ರಾಮಕುಂಜ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘ ಶತಾಬ್ದಿ, ವಿಜಯದಶಮಿ ಕಾರ್ಯಕ್ರಮ

0

ರಾಮಕುಂಜ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಶತಾಬ್ದಿ ಹಾಗೂ ವಿಜಯದಶಮಿ ಕಾರ್ಯಕ್ರಮ ಅ.2ರಂದು ರಾಮಕುಂಜದಲ್ಲಿ ನಡೆಯಿತು.


ಬೌದ್ಧೀಕ್ ನೀಡಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ.ರವಿ ಮಂಡ್ಯ ಅವರು, ಜಗತ್ತಿಗೆ ಸಂಸ್ಕೃತಿಯ ಪಾಠ ಮಾಡಿರುವ, ಜ್ಞಾನ ನೀಡಿದ ವಿಶ್ವದ ಏಕೈಕ ಶ್ರೇಷ್ಠ ರಾಷ್ಟ್ರ ಭಾರತದಲ್ಲಿ ಒಗ್ಗಟ್ಟು, ಸಂವಿಧಾನ ಉಳಿಯಬೇಕೆಂಬ ಉದ್ದೇಶದಿಂದ ವಿಜಯದಶಮಿ ದಿನದಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಪ್ರಾರಂಭಿಸಿದ್ದು ಅದು ಈಗ ನೂರು ವರ್ಷ ತುಂಬವ ವೇಳೆಗೆ ಹೆಮ್ಮರವಾಗಿ ಬೆಳೆದು ಜಗತ್ತಿನ ಅತೀ ದೊಡ್ಡ ಸಂಘಟನೆಯಾಗಿ ಹೊರಹೊಮ್ಮಿದೆ ಎಂದರು.


