ಆಕರ್ಷಕ ಕೋಲಾಟ ಕುಣಿತದೊಂದಿಗೆ ಸಾಗಿದ ಶಾರದಾ ಮಾತೆಯ ಶೋಭಾಯಾತ್ರೆ
ಪುತ್ತೂರು: ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಹಾಗೂ ಶಾರದೋತ್ಸವ ಸಮಿತಿ ವತಿಯಿಂದ ಅ.2ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ 33ನೇ ವರ್ಷದ ಶ್ರೀ ಶಾರದೋತ್ಸವವು ಭಕ್ತರಲ್ಲಿ ಸಂಭ್ರಮ ಮನೆ ಮಾಡಿತು.
ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆದ ನವರಾತ್ರಿ ಉತ್ಸವವು ಸೆ.22ರಂದು ಪ್ರಾರಂಭಗೊಂಡು ಪ್ರತಿದಿನ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ವಿಶೇಷ ಕಾರ್ತಿಕ ಪೂಜೆ ಹಾಗೂ ದುರ್ಗಾಪೂಜೆ ನೆರವೇರಿತು. ಸೆ.26ರಂದು ಲಲಿತಾ ಪಂಚಮಿ, ತೆನೆಹಬ್ಬ, ಅ.1ರಂದು ಆಯುಧ ಪೂಜೆ ನೆರವೇರಿತು. ಅ.2ರಂದು ನಡೆದ ಶಾರದೋತ್ಸವದಲ್ಲಿ ಅನಂತರಾಮ ಮಡಕುಳ್ಳಾಯ ಮತ್ತು ರಾಧಾಕೃಷ್ಣ ಭಟ್ ಕಕ್ಕೂರುರವರ ಪೌರೋಹಿತ್ಯದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆಗೊಂಡ ಬಳಿಕ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಸಂಘ, ನಂತರ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕೈಕಾರ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ, ಸ್ಥಳೀಯರಿಂದ ರಸಮಂಜರಿ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಮಧ್ಯಾಹ್ನ ನಡೆದ ಸರಳ ಕಾರ್ಯಕ್ರಮದಲ್ಲಿ ದೇವಸ್ಥಾನದ ಎಲ್ಲ ಕಾರ್ಯಗಳಲ್ಲಿಯೂ ಸಹಕಾರ ನೀಡುತ್ತಿರುವ ಮಹೇಶ್ ಭಟ್ ಸುದನಡ್ಕರವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು. ಜನ್ಮಕ್ರಿಯೇಶನ್ ವತಿಯಿಂದ ನಿರ್ಮಾಣಗೊಂಡಿರುವ ಇರ್ದೆ ಶ್ರೀ ವಿಷ್ಣುಮೂರ್ತಿ’ ತುಳು ಭಕ್ತಿಗೀತೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು ಬಿಡುಗಡೆಗೊಳಿಸಿದರು. ಜನ್ಮ ಕ್ರಿಯೇಶನ್ನ ಡಾ| ಹರ್ಷ ಕುಮಾರ್ ರೈ ಉಪಸ್ಥಿತರಿದ್ದರು.
ಸಂಜೆ ಶಾರದಾ ಮಾತೆಗೆ ಮಹಾಪೂಜೆ, ಮಂತ್ರಾಕ್ಷತೆಯ ಬಳಿಕ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯು ಪ್ರಾರಂಭಗೊಂಡಿತು. ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಮಕ್ಕಳು, ಮಹಿಳೆಯರ ಕೋಲಾಟ ಕುಣಿತದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ವಿಶೇಷ ಮೆರುಗು ನೀಡಿತ್ತು. ಅಲ್ಲದೆ ಇರ್ದೆ ಶ್ರೀ ವಿಷ್ಣು ಸಿಂಗಾರಿ ಮೇಳದವರಿಂದ ಚೆಂಡೆ ವಾದನಚೆಂಡೆ ವಾದನ, ಇರ್ದೆ ಶಿವಾಜಿ ಫ್ರೆಂಡ್ಸ್ ಇವರಿಂದ ಆಕರ್ಷಕ ಟ್ಯಾಬ್ಲೋಗಳೊಂದಿಗೆ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ಸಾಗಿ ಬಂದಿದೆ. ದೇವಾಲಯದಿಂದ ಹೊರಟ ಶೋಭಾಯಾತ್ರೆಯು ಇರ್ದೆ-ಜೋಡುಮಾರ್ಗ, ಪೇರಲ್ತಡ್ಕ, ಕದಿಕೆ ಚಾವಡಿ ಮಾರ್ಗವಾಗಿ ಸಂಚರಿಸಿ ಬೆಂದ್ರ್ತೀರ್ಥದಲ್ಲಿ ವಿಗ್ರಹದ ಜಲಸ್ಥಂಭನದ ಬಳಿಕ ರಾತ್ರಿ ದೇವಳದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯೊಂದಿಗೆ 33ನೇ ವರ್ಷದ ಶಾರದೋತ್ಸವವು ಸಂಪನ್ನಗೊಂಡಿತು.
ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ, ಇರ್ದೆ ವಿಷ್ಣಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು, ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಶೀನಪ್ಪ ನಾಯ್ಕ ಬದಂತಡ್ಕ, ಅಧ್ಯಕ್ಷ ಹರೀಶ ಉಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಸತೀಶ್ ಆಚಾರ್ಯ ಪೈಂತಿಮುಗೇರು, ಕೋಶಾಧಿಕಾರಿ ನಮಿತಾ ಬೈಲಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಬಾಲ್ಯೊಟ್ಟು ಗುತ್ತು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಶಾರದೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಶಾರದೋತ್ಸವದಲ್ಲಿ ಭಾಗವಹಿಸಿದ್ದರು.