ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 91ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಸೆ.29ರಂದು ಸಂಜೆ ನಡೆಯಿತು. ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲೊಟ್ಟು ಸಾಂಸ್ಕೃತಿಕ ಕಾರ್ಯಕ್ರಮ ಚಾಲನೆ ನೀಡಿ ಉದ್ಘಾಟಿಸಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ಪುತ್ತೂರಿನ ಶಾರದೋತ್ಸವವು ಪುತ್ತೂರು ಉತ್ಸವವಾಗಿ ಮೂಡಿಬಂದಿದೆ, ಶತಮಾನದ ವರ್ಷವಾಗಲು ಇನ್ನು 8 ವರ್ಷ ಬಾಕಿ ಇದೆ. ಆ 8ನೇ ವರ್ಷದ ಶಾರದೋತ್ಸವವು ಮೈಸೂರು ದಸರಾ ಕಾರ್ಯಕ್ರಮ ರೀತಿ ಪುತ್ತೂರು ಉತ್ಸವವಾಗಿ ಮೂಡಿಬರಲಿ, ಪುತ್ತೂರು ಪೇಟೆ ದೀಪಾಲಂಕಾರ ಶಾರದೋತ್ಸವ ಸಮಿತಿ ಉತ್ಸವವಾಗಿ ಮಾಡಿದೆ ಎಂದರು.
ಉತ್ಸವ ಸಮಿತಿ ಸಂಯೋಜಕ, ತೆರಿಗೆ ಸಲಹೆಗಾರರಾದ ಕೃಷ್ಣ ಎಂ. ಅಳಿಕೆ ಮಾತನಾಡಿ ಈ ವರುಷ ನನಗೆ ವೇದಿಕೆಯಲ್ಲಿ ಅವಕಾಶ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ಇತ್ತೀಚೆಗೆ ಶಾರದಾ ಭಜನಾ ಮಂದಿರದ ಶಾರದೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಮಾಡುವ ಪ್ರೇರಣೆ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತುರವರಿಗೆ ಸಿಕ್ಕಿದೆ. ಅವರು ಯಾವ ರೀತಿ ಕಲ್ಪನೆ ಮಾಡಿದ್ದಾರೆಯೋ ಅದೇ ರೀತಿ ಕಾರ್ಯಕ್ರಮ ನಡೆಯಲಿ, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯಿಂದ ಸಂಪೂರ್ಣ ಸಹಕಾರ ಸಿಕ್ಕಿದೆ ಅದು ನಿರಂತರವಾಗಿ ನಡೆಯಲಿ ಎಂದು ನುಡಿದರು.
ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ ಯಾರೆಲ್ಲ ನಿಶ್ಕಲ್ಮಶ ಮನಸ್ಸಿನಿಂದ ಶಾರದಾ ಮಾತೆಗೆ ಸೇವೆ ಸಲ್ಲಿಸಿದ್ದಾರೋ ಅವರೆಲ್ಲರ ಕಷ್ಟ ಕಾರ್ಪಣ್ಯಗಳು ಜಗನ್ಮಾತೆಯಾದ ಶ್ರೀ ಶಾರದಾ ದೇವಿಯು ಪರಿಹಾರ ಮಾಡಿಕೊಡಲಿ, ಅ.೨ರಂದು ನಡೆಯುವ ಶಾರದಾ ಶೋಭಾಯಾತ್ರೆ ಭಾರತದಾದ್ಯಂತ ಹೆಸರು ಪಡೆದಿದೆ. ಹೀಗಾಗಿ ನಮ್ಮ ಕಲ್ಪನೆ ಪ್ರಕಾರ ಮುಂದಿನ ೫ ವರ್ಷಗಳಲ್ಲಿ ಮಂಗಳೂರು ದಸರಾ ಮಾದರಿಯಂತೆ ಪುತ್ತೂರಿನಲ್ಲಿ ಶಾರದೋತ್ಸವ ನಡೆಯುತ್ತದೆ ಎಂಬ ಮಾತಿನಂತೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್, ಶಶಿಕುಮಾರ್ ರೈ ಬಾಲ್ಯೊಟ್ಟುರವರ ಪತ್ನಿ ಹರಿಣಾಕ್ಷಿ ಎಸ್. ರೈ, ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ ಉಪಸ್ಥಿತರಿದ್ದರು.
ಅತಿಥಿಗಳಿಗೆ ಸ್ಮರಣಿಕೆ ನೀಡಲಾಯಿತು. ನೀನಾ ರೈ ಸಹಕರಿಸಿದರು, ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಪುತ್ತೂರು ಇದರ ನಾಟ್ಯಗುರುಗಳಾದ ಗಣೇಶ್ ಪಾಲೆಚ್ಚಾರ್‌ರವರ ಶಿಷ್ಯರಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು.
ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಚಂಡಿಕಾಹೋಮ
ಪುತ್ತೂರು ಶಾರದೋತ್ಸವ ಪ್ರಯುಕ್ತ ಸೆ.30ರಂದು ಬೆಳಿಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಚಂಡಿಕಾ ಹೋಮ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆಯಾಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಂದಿರದ ಅಧ್ಯಕ್ಷರಾದ ಸೀತಾರಾಮ ರೈ ಕೆದಂಬಾಡಿಗುತ್ತ ಹೇಳಿದ್ದಾರೆ.