ಈ ದೇಶವನ್ನು ಬಂಧಮುಕ್ತವಾಗಿಸಬೇಕೆಂದು ನಮ್ಮ ಹಿರಿಯರು ತ್ಯಾಗ ಬಲಿದಾನ ಮಾಡಿದರು. 1857ರ ಸಿಪಾಯಿ ದಂಗೆಯನ್ನು ಪ್ರಥಮ ಸ್ವಾಂತಂತ್ರ್ಯ ಸಂಗ್ರಾಮ ಎಂದು ಕರೆಯುತ್ತಾರೆ. ಆದರೆ ಮೊಘಲರು ಈ ದೇಶಕ್ಕೆ ಅಕ್ರಮಣ ಮಾಡಿದಾಗಲೇ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗಿದೆ. 500 ವರ್ಷಗಳ ಹಿಂದೆಯೇ ತುಳುನಾಡಿನ ಪುಣ್ಯದ ಮಣ್ಣಿನ ಉಳ್ಳಾಲದ ರಾಣಿ ಅಬ್ಬಕ್ಕ ಪ್ರಥಮ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ್ದಾರೆ. ಅಷ್ಟೊಂದು ದೀರ್ಘ ಕಾಲದ ಹೋರಾಟ ನಡೆದರೂ ನಮ್ಮಲ್ಲಿನ ಒಳಜಗಳ, ಭಾಷೆ, ಜಾತಿ, ಪ್ರಾಂತ್ಯ ಹೆಸರಲ್ಲಿ ನಮ್ಮಲ್ಲಿ ಭಿನ್ನಾಭಿಪ್ರಾಯದಿಂದ ಸ್ವತಂತ್ರ ದೇಶವಾಗಲು ವಿಳಂಬವಾಯಿತು. ಸ್ವಾತಂತ್ರ್ಯ ಸಿಕ್ಕಿದರೂ ಅದನ್ನು ಉಳಿಸಿಕೊಳ್ಳುವ ಐಕ್ಯಮತ ನಮ್ಮಲ್ಲಿ ಮೂಡಲು ಸಾಧ್ಯವಿಲ್ಲ ಎಂದು ಮನಗಂಡು ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಆರ್‌ಎಸ್‌ಎಸ್ ಪ್ರಾರಂಭಿಸಿದರು. ಹಿಂದತ್ವ ಅಂದ್ರೆ ನೆಲದ ಮಣ್ಣಿನ ಅಸ್ಮಿತೆ, ಹಿಂದು ಜಾತಿ ಅಲ್ಲ, ಅದು ಧರ್ಮ, ಜೀವನ ಪದ್ದತಿ, ಈ ದೇಶದ ಸಂಸ್ಕೃತಿ, ಸಂಸ್ಕಾರ, ಜಿವನ ಮೌಲ್ಯಗಳು ಹಿಂದುತ್ವದಲ್ಲಿ ಒಳಗೊಂಡಿರುತ್ತದೆ. ಈ ದೇಶದಲ್ಲಿರುವವರೆಲ್ಲರೂ ಯಾರು ದೇಶವನ್ನು ಮಾತೃಭೂಮಿ ಎಂದು ನಂಬುತ್ತಾರೋ, ಅದಕ್ಕೆ ರಾಷ್ಟ್ರ ಭಕ್ತಿಯನ್ನು ತೋರುತ್ತಾರೋ, ಇಲ್ಲಿನ ಮಹಾಪುರುಷರನ್ನು ಗೌರವಿಸುತ್ತಾರೋ ಅವರೆಲ್ಲಾ ಹಿಂದೂಗಳೇ ಆಗಿದ್ದಾರೆ. ಕೆಲವರು ಆರ್‌ಎಸ್‌ಎಸ್‌ನವರು ಸ್ವಾಂತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಲ್ಲ ಎಂದು ಹೇಳುತ್ತಾರೆ. ಸಂಘದ ಸಂಸ್ಥಾಪಕರಾದ ಹೆಡ್ಗೆವಾರ್ ಅವರು ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಜೈಲು ವಾಸ ಅನುಭವಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ದೇಶ ಒಗ್ಗಟ್ಟಾಗಿ ಉಳಿಯಬೇಕು ಎನ್ನವ ದೃಷ್ಠಿಯಿಂದ ಕಾಂಗ್ರೇಸ್‌ನಿಂದ ಹೊರ ಬಂದು ಸಂಘವನ್ನು ಪ್ರಾರಂಭಿಸಿದ್ದಾರೆ. ಆರ್‌ಎಸ್‌ಎಸ್ ನಾನಾ ಕಾರಣಗಳಿಗಾಗಿ ದೇಶದಲ್ಲಿ ಬ್ಯಾನ್ ಮಾಡಿದರೂ ಸಂಘ ಚಿನ್ನದಂತೆ ಬೆಳಗುತ್ತ್ರಾ ತನ್ನ ಸೇವಾ ಕಾರ್ಯದೊಂದಿಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ ಇಲ್ಲಿ ಆಳವಾಗಿ ಬೇರು ಬಿಟ್ಟಿದೆ, ದೇಶದಲ್ಲಿ 60 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಪ್ರಚಾರಕ್ಕೆ ಬಯಸದೆ ಸೇವಾ ಕಾರ್ಯ ಮಾಡುತ್ತಿದ್ದಾರೆ ಎಂದು ರವಿ ಮಂಡ್ಯ ಹೇಳಿದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಿನ್ಸಿಪಾಲ್ ಭವಾನಿಶಂಕರ ಪರಂಗಾಜೆ ಮಾತನಾಡಿ, ನಾನು ಆರ್‌ಎಸ್‌ಎಸ್‌ನಲ್ಲಿ ಭಾಗವಹಿಸದಿದ್ದರೂ ಸಂಘದ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಬಲ್ಲೇ. ಹಾಗಾಗಿ ಸಂಘಕ್ಕೆ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೇನೆ. ಸಂಘದ ನಿಸ್ವಾರ್ಥ ಸೇವೆ, ದೇಶ ಕಟ್ಟುವ ಕೈಂಕರ್ಯ, ದೇಶ ಪ್ರೇಮ, ದೇಶ ರಕ್ಷಣೆಗೆ ಕಟಿಬದ್ದವಾಗಿರುವುದು ಇಂದಿನ ಯುವಜನತೆಗೆ ಮಾದರಿಯಾಗಿದೆ ಎಂದರು.


ಕಡಬ ತಾಲೂಕು ಸಂಘ ಚಾಲಕ ದಿವಾಕರ್ ರಾವ್ ರಾಮಕುಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧೀಶ್ ಹಳೆನೇರೆಂಕಿ ಸ್ವಾಗತಿಸಿದರು. ಹರಿಪ್ರಸಾದ್ ರಾಮಕುಂಜ ವಂದಿಸಿದರು.

LEAVE A REPLY

Please enter your comment!
Please enter your name here