ಪೊದೆಗಳನ್ನು ಗ್ರಾಮಸ್ಥರು ತೆರವುಗೊಳಿಸಿ ಸ್ವಚ್ಛ ಮಾಡಿದರು. ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಸ್ಥರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯ ಸೀತಾರಾಮ ಗೌಡ ಬಲ್ತಕುಮೇರು ಹಾಗೂ ಎ.ಪಿ.ಎಂ.ಸಿ ಮಾಜಿ ನಿರ್ದೇಶಕ ಶೀನಪ್ಪ ಗೌಡ ವಳಕಡಮ ಶ್ರಮದಾನದ ನೇತೃತ್ವ ವಹಿಸಿದ್ದರು.