ಯೋಜನೆಯ ಎಲ್ಲಾ ಕಾರ್ಯಕ್ರಮಗಳು ಸಮಾಜಕ್ಕೆ ಪೂರಕವಾಗಿರುತ್ತವೆ: ಹರಿಣಾಕ್ಷಿ ಜೆ.
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಪುತ್ತೂರು ವಲಯದ ಪಡೀಲು ಕಾರ್ಯ ಕ್ಷೇತ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಮೈಮುನಾರವರು ವಹಿಸಿದ್ದರು. ವಕೀಲರಾದ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಯಿಂದ ಆಗುವಂತಹ ಕಾರ್ಯಕ್ರಮಗಳು ಸಮಾಜಕ್ಕೆ ಹಾಗೂ ಜನರಿಗೆ ಪೂರಕವಾಗಿದೆ ಆರೋಗ್ಯ ತಪಾಸಣ ಕಾರ್ಯಕ್ರಮ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಉಪಯುಕ್ತವಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಆರೋಗ್ಯದ ಕಡೆಗೆ ಹೆಚ್ಚಿನ ಗಮನವಹಿಸಿ ಎಂದು ಹೇಳಿ ಶುಭ ಹಾರೈಸಿದರು.

ಯೋಜನಾಧಿಕಾರಿಗಳಾದ ಶಶಿಧರ್ರವರು ಜ್ಞಾನವಿಕಾಸ ಕಾರ್ಯಕ್ರಮದಿಂದ ಅದೆಷ್ಟೋ ಮಹಿಳೆಯರು ತಮ್ಮನ್ನು ತಾವು ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮಲ್ಲಿ ಬದಲಾವಣೆ ಹಾಗೂ ತಮ್ಮ ಕುಟುಂಬದಲ್ಲಿಯೂ ಬದಲಾವಣೆಗಳನ್ನು ತಂದು ಸುಸ್ಥಿರತೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಯೋಜನೆಯ ಇಂತಹ ಹಲವಾರು ಕಾರ್ಯಕ್ರಮ ಅದೆಷ್ಟೋ ಜನರ ಬದುಕಿಗೆ ದಾರಿದೀಪವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೌನ್ಸಿಲರ್ ಪ್ರೇಮಲತಾ, ಲಯನ್ಸ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷೆ ಪ್ರೇಮಲತಾ ರಾವ್, ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷ ಹರಿಪ್ರಸಾದ್, ಎ.ಜೆ ಹಾಸ್ಟಿಟಲ್ ಆಂಡ್ ರಿಸರ್ಚ್ ಸೆಂಟರ್ ಮಂಗಳೂರು ಇಲ್ಲಿನ ಮೆಡಿಕಲ್ ಸೋಶಿಯಲ್ ವರ್ಕರ್ ಕೃತಿ, ಜ್ಞಾನವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು, ನವಜೀವನ ಸಮಿತಿಯ ಸದಸ್ಯರು, ಲಯನ್ಸ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಶ್ರಾವಣ ಸ್ವಾಗತಿಸಿದರು, ಕೇಂದ್ರದ ಸಂಯೋಜಕ ಲಕ್ಷ್ಮಿ ವಂದಿಸಿದರು. ಆರೋಗ್ಯ ತಪಾಸಣೆಯನ್ನು ಎ.ಜೆ ಹಾಸ್ಟಿಟಲ್ ಆಂಡ್ ರಿಸರ್ಚ್ ಸೆಂಟರ್ ಮಂಗಳೂರು ಇಲ್ಲಿನ ತಜ್ಞ ವೈದ್ಯರುಗಳು ನೆರವೇರಿಸಿ ಕೊಟ್ಟರು. ಆರೋಗ್ಯ ತಪಾಸಣೆಯಲ್ಲಿ ಬಿಪಿ, ಶುಗರ್ ಟೆಸ್ಟ್, ಇಎನ್ಟಿ, ಕಣ್ಣಿನ ತಪಾಸಣೆ, ಇಸಿಜಿ, ಸ್ತ್ರೀ ರೋಗಗಳಿಗೆ ಸಂಬಂದಿಸಿದ ತಪಾಸಣೆಯನ್ನು ಮಾಡಲಾಯಿತು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.