ಪುತ್ತೂರು: ರೋಟರಿ ಕ್ಲಬ್ ಪುತ್ತೂರು ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ‘ಗಾಂಧಿ ಎದುರಿನ ಪ್ರಶ್ನೆಗಳು’ ಎನ್ನುವ ವಿಷಯದ ಮೇಲೆ ಪ್ರಸಿದ್ಧ ಚಿಂತಕರಾದ ಅರವಿಂದ ಚೊಕ್ಕಾಡಿರವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಅ.3 ರಂದು ರೋಟರಿ ಜಿ.ಎಲ್ ಸಭಾಭವನದಲ್ಲಿ ಜರಗಿತು.
ಚಿಂತಕರಾದ ಅರವಿಂದ ಚೊಕ್ಕಾಡಿರವರು ಮಾತನಾಡಿ, ಗಾಂಧೀಜಿಯನ್ನು ವೈಚಾರಿಕವಾಗಿ ಕನೆಕ್ಟ್ ಮಾಡುವ ಕೆಲಸವಿನ್ನೂ ಮಾಡಿಲ್ಲ, ಗಾಂಧಿಯನ್ನು ನೋಡಬೇಕಾದದು ಒಬ್ಬ ರಾಜಕಾರಣಿಯಾಗಿಯಲ್ಲ, ತತ್ವವನ್ನೇ ತಂತ್ರವಾಗಿ ಸ್ವೀಕರಿಸಿದ ವ್ಯಕ್ತಿಯಾಗಿ ಎಂದರು ಅರವಿಂದ ಗಾಂಧೀಜಿ ಆರಂಭಿಸಿದ ಚರಕ ಚಳುವಳಿ, ಬ್ರಿಟಿಷರ ಆರ್ಥಿಕತೆಯನ್ನ ಬುಡಮೇಲು ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಗಾಂಧಿ ಕಲ್ಪಿಸಿಕೊಂಡ ಸ್ವಾತಂತ್ರ್ಯ ಇನ್ನೂ ಬಂದಿಲ್ಲ. ಗಾಂಧಿಯ ಅಹಿಂಸ ಚಳುವಳಿ ಆ ಕಾಲಕ್ಕೆ ಅಗತ್ಯವಿತ್ತು. ನಿಮ್ಮ ಹಿಂಸೆಗೆ ನನ್ನ ಅಹಿಂಸೆಯೇ ಉತ್ತರ ಎಂದು ಬ್ರಿಟಿಷರನ್ನು ದಿಟ್ಟವಾಗಿ ಎದುರಿಸಿದ ಗಾಂಧಿ ಬ್ರಿಟಿಷರ ನಾಗರಿಕ ಪ್ರಜ್ಞೆಯನ್ನು ಗಾಂಧಿ ಎದುರಿಸಿದ್ದು ಸಂಸ್ಕೃತಿ ಪ್ರಜ್ಞೆಯಿಂದ ಎಂದು ಮಾರ್ಮಿಕವಾಗಿ ನುಡಿದರು. ರಾಮನ ಆದರ್ಶ ಪಾಲಿಸಿಕೊಂಡು ಬಂದ ಗಾಂಧಿ ಎಲ್ಲಾ ಮನುಷ್ಯರನ್ನು ಪ್ರೀತಿಸಿದರು ಎಂದು ಅಭಿಪ್ರಾಯಪಟ್ಟರು.
ಕ್ಲಬ್ ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಪತಿ ರಾವ್, ನಿಯೋಜಿತ ಅಧ್ಯಕ್ಷ ಪ್ರೊ.ದತ್ತಾತ್ರೇಯ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯ ದಾಮೋದರ್ ಆಶಯಗೀತೆಯನ್ನು ಹಾಡಿದರೆ, ಪೂರ್ವಾಧ್ಯಕ್ಷ ಝೇವಿಯರ್ ಡಿ’ಸೋಜ ಅತಿಥಿಗಳ ಪರಿಚಯ ಮಾಡಿದರು. ಕಾರ್ಯದರ್ಶಿ ಸುಬ್ಬಪ್ಪ ಕೈಕಂಬ ವರದಿ ವಾಚಿಸಿದರು. ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಸ್ವಾಗತಿಸಿ, ಪೂರ್ವಾಧ್ಯಕ್ಷ ಜೈರಾಜ್ ಭಂಡಾರಿ ವಂದಿಸಿದರು. ರೋಟರಿ ಕ್ಲಬ್ ಪುತ್ತೂರು ಇದರ ಸದಸ್ಯರು ಹಾಗೂ ಅರವಿಂದ ಚೊಕ್ಕಾಡಿ ಅವರ ಅಭಿಮಾನಿ ಬಳಗದವರು ಈ ಸಂದರ್ಭದಲ್ಲಿ ಹಾಜರಿದ್ದರು.